ಜಮಖಂಡಿ ನಗರದ ಬಸವ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಘಟಕಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕಸಾಪ ಮಾಜಿ ಅಧ್ಯಕ್ಷ ಮನು ಬಳಿಗಾರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ಅದೇ ಶ್ರೇಷ್ಠ ಭಾಷೆ ಎಂಬ ಭ್ರಮೆಯಲ್ಲಿದ್ದೇವೆ. ಕನ್ನಡ ಮಾತೃಭಾಷೆಯ ಹಿರಿಮೆಯನ್ನು ಯುವ ಪೀಳಿಗೆ ಮರೆಯುವಂತಾಗಿದೆ. ನಾಡು, ನುಡಿ, ಸಂಸ್ಕೃತಿಯ ರಕ್ಷಣೆಗೆ ಸರ್ಕಾರ ರಾಜ್ಯದಲ್ಲಿ ಪ್ರಾಥಮಿಕ ಹಂತದವರೆಗಿನ ಶಿಕ್ಷಣವನ್ನು ಕನ್ನಡದಲ್ಲಿ ಕಡ್ಡಾಯಗೊಳಿಸಬೇಕು ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಡಾ.ಮನು ಬಳಿಗಾರ ಒತ್ತಾಯಿಸಿದರು.ನಗರದ ಬಸವ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಘಟಕಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಕನ್ನಡದಲ್ಲಿ ಓದಿದ ಅನೇಕ ಸಾಧಕರು ವಿಶ್ವದಲ್ಲಿ ಛಾಪು ಮೂಡಿಸಿದ್ದಾರೆ. 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. 1 ರಿಂದ 10ನೇ ಶತಮಾನದವರೆಗೆ ಅತ್ಯಂತ ಪ್ರಚಲಿತ ಲಿಪಿವುಳ್ಳ ಭಾಷೆ ಕನ್ನಡವಾಗಿತ್ತು. ಆಂಗ್ಲ ಭಾಷೆಗಿಂತ 200 ವರ್ಷ ಹಿರಿಯ ಭಾಷೆ ನಮ್ಮದು ಎಂದು ಹೇಳಿದರು.

ವಿಶ್ವದ ಯಾವ ಭಾಷೆಯಲ್ಲೂ ಕನ್ನಡ ಸಾಹಿತ್ಯ ರಚನೆಯಾಗಿಲ್ಲ. 12ನೇ ಶತಮಾನದ ವಚನ ಸಾಹಿತ್ಯ ಸಮಾನತೆ ಹಾಗೂ ಸ್ತ್ರೀ ಸ್ವಾತಂತ್ರ್ಯದ ಸಂದೇಶ ಸಾರಿದೆ. ಶಿಲ್ಪಕಲೆಯಲ್ಲೂ ಕನ್ನಡಿಗರ ಕೊಡುಗೆ ಅಪಾರವಾಗಿದೆ. ಜಿಲ್ಲೆಯ ಬದಾಮಿ, ಐಹೊಳೆ, ಪಟ್ಟದಕಲ್ಲಿನಲ್ಲಿ ವಿಶ್ವ ಪಾರಂಪರಿಕ ತಾಣಗಳಿವೆ. ಕನ್ನಡದ ಹಿರಿಮೆ ತಿಳಿದುಕೊಳ್ಳಬೇಕಿದೆ. ಝಾನ್ಸಿ ರಾಣಿಗಿಂತ ಮೊದಲು ಕಿತ್ತೂರು ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ, ಈಗಿನ ಐಟಿ-ಬಿಟಿ ಕ್ಷೇತ್ರಗಳಲ್ಲಿ ಕನ್ನಡಿಗರೇ ಹೆಚ್ಚಾಗಿದ್ದಾರೆ. ಕಳೆದ 16 ವರ್ಷಗಳಿಂದ ಒಂದೂ ಜ್ಞಾನಪೀಠ ಪ್ರಶಸ್ತಿ ಬಂದಿಲ್ಲ. ಇದನ್ನೆಲ್ಲ ಅರಿತು ಕನ್ನಡ ಕಟ್ಟುವ ಕೆಲಸವಾಗಬೇಕು ಎಂದು ಹೇಳಿದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಸರ್ಕಾರ ಕನ್ನಡದ ಕೆಲಸ ತಿರಸ್ಕರಿಸಬಾರದು. ಜಿಲ್ಲಾ ಸಮ್ಮೇಳನಕ್ಕೆ ಯಾವುದೇ ಅನುದಾನ ನೀಡದಿರುವುದು ಈಗಿನ ಸರ್ಕಾರದ ನಿರ್ಲಕ್ಷ್ಯವಾಗಿದೆ. ಕನ್ನಡಕ್ಕಾಗಿ ಪ್ರತಿಯೊಬ್ಬರೂ ದುಡಿಯಬೇಕು ಮನೆಯಿಂದಲೇ ಕನ್ನಡದ ಸೇವೆ ನಡೆಯಬೇಕು ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಡಾ.ಸಂಗಮೇಶ ಮಟೋಳಿ ಮಾತನಾಡಿ, ಕನ್ನಡದ ಅಳಿವು ಅಸಾಧ್ಯ. ಆದರೆ ಬದಲಾವಣೆ ಅವಶ್ಯಕವೆಂದರು. ಭಾಷಾ ಸಂವಿಧಾನ ರಚನೆಯಾಗಬೇಕು. ಕನ್ನಡಕ್ಕೆ ರಾಷ್ಟ್ರೀಯ ಸ್ಥಾನಮಾನವಿದ್ದರೂ ಅನ್ನದ ಭಾಷೆಯಾಗಿಲ್ಲ, ಕನ್ನಡದಲ್ಲಿ ಓದಿದವರಿಗೆ ಸರ್ಕಾರಿ ಸೇವೆಗಳು ದೊರಕುವಂತಾಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಗದೀಶ ಗುಡುಗುಂಟಿ ಮಾತನಾಡಿ, ಕನ್ನಡವನ್ನು ವ್ಯಾಕರಣ ಬದ್ಧವಾಗಿ ಕಲಿತು ಇತರ ಭಾಷೆಗಳನ್ನೂ ಕಲಿಯಬೇಕು ಎಂದು ಹೇಳಿದರು.

ಅಥಣಿಯ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ಕನ್ನಡದ ಬಗ್ಗೆ ಅಭಿಮಾನ ಬೆಳೆಸಿ ನಾಡು-ನುಡಿಯನ್ನು ಉಳಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಆಶಯ ಭಾಷಣ ಮಾಡಿದರು, ಸಮ್ಮೇಳನದ ಅಂಗವಾಗಿ ದಶದೀಪ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಲಾಯಿತು.

ಮಾಜಿ ವಿಧಾನ ಪರಿಷತ್‌ ಸದಸ್ಯ ಜಿ.ಎಸ್‌. ನ್ಯಾಮಗೌಡ, ಡಾ.ಎಚ್.ಡಿ. ದಡ್ಡಿ, ಶಿವಾನಂದ ಪಾಟೀಲ, ತಾತಾಸಾಹೇಬ ಬಾಂಗಿ, ನಾಗಪ್ಪ ಸನದಿ, ಪ್ರೊ ಬಸವರಾಜ ಕಡ್ಡಿ, ಕಾಡು ಮಾಳಿ, ಸುಶೀಲಕುಮಾರ ಬೆಳಗಲಿ, ಡಾ.ಶಾರದ ಮುಳ್ಳೂರ, ರಾಜೇಶ್ವರಿ ಹಿರೇಮಠ, ಬಸವರಾಜ ಯಡ್ಡಹಳ್ಳಿ, ರುದ್ರಗೌಡ ಪಾಟೀಲ, ಎನ್.ಎಸ್. ದೇವರವರ, ಪರಶುರಾಮ ಮಹಾರಾಜನ್ನವರ, ದೇವಲ ದೇಸಾಯಿ, ಏಗಪ್ಪ ಸವದಿ, ಕೆ.ಟಿ. ಬಾಳಿ ಸೇರಿ ಹಲವರು ವೇದಿಕೆಯಲ್ಲಿದ್ದರು. ತಾಲುಕು ಕಸಾಪ ಅಧ್ಯಕ್ಷ ಸಂತೋಷ ತಳಕೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಿತಾ ಶಿರಗುಪ್ಪಿ ನಿರೂಪಿಸಿದರು. ಮಾಹಾಂತೇಶ ನರಸನಗೌಡರ ವಂದಿಸಿದರು.

ಸಮ್ಮೇಳನದ ನಿರ್ಣಯಗಳು:ಜಮಖಂಡಿ ಜಿಲ್ಲೆ, ಸಾವಳಗಿ ತಾಲುಕು ರಚನೆಯಾಗಬೇಕು, ಜಮಖಂಡಿ ಲೋಕಸಭಾ ಮತ ಕ್ಷೇತ್ರ ರಚನೆ, ನಗರದ ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ಜಮಖಂಡಿ ವಿಶ್ವವಿದ್ಯಾಲಯವೆಂದು ಮರುನಾಮಕರಣ, ಕನ್ನಡ ಭವನ ನಿರ್ಮಾಣ, ಪಟವರ್ಧನ ಸಂಸ್ಥಾನಿಕರ ಪುತ್ಥಳಿ ಅನಾವರಣ, ಹುನ್ನೂರಿನಿಂದ ವಿಜಯಪುರ ರಸ್ತೆ ಸಂಪರ್ಕಿಸುವ ಬೈಪಾಸ್‌ ರಸ್ತೆ ನಿರ್ಮಾಣ, ನಗರದಲ್ಲಿ ಕ್ರೀಡಾಶಾಲೆ ಹಾಗೂ ಸಂಚಾರ ಪೊಲೀಸ್‌ ಠಾಣೆ ಸ್ಥಾಪನೆ, ಕೈಗಾರಿಕಾ ಪ್ರದೇಶ ಸ್ಥಾಪನೆ ಹಾಗೂ ಆಲಮಟ್ಟಿ ಹಿನ್ನೀರಿನ ಸಂತ್ರಸ್ತರ ಸಮಸ್ಯೆ ಪರಿಹಾರ ಸೇರಿದಂತೆ 12 ಪ್ರಮುಖ ನಿರ್ಣಯ ಅಂಗೀಕರಿಸಲಾಯಿತು.---ಬಾಕ್ಸ್---

ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಭಟನೆ ಬಿಸಿ: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸೂಕ್ತ ಗೌರವ ಸಲ್ಲಿಸಿಲ್ಲ ಎಂದು ಆರೋಪಿಸಿ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಕಪ್ಪು ಬಟ್ಟೆ ಧರಿಸಿ, ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು. ಅಧ್ಯಕ್ಷರ ಸಾಧನೆಗಳು, ಅವರು ಬರೆದಿರುವ ಸಾಹಿತ್ಯ ಕೃತಿಗಳು ಹಾಗೂ ಅವರಿಗೆ ದೊರೆತಿರುವ ಸನ್ಮಾನಗಳ ಕುರಿತು ಬಿಳಿ ಕಾಗದ ಹಿಡಿದು ಗಮನ ಸೆಳೆದರು. ಕಸಾಪ ಅಧ್ಯಕ್ಷ ಸಂತೋಷ ತಳಕೇರಿ ಅವರಿಗೆ ಕನ್ನಡ ಸಾಹಿತ್ಯದ ಅರಿವಿಲ್ಲ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಸೂಕ್ತ ಗೌರವ ನೀಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿ, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮದ ವೇದಿಕೆಯ ಬಳಿ ಬರಲು ಯತ್ನಿಸಿದ ಪ್ರತಿಭಟನಾ ಕಾರರನ್ನು ಪೊಲೀಸರು ವಶಕ್ಕೆ ಪಡೆದು ವಾತಾವರಣ ತಿಳಿಗೊಳಿಸಿದರು.