ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಬರುವ ಆಗಸ್ಟ್ 2ನೇ ವಾರದಿಂದ ರಾಜ್ಯದ 3 ಜಿಲ್ಲೆಯ ಮದರಸಾಗಳಲ್ಲಿ ಪ್ರಾಯೋಗಿಕವಾಗಿ ಕನ್ನಡ ಕಲಿಕೆ ಆರಂಭಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನೇಕ ಕಡೆಗಳಲ್ಲಿ ಅಲ್ಪಸಂಖ್ಯಾತರು ಕನ್ನಡ ಹೇಳಿಕೊಡಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಆರಂಭದಲ್ಲಿ ವಿಜಯಪೂರ ಜಿಲ್ಲೆಯ 3, ಕಲಬುರಗಿ. 3 ಹಾಗೂ ರಾಯಚೂರು ಜಿಲ್ಲೆಯ 3 ಮದರಸಾಗಳಲ್ಲಿ ಅವರದ್ದೆ ಸಮಾಜದ ಕನ್ನಡ ಶಿಕ್ಷಕರಿಂದ ವಾರಕ್ಕೆ 2 ದಿನ ಕನ್ನಡ ಕಲಿಸಲು ಆರಂಭಿಸಲಾಗುವುದು ಎಂದರು.
ಕರ್ನಾಟಕಕ್ಕೆ ಐವತ್ತಾದರೂ ಹಿಂದಿ ಅಧಿಪತ್ಯಕ್ಕೆ ಇನ್ನೂ ಕೊನೆಯಾಗಿಲ್ಲ: ಕರ್ನಾಟಕಕ್ಕೆ ಇದೀಗ 50 ವರ್ಷ ಗತಿಸುತ್ತಿದ್ದರೂ ಹಿಂದಿ ಭಾಷೆ ಶೇ. 80ರಷ್ಟು ಚಾಲ್ತಿಯಲ್ಲಿದ್ದರೆ ಕನ್ನಡ ಭಾಷೆ ಕೇವಲ 3.7ರಷ್ಟಿದೆ. ಈಗಿನ ವೇಗ ನೋಡಿದರೆ ಮುಂದಿನ 50 ವರ್ಷಗಳಲ್ಲಿ ಕನ್ನಡ ಆಡು ಭಾಷೆಯಾಗಿ ಮಾತ್ರ ಉಳಿಯಬಹುದು ಎಂಬ ಸಂದೇಹ ವ್ಯಕ್ತವಾಗುತ್ತಿದೆ. ಅಲ್ಲದೇ ಕನ್ನಡ ಕುಸಿಯುವ ಸಂಕೇತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.90 ದಿನಗಳಲ್ಲಿ ಕನ್ನಡ ಕಲಿಯಿರಿ, ಪ್ರಾಧಿಕಾರದಿಂದಲೇ ಪಠ್ಯ ತಯಾರಿಕೆ: ಕನ್ನಡ ಭಾಷೆಯ ಅಭಿವೃದ್ಧಿ ಕುರಿತು ಇಲ್ಲಿಯವರೆಗೆ 1027 ಸರ್ಕಾರದ ಆದೇಶಗಳಾಗಿವೆ ಆದರೆ ಇವು ಯಾವುದಕ್ಕೂ ಉಪಯೋಗಕ್ಕೆ ಬರುತ್ತಿಲ್ಲ ಎಂದ ಅವರು ಕನ್ನಡ ಕಲಿಸಲು ಪ್ರಾಧಿಕಾರದಿಂದಲೇ ಪಠ್ಯಕ್ರಮ ತಯಾರಿಸಿ ಮೂರು ತಿಂಗಳಲ್ಲಿ ಕನ್ನಡ ಮಾತಾಡಲು ಸಾಧ್ಯವಿದೆ ಇದನ್ನು ಮಾಡಲಾಗುವುದು ಎಂದರು.
ಕನ್ನಡ ಕಲಿಕೆಗೆ ಶಾಹೀನ್ ಶಿಕ್ಷಣ ಸಂಸ್ಥೆ ರಾಜ್ಯಕ್ಕೆ ಮಾದರಿ: ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯಾದರೂ ಅಲ್ಲಿನ ಮಕ್ಕಳಿಗೆ ಕನ್ನಡ ಕಲಿಸುವದನ್ನು ನೋಡಿದರೆ ಶಾಹೀನ್ ಶಿಕ್ಷಣ ಸಂಸ್ಥೆಯು ಕರ್ನಾಟಕ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಶ್ಲಾಘಿಸಿದರು.ಶಾಹೀನ್ ಸಂಸ್ಥೆಗೆ ಭೇಟಿ ನೀಡಿದಾಗ ದೆಹಲಿ, ಬಿಹಾರ ಸೇರಿದಂತೆ ಇನ್ನಿತರ ರಾಜ್ಯದ ಮಕ್ಕಳೊಂದಿಗೆ ನಾನು ಕನ್ನಡದಲ್ಲಿಯೇ ಮಾತನಾಡಿದ್ದು ನೋಡಿದರೆ ಆಶ್ಚರ್ಯ ಎನಿಸಿದೆ. ಎಲ್ಲರಿಗೂ ಕನ್ನಡ ಭಾಷೆಯ ಬಗ್ಗೆ ಕಾಳಜಿ ಇದ್ದರೆ ಕನ್ನಡ ಬೆಳೆಯಲು ಯಾರೂ ತಡೆಯಲಾರರು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಇದ್ದರು.