ಸಾರಾಂಶ
ಕನ್ನಡಪ್ರಭ ವಾರ್ತೆ ಆದೋನಿ (ಎಲೆಮಲ್ಲೇಶಪ್ಪನವರ ವೇದಿಕೆ)
ಆಂಧ್ರಪ್ರದೇಶದಲ್ಲೂ ಕನ್ನಡ ಕಲಿಕೆಗೆ ಆದ್ಯತೆ ನೀಡಬೇಕು ಎಂದು ಬಳ್ಳಾರಿ ಚೌಕಿಮಠದ ಮರಿರಾಚೋಟಿ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಆಂಧ್ರಪ್ರದೇಶದ ಆದೋನಿಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ 9ನೇ ಮಹಾಮೇಳದಲ್ಲಿ ಅವರು ಆಶೀರ್ವಚನ ನೀಡಿದರು.
ಕರ್ನಾಟಕದಲ್ಲಿ ಉರ್ದು ಹಾಗೂ ತೆಲಗು ಭಾಷೆಯ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಆದರೆ ಆಂಧ್ರದಲ್ಲಿ ಕನ್ನಡ ಕಲಿಕೆಗೆ ಆ ರೀತಿ ಆದ್ಯತೆ ನೀಡುತ್ತಿಲ್ಲ. ಇದು ಬೇಸರದ ಸಂಗತಿ. ಕರ್ನಾಟಕದಲ್ಲಿ ಉಳಿದ ಭಾಷೆಗಳ ಕಲಿಕೆಗೆ ಹೇಗೆ ಆದ್ಯತೆ ನೀಡಲಾಗುತ್ತಿದೆಯೋ ಅದೇ ರೀತಿ ಆಂಧ್ರ ಪ್ರದೇಶದಲ್ಲೂ ಕನ್ನಡ ಶಾಲೆಗಳನ್ನು ತೆರೆದು ಕನ್ನಡ ಕಲಿಕೆಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು ಎಂದರು.ಮಠಗಳೆಂದರೆ ಕೇವಲ ಪೂಜೆ ಪುನಸ್ಕಾರಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ನಾಡಿನಲ್ಲಿ ಕನ್ನಡ ಪ್ರಸಾರಕ್ಕೂ ಸಾಕಷ್ಟು ಕೊಡುಗೆ ನೀಡಿವೆ. ಈ ಭಾಗದಲ್ಲಿ ಕನ್ನಡ ಕಲಿಯುವ ಮಕ್ಕಳಿಗಾಗಿ ಚೌಕಿಮಠವು ವಸತಿ ಮತ್ತು ಪ್ರಸಾದದ ವ್ಯವಸ್ಥೆ ಮಾಡುತ್ತಿದೆ. ಈ ಮೂಲಕ ಕನ್ನಡ ಭಾಷೆ ಕಲಿಕೆಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಇಲ್ಲಿಯ ಜನರ ಮನೆ ಮಾತು ಕನ್ನಡವಾದರೂ ಮಕ್ಕಳಿಗೆ ಕನ್ನಡ ಕಲಿಯಲೂ ಶಾಲೆಗಳು ಇಲ್ಲ. ಈ ಬಗ್ಗೆ ಕರ್ನಾಟಕ ಸರ್ಕಾರ ಗಮನಹರಿಸಬೇಕು. ರಾಜ್ಯದ ಗಡಿಗಳಲ್ಲಿ ಕನ್ನಡ ಶಾಲೆ ತೆರೆಯಬೇಕು. ಈ ಮೂಲಕ ಭಾಷಾ ಬೆಳವಣಿಗೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ ಮಾತನಾಡಿ, ಕರ್ನಾಟಕದ ಏಕೀಕರಣಕ್ಕೆ ಬಳ್ಳಾರಿಯ ಕೊಡುಗೆ ಅಪಾರ. ಅದರಲ್ಲೂ ಥಾಮಸ್ ಮಂಟ್ರೋ ಏಕೀಕರಣದ ರೂವಾರಿಯಾಗಿದ್ದಾನೆ ಎಂದರು.ಸ್ವಾತಂತ್ರ್ಯ ಮತ್ತು ಏಕೀಕರಣದ ಮೊದಲು ನೆರೆಯ ಭಾಷೆಯಿಂದ ಕನ್ನಡದ ರಕ್ಷಣೆ ಹೇಗೆ ಎನ್ನುವ ಚಿಂತೆ ಕಾಡಿತ್ತು. ಆದರೆ ಇಂದು ಆಂಗ್ಲ ಭಾಷೆಯಿಂದ ಭಾರತೀಯ ಭಾಷೆಗಳನ್ನು ಹೇಗೆ ರಕ್ಷಿಸಿಕೊಳ್ಳುಬೇಕು ಎನ್ನುವ ಚಿಂತೆ ಕಾಡುತ್ತಿದೆ. ಅದರಲ್ಲೂ ಕರ್ನಾಟಕದ ಗಡಿ ಭಾಗವಾದ ಇಲ್ಲಿ ಹಲವಾರು ಮಹನೀಯರು ಕನ್ನಡದ ನೆಲ-ಜಲ, ಭಾಷೆಗಾಗಿ ಹೋರಾಟ ಮಾಡಿದ್ದಾರೆ ಎಂದು ಹೇಳಿದರು.
ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾ.ನಿ. ಲಕ್ಷ್ಮೀನರಸಮ್ಮ ಬರೆದ ಮಾರುತಾತ್ಮಜಂ ಗ್ರಂಥ ಲೋಕಾರ್ಪಣೆ ಮಾಡಲಾಯಿತು.ವೇದಿಕೆಯಲ್ಲಿ ಕಲ್ಮಠದ ಗುರುಸಿದ್ದ ದೇವರು, ಕವಿವಿ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ. ಉಪಾಧ್ಯಕ್ಷೆ ಮಾಲತಿ ಪಟ್ಟಣಶಟ್ಟಿ, ಕೆ. ಶರಣಬಸಪ್ಪ, ಕೆ.ಸೂಗೂರಪ್ಪ, ಜಿ.ವೆಂಕಟರಮಣರೆಡ್ಡಿ, ಶ್ರೀನಿವಾಸರೆಡ್ಡಿ ನಾಗನಾಥನಹಳ್ಳಿ, ಬ.ರ. ವೀರಭದ್ರಗೌಡ, ಎಚ್. ಶಿವಶಂಕರಗೌಡ, ಕೆ. ರಾಮು, ತೋವಿ ಶಿವರುದ್ರಪ್ಪ ಉಪಸ್ಥಿತರಿದ್ದರು.
ವಿ. ಸುಬ್ರಹ್ಮಣ್ಯ ಶರ್ಮಾ ಹಾಗೂ ಶಂಕರ ಹಲಗತ್ತಿ ಸ್ವಾಗತಿಸಿದರು. ಎಚ್.ಎಂ. ವೀರಶ್ರೀ, ಎನ್. ಎಂ. ಚನ್ನಬಸವ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.