ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸ ಮತ್ತು ಶ್ರೀಮಂತ ಸಾಹಿತ್ಯ ಪರಂಪರೆಯಿದೆ. ಹಲ್ಮಿಡಿ ಶಾಸನದಿಂದ ಹಿಡಿದು ಕವಿರಾಜಮಾರ್ಗ, ಪಂಪ, ರನ್ನ, ಜನ್ನ ಮುಂತಾದ ಮಹಾನ್ ಕವಿಗಳ ಸಾಹಿತ್ಯವು ಕನ್ನಡ ಭಾಷೆಯ ಪ್ರಾಚೀನತೆ ಹಾಗೂ ವೈಭವವನ್ನು ಸಾರುತ್ತದೆ ಎಂದು ಸಾಹಿತಿ, ಪತ್ರಕರ್ತರಾದ ಬಾ.ಮ. ಬಸವರಾಜಯ್ಯ ಹೇಳಿದ್ದಾರೆ.

- ಜೈನ್ ತಾಂತ್ರಿಕ ಕಾಲೇಜಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಾ.ಮ. ಬಸವರಾಜಯ್ಯ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸ ಮತ್ತು ಶ್ರೀಮಂತ ಸಾಹಿತ್ಯ ಪರಂಪರೆಯಿದೆ. ಹಲ್ಮಿಡಿ ಶಾಸನದಿಂದ ಹಿಡಿದು ಕವಿರಾಜಮಾರ್ಗ, ಪಂಪ, ರನ್ನ, ಜನ್ನ ಮುಂತಾದ ಮಹಾನ್ ಕವಿಗಳ ಸಾಹಿತ್ಯವು ಕನ್ನಡ ಭಾಷೆಯ ಪ್ರಾಚೀನತೆ ಹಾಗೂ ವೈಭವವನ್ನು ಸಾರುತ್ತದೆ ಎಂದು ಸಾಹಿತಿ, ಪತ್ರಕರ್ತರಾದ ಬಾ.ಮ. ಬಸವರಾಜಯ್ಯ ಹೇಳಿದರು.

ನಗರದ ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ 71ನೇ ಕನ್ನಡ ರಾಜ್ಯೋತ್ಸವ ಹಾಗೂ ಜನಪದ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 1956ರ ನ.1ರಂದು ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ವಿಶಾಲ ಮೈಸೂರು ರಾಜ್ಯವನ್ನು ರಚಿಸಲಾಯಿತು. ನಂತರ 1973ರ ನವೆಂಬರ್ 1ರಂದು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಎಂದು ಹೇಳಿದರು.

ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳನ್ನು ಕಲಿಯಬೇಕು. ಆದರೆ ಬೇರೆ ಭಾಷೆಗಳನ್ನು ಕಲಿಯುವ ಭರದಲ್ಲಿ ಮಾತೃಭಾಷೆಯನ್ನು ಮರೆಯಬಾರದು. ಕನ್ನಡವನ್ನು ಉಳಿಸುವ ಜವಾಬ್ದಾರಿ ಸರ್ಕಾರದಷ್ಟೇ ಅಲ್ಲದೆ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ಮನೆಯಿಂದಲೇ ಮಕ್ಕಳಿಗೆ ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ಕಲಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಪ್ರಾಂಶುಪಾಲ ಡಾ.ಡಿ.ಬಿ. ಗಣೇಶ್ ಅಧ್ಯಕ್ಷತೆವಹಿಸಿ ಮಾತನಾಡಿ, ತಾಂತ್ರಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಜೀವನಮೌಲ್ಯಗಳ ಪರಿಚಯವೂ ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉದ್ಯೋಗ ನಿರ್ವಹಿಸುವ ಸಂದರ್ಭದಲ್ಲಿ ಕನ್ನಡ ನಾಡಿನ ಇತಿಹಾಸ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯನ್ನು ಇತರರಿಗೆ ಪರಿಚಯಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ವಿವಿಧ ಜನಪದ ಕಲಾ ಪ್ರಕಾರಗಳಾದ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಯಕ್ಷಗಾನ, ಕೋಲಾಟ, ಸುಗ್ಗಿ ಕುಣಿತ, ಹುಲಿವೇಷ, ಕೊಡವ ಜನಪದ ನೃತ್ಯ ಹಾಗೂ ಪೂಜಾ ಕುಣಿತ ಪ್ರದರ್ಶನಗೊಂಡವು.

ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಸಂಚಾಲಕ ಡಾ. ಸಂತೋಷ್ ಹೇರೂರು, ಸಂಯೋಜಕರಾದ ಪ್ರೊ.ಸವಿತಾ ಮಮದಾಪುರ, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

- - -

-4ಕೆಡಿವಿಜಿ37:

ದಾವಣಗೆರೆ ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿಂದು ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬಾಮ ಬಸವರಾಜಯ್ಯ ಉದ್ಘಾಟಿಸಿದರು.