ಆಡಳಿತದಲ್ಲಿ ಕನ್ನಡವನ್ನು ಬಳಸುವ ಅಧಿಕಾರಿಗಳನ್ನು ಗುರುತಿಸಿ ಸನ್ಮಾನಿಸುವ ಕೆಲಸಗಳು ಜಿಲ್ಲಾ ಮಟ್ಟದಲ್ಲಿ ಆಗಬೇಕು. ಕನ್ನಡವನ್ನು ಉಳಿಸುವ ಕಾರ್ಯವನ್ನು ಎಲ್ಲರೂ ಒಗ್ಗಟ್ಟಾಗಿ ನಿರ್ವಹಿಸಬೇಕಿದೆ. ರಾಜ್ಯದ ಮುಖ್ಯಮಂತ್ರಿಗಳು ಸಹ ಕನ್ನಡದಲ್ಲಿಯೇ ಆಡಳಿತ ಕಡತಗಳನ್ನು ನಿರ್ವಹಣೆ ಮಾಡುತ್ತಾರೆ ಹಾಗೂ ಸಹಿಯನ್ನು ಕನ್ನಡದಲ್ಲಿಯೇ ಮಾಡುತ್ತಾರೆ .

ಕನ್ನಡಪ್ರಭ ವಾರ್ತೆ ಮಂಡ್ಯ

ಪೋಷಕರಲ್ಲಿ ಕನ್ನಡಪರ ಮನಸ್ಥಿತಿಯಿದ್ದಾಗ ಮಾತ್ರ ಕನ್ನಡ ಕಲಿಯುವವರ ಸಂಖ್ಯೆ ಹೆಚ್ಚಾಗುತ್ತದೆ. ಮಕ್ಕಳು ಪ್ರಾರಂಭಿಕ ಹಂತದಲ್ಲಿಯೇ ಕನ್ನಡ ಕಲಿಯಲು ಸಹಕಾರವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅಭಿಪ್ರಾಯಪಟ್ಟರು

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷಾ ಕಲಿಕಾ ಅಧಿನಿಯಮದ ಪ್ರಕಾರ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಮೊದಲ ಭಾಷೆಯಾಗಿರಬೇಕು. ಉರ್ದು ಶಾಲೆಗಳಲ್ಲೂ ಕನ್ನಡವನ್ನು ಸಹ ಭಾಷೆಯ ವಿಷಯವಾಗಿಡಬೇಕು ಎಂದು ಹೇಳಿದರು.

ನಿಯಮ ಉಲ್ಲಂಘಿಸಿದವರೆಷ್ಟು, ದಂಡ ವಿಧಿಸಿದ್ದೆಷ್ಟು?:

ಕೈಗಾರಿಕೆ ವಾಣಿಜ್ಯ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಶೇ ೬೦ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸಿರಬೇಕು. ಇಲ್ಲವಾದಲ್ಲಿ ಆ ಅಂಗಡಿ ಮತ್ತು ಕೈಗಾರಿಕೆಗಳಿಗೆ ದಂಡ ವಿಧಿಸಿ ಪರವಾನಗಿಯನ್ನು ರದ್ದು ಮಾಡಲಾಗುವುದು ಎಂದ ಅವರು, ನಗರಸಭೆ ಅಧಿಕಾರಿಗಳು ಇಲ್ಲಿಯವರೆಗೂ ಜಿಲ್ಲೆಯಲ್ಲಿ ಶೇ.೬೦ರಷ್ಟು ಕನ್ನಡ ನಾಮಫಲಕಗಳ ಅಳವಡಿಕೆ ನಿಯಮವನ್ನು ಉಲ್ಲಂಘಿಸಿದವರ ಸಂಖ್ಯೆ ಹಾಗೂ ಇಲ್ಲಿಯವರೆಗೂ ವಿಧಿಸಲಾದ ದಂಡದ ಕುರಿತು ಮಾಹಿತಿ ನೀಡುವಂತೆ ಸೂಚಿಸಿದರು.

ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳು ಹಾಗೂ ಅಂಗಡಿಗಳಲ್ಲಿ ಶೇ.೬೦ರಷ್ಟು ನಾಮಫಲಕಗಳು ಕನ್ನಡದಲ್ಲಿ ಇಲ್ಲವಾದಲ್ಲಿ ಸರಿಪಡಿಸಿಕೊಳ್ಳಲು ೧೫ ದಿನದವರೆಗೆ ಗಡುವು ನೀಡಬೇಕು. ನಂತರವೂ ಸರಿಪಡಿಸದಿದ್ದರೆ ೫೦೦೦ ರು. ದಂಡ, ನಂತರವೂ ಬದಲಾಯಿಸದಿದ್ದರೆ ೧೦,೦೦೦ ರು. ದಂಡ ವಿಧಿಸಲಾಗುವುದು. ಕನ್ನಡವನ್ನು ಭೀತಿಯಿಂದಲ್ಲ, ಪ್ರೀತಿಯಿಂದ ಇತರರಿಗೆ ಕಲಿಸಬೇಕು. ನೆರೆ ರಾಜ್ಯಗಳಿಂದ ಬಂದ ವ್ಯಾಪಾರಿಗಳು ಕನ್ನಡ ಕಲಿಯುವಂತೆ ನಾವು ಅವರೊಡನೆ ಕನ್ನಡದಲ್ಲಿ ವ್ಯವಹರಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲೆಯಲ್ಲಿರುವ ಅನಕ್ಷರಸ್ಥರ ಪಟ್ಟಿಯನ್ನು ಪಡೆದು ಅಂತಹ ಅನಕ್ಷರಸ್ಥರಿಗೆ ಗ್ರಾಮ ಮಟ್ಟದಲ್ಲಿ ಕನ್ನಡ ಕಲಿಸುವ ಹಾಗೂ ಸಹಿ ಹಾಕಿಸುವ ಅಭಿಯಾನ ನಡೆಸಬೇಕು. ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆಯಾದ ಮಂಡ್ಯದಲ್ಲಿಯೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ೩೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕನ್ನಡ ಬಾರದ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಸಮಸ್ಯೆ:

ವಿವಿಧ ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕನ್ನಡ ಬಾರದೆ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಸಭೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಬ್ಯಾಂಕಿನ ಸಂಬಂಧಿತ ಎಲ್ಲಾ ಚಟುವಟಿಕೆಗಳು, ಕಡತಗಳು ಮತ್ತು ಸಿಬ್ಬಂದಿ ಗುರುತಿನ ಚೀಟಿಯನ್ನೂ ಕನ್ನಡದಲ್ಲಿಯೇ ನೀಡಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದರು.

ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದ ಬ್ಯಾಂಕ್ ಸಿಬ್ಬಂದಿಗೆ ಕನ್ನಡವನ್ನು ಕಲಿಸುವ ಕಾರ್ಯವಾಗಬೇಕು. ಈಗಾಗಲೇ ಆನ್‌ಲೈನ್ ಮೂಲಕ ಕನ್ನಡ ಕಲಿಸುವ ಕಾರ್ಯ ನಡೆಯುತ್ತಿದೆ. ಆರೋಗ್ಯ ಇಲಾಖೆಯಿಂದ ನೀಡುತ್ತಿರುವ ಜನನ ಪ್ರಮಾಣ ಪತ್ರವು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಮುದ್ರಿಸಲಾಗುತ್ತಿದೆ ಎಂಬ ಮಾಹಿತಿ ಇದೆ, ಕಡ್ಡಾಯವಾಗಿ ಕನ್ನಡದಲ್ಲಿ ನೀಡಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಕಚೇರಿಯ ಕಡತಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ನಿರ್ವಹಣೆ ಮಾಡಬೇಕು ಎಂದು ಹೇಳಿದರು.

ಕನ್ನಡ ಬಳಸುವ ಅಧಿಕಾರಿಗಳನ್ನು ಸನ್ಮಾನಿಸಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ತಿಮ್ಮೇಶ್ ಅವರು ಮಾತನಾಡಿ, ಆಡಳಿತದಲ್ಲಿ ಕನ್ನಡವನ್ನು ಬಳಸುವ ಅಧಿಕಾರಿಗಳನ್ನು ಗುರುತಿಸಿ ಸನ್ಮಾನಿಸುವ ಕೆಲಸಗಳು ಜಿಲ್ಲಾ ಮಟ್ಟದಲ್ಲಿ ಆಗಬೇಕು. ಕನ್ನಡವನ್ನು ಉಳಿಸುವ ಕಾರ್ಯವನ್ನು ಎಲ್ಲರೂ ಒಗ್ಗಟ್ಟಾಗಿ ನಿರ್ವಹಿಸಬೇಕಿದೆ. ರಾಜ್ಯದ ಮುಖ್ಯಮಂತ್ರಿಗಳು ಸಹ ಕನ್ನಡದಲ್ಲಿಯೇ ಆಡಳಿತ ಕಡತಗಳನ್ನು ನಿರ್ವಹಣೆ ಮಾಡುತ್ತಾರೆ ಹಾಗೂ ಸಹಿಯನ್ನು ಕನ್ನಡದಲ್ಲಿಯೇ ಮಾಡುತ್ತಾರೆ ಎಂದು ಹೇಳಿದರು.

ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ನಾಡಗೀತೆಗೆ ೧೦೦ ವರ್ಷ ಸಂಭವಿಸಿದೆ. ಅದರ ಪ್ರಯುಕ್ತ ಜಿಲ್ಲೆಯ ಸಾವಿರ ವಿದ್ಯಾರ್ಥಿಗಳಿಂದ ಸಹಸ್ರಕಂಠಗಳ ನಾಡ ಗೀತೆ ಗಾಯನ ಮಾಡಬೇಕು. ನಾಡಗೀತೆಯನ್ನು ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಮತ್ತು ಕ್ರಮಬದ್ಧವಾಗಿ ಹಾಡಬೇಕು. ಇತ್ತೀಚಿನ ದಿನಗಳಲ್ಲಿ ಸ್ಥಳಗಳ ನಾಮಪದಗಳನ್ನು ಚಿಕ್ಕದಾಗಿ ಹೇಳುವ ಸಂಸ್ಕೃತಿ ಬೆಳೆದಿದೆ. ಅದನ್ನು ನಿರ್ಮೂಲನೆ ಮಾಡಿ ಸ್ಥಳಗಳ ನಾಮಪದಗಳನ್ನು ಉಳಿಸುವ ಕೆಲಸ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯಗಳನ್ನು ರೂಪಿಸುವ ಯೋಜನೆಯನ್ನು ಕೈಗೊಳ್ಳಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂದೀಶ್, ಕನ್ನಡ ಜಾಗೃತಿ ರಕ್ಷಣಾ ವೇದಿಕೆ ಅಧಿಕಾರೇತರ ಸದಸ್ಯರಾದ ಉಷಾರಾಣಿ, ಕೀಲಾರ ಕೃಷ್ಣೆಗೌಡ, ಚಾಮರಾಜು, ಪಣ್ಣೆದೊಡ್ಡಿ ಹರ್ಷ, ಮಂಜು, ಪ್ರತಿಭಾಂಜಲಿ ಡೇವಿಡ್ ಇತರರಿದ್ದರು.