ಹೋರಾಟ ಪ್ರಜ್ಞೆಗೂ ಕನ್ನಡ ಸಾಹಿತ್ಯಕ್ಕೂ ನೇರ ಸಂಬಂಧವಿದೆ: ಎಲ್.ಎನ್.ಮುಕುಂದರಾಜ್

| Published : Jul 16 2024, 12:45 AM IST

ಹೋರಾಟ ಪ್ರಜ್ಞೆಗೂ ಕನ್ನಡ ಸಾಹಿತ್ಯಕ್ಕೂ ನೇರ ಸಂಬಂಧವಿದೆ: ಎಲ್.ಎನ್.ಮುಕುಂದರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಶಂಕರಘಟ್ಟದ ಕನ್ನಡ ಭಾರತಿ ಸಭಾಂಗಣದಲ್ಲಿ ಆಯೋಜಿಸಿದ್ದ ಭಾಷೆ-ಸಾಹಿತ್ಯ-ಸಂಸ್ಕೃತಿ ವರ್ತಮಾನದ ಸವಾಲುಗಳು ವಿಚಾರವಾಗಿ ಮಾತು-ಮಂಥನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಂವಿಧಾನದ ಪೀಠಿಕೆಯಲ್ಲಿ ಏನಿದೆ ಅದನ್ನು ಒಂದು ಸಾವಿರ ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಹೇಳಿದೆ. ನಾವು ದೊಡ್ಡ ಹಿನ್ನೆಲೆಯಿಂದ ಬಂದಿದ್ದೇವೆ. ಮೌಲ್ಯವನ್ನು ತುಂಬಲು ಕನ್ನಡ ಸಾಹಿತ್ಯ ಹೇಳಿಕೊಡುತ್ತಿದೆ. ಹೋರಾಟದ ಪ್ರಜ್ಞೆಗೂ ಕನ್ನಡ ಸಾಹಿತ್ಯಕ್ಕೂ ನೇರ ಸಂಬಂಧವಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಸಹಯೋಗದಲ್ಲಿ ಶಂಕರಘಟ್ಟದ ಕನ್ನಡ ಭಾರತಿ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೊಂದಿಗೆ ಭಾಷೆ-ಸಾಹಿತ್ಯ-ಸಂಸ್ಕೃತಿ ವರ್ತಮಾನದ ಸವಾಲುಗಳು ವಿಚಾರವಾಗಿ ಮಾತು-ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹೋರಾಟದಲ್ಲಿ ಹಿಂಜರಿಕೆಯ ಅರಿವಾದೊಡೆ ಪಂಪ, ರನ್ನ, ಕುವೆಂಪು, ಬಸವಣ್ಣ ಎಲ್ಲರನ್ನೂ ನೆನಪುಮಾಡಿಕೊಳ್ಳಿ. ನಾವು ಏಕಾಂಗಿಗಳಲ್ಲ. ನಮ್ಮ ಹಿಂದೆ ದೊಡ್ಡ ಪರಂಪರೆಯಿದೆ ಎನ್ನುವುದು ನಮಗೆ ಗೊತ್ತಿರಬೇಕು.

ಕುವೆಂಪು ಅವರ ಜನತಾ ಪ್ರಜ್ಞೆ, ಆತ್ಮಶ್ರೀ, ವಿಚಾರಕ್ರಾಂತಿಗೆ ಆಹ್ವಾನ ಇವುಗಳನ್ನು ಓದಿ. ನಿಮ್ಮನ್ನು ಹೆದರಿಸುವ ಅಗತ್ಯವಿಲ್ಲ. ಅಂತಹ ಶಿಕ್ಷಣ ನಿಮಗೆ ನೀಡುತ್ತದೆ. ವೈಚಾರಿಕ ಪ್ರಜ್ಞೆ ಜಾಗೃತಗೊಳಿಸುತ್ತದೆ. ಇವತ್ತಿನ ಕೋಮುವಾದಕ್ಕೆ ಕವಿರಾಜಮಾರ್ಗಕಾರ ಅಂದೇ ಉತ್ತರ ನೀಡಿದ್ದಾರೆ ಎಂದು ವಿವರಿಸಿದರು.

ಸಾಹಿತ್ಯ, ಪ್ರಭುತ್ವ ಎರಡರ ನಡುವೆ ಸಂಬಂಧವಿದೆ. ವಿರೋಧವೂ ಇದೆ. ಅಖಂಡ ಕರ್ನಾಟಕ, ಕನ್ನಡ ಸಾಹಿತ್ಯ ಕಟ್ಟುವಲ್ಲಿ ಎಲ್ಲರೂ ಇದ್ದಾರೆ. ನೋವುಂಡವರು, ಅನುಭವಿಗಳು ಎಲ್ಲರೂ ಅಸಂಖ್ಯಾತ ಸಂಖ್ಯೆಯಲ್ಲಿ ಬರೆಯುತ್ತಿದ್ದಾರೆ ಎಂದರು.

ಕನ್ನಡ ಭಾರತಿಯ ಪ್ರಾಧ್ಯಾಪಕ, ಸಾಹಿತಿ ಡಾ.ಪ್ರಶಾಂತ ನಾಯಕ ಮಾತನಾಡಿ, ಅಕಾಡೆಮಿ ಸೃಜನಶೀಲ ಚಿಂತನೆ ಗಳೊಂದಿಗೆ ಕನ್ನಡ ಅನ್ನದ ಪ್ರಜ್ಞೆ ಯಾಗಬೇಕು ಅನ್ನುವ ಕೂಗಿಗೆ ಧ್ವನಿಯಾಗಿ, ನೂರಾರು ಕನಸುಗಳಿವೆ, ಬೆಚ್ಚನೆಯ ಭಾವವಿದೆ. ಕನ್ನಡ ಕಟ್ಟುವ ಕೆಲಸ ಯುವಜನರಿಂದ ಆಗಬೇಕು. ಅಕಾಡೆಮಿ ಜೀವಂತಿಕೆ ತುಂಬಲಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಾಪಕರಾದ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಸ್ವಾಗತಿಸಿದರು. ಡಾ. ನವೀನ್ ಮಂಡಗದ್ದೆ ನಿರೂಪಿಸಿದರು. ಡಾ.ಕುಮಾರ್ ನಾಯ್ಕ ವಂದಿಸಿದರು. ಡಾ. ಬಸವರಾಜ ನೆಲ್ಲಿಸರ, ಕಸಾಪ ಜಿಲ್ಲಾ ಕಾರ್ಯದರ್ಶಿ ಎಂ.ಎಂ.ಸ್ವಾಮಿ, ನಿ.ಉಪನ್ಯಾಸಕರಾದ ಉಮಾಪತಿ, ಕೃಷ್ಣಮೂರ್ತಿ ಹಿಳ್ಳೋಡಿ, ಆರ್.ರತ್ನಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.