ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಕನ್ನಡದಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದನೀಯ ಕಾರ್ಯವನ್ನು ಮಾಡಿದೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ನಾಡಿನ ಯುವ ಪೀಳಿಗೆ ಕನ್ನಡದ ಕೈಂಕರ್ಯದಲ್ಲಿ ತೊಡಗಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಕನ್ನಡದ ಅಭಿಮಾನ ಉಳಿದರೆ ಭಾಷೆ ಉಳಿದಂತೆ ಎಂದು ಉದ್ಯಮಿ, ಸಾಹಿತಿ ಯೋಗೀಶ್ ಭಟ್ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಘಟಕ ಮತ್ತು ಚೈತನ್ಯ ಯುವ ವೃಂದ ಹೆಬ್ರಿ ಸಹಯೋಗದೊಂದಿಗೆ 2023- 24ನೇ ಶೈಕ್ಷಣಿಕ ವರ್ಷದಲ್ಲಿ ಹೆಬ್ರಿ ತಾಲೂಕು ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ ಪೂರ್ಣ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಭಾನುವಾರ ಹೆಬ್ರಿಯ ಚೈತನ್ಯ ಸಭಾಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.ಸಂಪನ್ಮೂಲ ವ್ಯಕ್ತಿ ಸೀತಾನದಿ ವಿಠಲ ಶೆಟ್ಟಿ ಮಾತನಾಡಿ, ಕನ್ನಡದಲ್ಲಿ ಪೂರ್ಣ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ ವಿದ್ಯಾರ್ಥಿಗಳು ಅಭಿನಂದನಾರ್ಹರು. ಕನ್ನಡ ಭಾಷೆಯ ಉನ್ನತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವ ಪೂರ್ಣವಾದುದು. ಅಂಕದ ಜೊತೆಯಲ್ಲಿ ಕನ್ನಡದ ಅಭಿಮಾನವನ್ನು ತೋರ್ಪಡಿಸಿದ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ. ಹೆಬ್ರಿ ತಾಲೂಕು ಘಟಕ ಅಧ್ಯಕ್ಷ ಶ್ರೀನಿವಾಸ ಭಂಡಾರಿ ವಹಿಸಿದ್ದರು. ಜವಳಿ ಉದ್ಯಮಿ ಎಚ್.ಯೋಗೀಶ್ ಭಟ್, ಉಡುಪಿ ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯ ನುಡಿಗಳನ್ನಾಡಿದರು.ಅತಿಥಿಗಳಾಗಿ ಉಡುಪಿ ಜಿಲ್ಲಾ ಕ.ಸಾ.ಪ. ಕೋಶಾಧಿಕಾರಿ ಮನೋಹರ ಪಿ., ಪದಾಧಿಕಾರಿ ನರಸಿಂಹ ಮೂರ್ತಿ, ಚೈತನ್ಯ ಯುವ ವೃಂದದ ಅಧ್ಯಕ್ಷ ಪ್ರವೀಣ್ ಕುಮಾರ್, ಗೌರವಾಧ್ಯಕ್ಷ ಎಚ್.ಜನಾರ್ದನ್, ಹೆಬ್ರಿ ತಾಲೂಕು ಕ.ಸಾ.ಪ. ಗೌರವ ಕಾರ್ಯದರ್ಶಿ ಪ್ರವೀಣ ಕುಮಾರ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಾರ್ಕಳ ವಲಯ ಅಧ್ಯಕ್ಷ ರಮಾನಂದ ಶೆಟ್ಟಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹೆಬ್ರಿ ತಾಲೂಕು ಅಧ್ಯಕ್ಷ ಹರೀಶ ಪೂಜಾರಿ ಉಪಸ್ಥಿತರಿದ್ದರು.
* ವಿದ್ಯಾರ್ಥಿಗಳಿಗೆ ಅಭಿನಂದನೆಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಲಾವಣ್ಯ, ಪನ್ನಿಧಿ, ಸುಶ್ಮಿತಾ, ಕುಚ್ಚೂರು ಪ್ರೌಢಶಾಲೆಯ ಸೌಮ್ಯ, ಮುನಿಯಾಲು ಕೆ.ಪಿ.ಎಸ್.ನ ಸ್ನೇಹ, ಚಾರ ನವೋದಯ ಶಾಲೆಯ ಇಂಚರ, ರಮ್ಯ, ಸ್ಮೃತಿ ಮರಾಠೆ, ಸುಭೀಕ್ಷಾ, ಎಸ್.ಆರ್. ಪದವಿಪೂರ್ವ ಕಾಲೇಜಿನ ಅಕ್ಷಯ ಡಿ., ಅನ್ವಿತಾ ಜಿ., ದೀಕ್ಷಾ, ಶಶಿಧರ ಪೂಜಾರಿ ಮತ್ತು ಅಮೃತ ಭಾರತಿ ಪದವಿಪೂರ್ವ ಕಾಲೇಜಿನ ಅನ್ವಿತಾ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.ಕ.ಸಾ.ಪ. ಪದಾಧಿಕಾರಿ ವೀಣಾ ಆರ್. ಭಟ್ ಸ್ವಾಗತಿಸಿದರು. ಚೈತನ್ಯ ಯುವ ವೃಂದದ ಪ್ರಸಾದ್ ಶೆಟ್ಟಿ ವಂದಿಸಿದರು. ಕ.ಸಾ.ಪ. ಹೆಬ್ರಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಮಂಜುನಾಥ ಕೆ. ಶಿವಪುರ ಕಾರ್ಯಕ್ರಮ ನಿರೂಪಿಸಿದರು.