ಯಲಬುರ್ಗಾ, ಕುಕನೂರಲ್ಲಿ ನಡೆದಿಲ್ಲ ಕನ್ನಡ ಸಾಹಿತ್ಯ ಸಮ್ಮೇಳನ

| Published : Apr 21 2025, 12:57 AM IST

ಯಲಬುರ್ಗಾ, ಕುಕನೂರಲ್ಲಿ ನಡೆದಿಲ್ಲ ಕನ್ನಡ ಸಾಹಿತ್ಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ಜಿಲ್ಲೆಯ ಕುಕನೂರು ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿಲ್ಲ. ಅನುದಾನ ನೀಡಲು ಸಾಧ್ಯವಾಗದು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಹೇಳಿದೆ. ಸಾಹಿತ್ಯ ಚಟುವಟಿಕೆಗೆ ಹಿನ್ನಡೆ ಉಂಟಾಗಿದೆ ಎಂದು ಸಾಹಿತಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕುಕನೂರು: ಈ ವರ್ಷ ಕುಕನೂರು ಹಾಗೂ ಯಲಬುರ್ಗಾ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು ಜರುಗಿಲ್ಲ. ತಾಲೂಕು ಮಟ್ಟದಲ್ಲಿ ಸಾಹಿತ್ಯ ಹಾಗೂ ಕನ್ನಡಪರ ಅಭಿರುಚಿ ಬೆಳೆಸುವುದು ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಘಟಕಗಳ ಕರ್ತವ್ಯ. ಸಾಹಿತ್ಯ ಸಮ್ಮೇಳನ ನಡೆಯದಿದ್ದರೆ ಈ ಕಾರ್ಯಕ್ಕೆ ಹಿನ್ನಡೆಯಾಗುತ್ತದೆ ಎಂಬುದು ಸಾಹಿತ್ಯಾಸಕ್ತರ ಆತಂಕ. ಜತೆಗೆ ಪರಿಷತ್‌ ಸದಸ್ಯರಿಗೂ ‍ಈ ವಿಚಾರ ಮುಜುಗರ ಉಂಟುಮಾಡಿದೆ.

ಆಯಾ ತಾಲೂಕು ಮಟ್ಟದಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿ ಒಳಗೊಂಡು ಸಾಹಿತ್ಯ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಾಹಿತ್ಯ ಸಮ್ಮೇಳನ ಕೈಗನ್ನಡಿ. ಸಾಹಿತ್ಯ ಸಮ್ಮೇಳನದಿಂದ ಯುವ ಕವಿಗಳಿಗೆ, ಸಾಹಿತಿಗಳಿಗೆ ವೇದಿಕೆ ಸಹ ಸ್ಥಳೀಯ ಮಟ್ಟದಲ್ಲಿ ದೊರಕುತ್ತದೆ. ಅಲ್ಲದೆ ಸಮ್ಮೇಳನಾಧ್ಯಕ್ಷತೆ ವಹಿಸುವ ಸಾಹಿತಿ-ಕವಿಗಳ ಸಾಧನೆ ಪರಿಚಯ ಜನರಿಗೆ ಆಗುತ್ತದೆ. ನಾನಾ ಗೋಷ್ಠಿಗಳ ಮೂಲಕ ತಾಲೂಕು ಮಟ್ಟದ ಸಾಹಿತಿಗಳಿಗೆ ತಮ್ಮ ಸಾಹಿತ್ಯ ಉಣಬಡಿಸಲು ವೇದಿಕೆ ಸಿಗುತ್ತದೆ. ಸಾಹಿತ್ಯ ಸಮ್ಮೇಳನಗಳು ಸಾಹಿತ್ಯದ ಅಭಿವೃದ್ಧಿಗೆ ಪೂರಕವಾಗುತ್ತದೆ. ಇವೆಲ್ಲವನ್ನೂ ಕುಕನೂರು ಹಾಗೂ ಯಲಬುರ್ಗಾ ಕಸಾಪ ಘಟಕಗಳು ಮರೆತಿವೆ ಎಂದು ಸಾಹಿತಿಗಳ ವಲಯ ಅಸಮಾಧಾನ ವ್ಯಕ್ತಪಡಿಸುತ್ತಿದೆ.

ಅನುದಾನದ ಕೊರತೆ: ಇಷ್ಟು ದಿನ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸರ್ಕಾರ ಒಂದು ಲಕ್ಷ ರು. ಸಹಾಯಧನ ನೀಡುತ್ತಿತ್ತು. ಆದರೆ ಸರ್ಕಾರದಿಂದ ಅನುದಾನ ಬಾರದ ಕಾರಣ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಹಣ ನೀಡಲಾಗದು ಎಂದು ಕೇಂದ್ರ ಸಾಹಿತ್ಯ ಪರಿಷತ್‌ ಹೇಳಿದೆ. ಜತೆಗೆ ತಾಲೂಕು ಮಟ್ಟದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕಡ್ಡಾಯವಾಗಿ ಮಾಡಬೇಕು ಎಂಬ ಒತ್ತಡ ಸಹ ಇಲ್ಲ. ಅದರಿಂದ ಸಾಹಿತ್ಯ ಸಂಬಂಧಿತ ಚಟುವಟಿಕೆಗೆ ಹಿನ್ನಡೆಯಾಗುತ್ತಿದೆ ಎಂಬುದು ಸಾಹಿತಿಗಳ ಆತಂಕ.

ಸ್ಥಳೀಯರ ಸಹಕಾರದಿಂದ ಸಮ್ಮೇಳನ ಆಯೋಜನೆ: ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಮುಖಂಡರು, ಸಾಹಿತ್ಯಪ್ರಿಯರ ಸಹಕಾರದಿಂದ ಆಯೋಜನೆ ಮಾಡಿ ಎಂದು ಕೇಂದ್ರ ಕಸಾಪ ಘಟಕ ಸೂಚಿಸಿದೆ. ಆದರೆ ಅನುದಾನ ನೀಡದೆ, ಸ್ಥಳೀಯ ಸಹಕಾರದಿಂದ ಸಮ್ಮೇಳನ ಆಯೋಜನೆ ಮಾಡಿ ಎನ್ನುವುದು ಸರಿಯಲ್ಲ ಎಂಬುದು ತಾಲೂಕು ಘಟಕಗಳ ಅಭಿಪ್ರಾಯ.

ಕುಕನೂರು ತಾಲೂಕು ರಚನೆಯಾದ ಮೇಲೆ 2 ಸಾಹಿತ್ಯ ಸಮ್ಮೇಳನ ಜರುಗಿವೆ. 3ನೇ ಸಾಹಿತ್ಯ ಸಮ್ಮೇಳನ ಈ ವರ್ಷ ಜರುಗಬೇಕಿತ್ತು. ಆದರೆ ಇದುವರೆಗೂ ಅದಕ್ಕೆ ಕಸಾಪ ತಾಲೂಕು ಘಟಕ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಯಲಬುರ್ಗಾ ತಾಲೂಕಿನಲ್ಲಿ 14ನೇ ಸಾಹಿತ್ಯ ಸಮ್ಮೇಳನ ಜರುಗಬೇಕಿದ್ದು, ಸಮ್ಮೇಳನ ಆಯೋಜನೆ ದಿನಾಂಕಗಳ ನಿಗದಿಯನ್ನು ಮುಂದೂಡುತ್ತಲೇ ಸಾಗಲಾಗಿದೆ ಎಂಬ ಅಳಲು ಸಾಹಿತ್ಯಪ್ರಿಯರದ್ದು.

ಚರ್ಚೆ ಮಾಡಲಾಗಿದೆ: ಯಲಬುರ್ಗಾ ತಾಲೂಕಿನಲ್ಲಿ ಸದ್ಯ 14ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬರುವ ಮೇ ಇಲ್ಲವೇ ಜೂನ್ ತಿಂಗಳಿನಲ್ಲಿ ಆಯೋಜನೆ ಮಾಡಲಾಗುವುದು. ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡುವ ಕುರಿತು ಚರ್ಚೆ ಸಹ ಮಾಡಲಾಗಿದೆ ಎಂದು ಕಸಾಪ ಯಲಬುರ್ಗಾ ತಾಲೂಕು ಅಧ್ಯಕ್ಷ ಬಾಲದಂಡಪ್ಪ ಹೇಳಿದರು.ಕುಕನೂರು ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲು ದಿನಾಂಕ ಕೇಳಿದೆವು. ಆದರೆ ರಾಜ್ಯ ಘಟಕ ದಿನಾಂಕ ನೀಡದ ಕಾರಣ ಆಯೋಜನೆ ಮಾಡಲು ಆಗಲಿಲ್ಲ. ಇದರ ಬಗ್ಗೆ ಕಸಾಪ ತಾಲೂಕು ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕುಕನೂರು ತಾಲೂಕು ಕಸಾಪ ಅಧ್ಯಕ್ಷ ಕಳಕಪ್ಪ ಕುಂಬಾರ ಹೇಳಿದರು.

ಸಾಹಿತ್ಯಾತ್ಮಕ ಕಾರ್ಯ ಚಟುವಟಿಕೆ ಜರುಗಬೇಕು. ಸಾಹಿತ್ಯ ಸಮ್ಮೇಳನಗಳಿಗೆ ಆದ್ಯತೆ ದೊರೆಯಬೇಕು. ಯಲಬುರ್ಗಾ, ಕುಕನೂರು ತಾಲೂಕಿನಲ್ಲಿ ಕಸಾಪದಿಂದ ಸಮ್ಮೇಳನ ಕನಿಷ್ಠ ಪಕ್ಷವಾದರೂ ಸರಳ ರೀತಿಯಿಂದಾದರೂ ಆಗಬೇಕು ಎಂದು ಕುಕನೂರು ಹಿರಿಯ ಸಾಹಿತಿ ಕೆ.ಬಿ. ಬ್ಯಾಳಿ ಹೇಳುತ್ತಾರೆ.

ಕಸಾಪ ಬೆಂಗಳೂರಿನಿಂದ ಯಾವುದೇ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳಿಗೆ ಅನುದಾನ ನೀಡುವುದಿಲ್ಲ. ನಮಗೂ ಅನುದಾನ ಬರುವುದಿಲ್ಲ ಎಂಬ ಸೂಚನೆ ಬಂದಿದೆ. ತಾಲೂಕು ಮಟ್ಟದ ಕಸಾಪ ಅಧ್ಯಕ್ಷರು ಸ್ಥಳೀಯರ ಸಹಕಾರದಿಂದ ಸಮ್ಮೇಳನ ಆಯೋಜನೆ ಮಾಡಬಹುದು. ಇದು ಅವರವರ ವಿವೇಚನೆಗೆ ಬಿಟ್ಟಿರುವ ವಿಚಾರವಾಗಿದೆ ಎಂದು ಕಸಾಪ ಕೊಪ್ಪಳ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ್‌ ಹೇಳುತ್ತಾರೆ.