ಕನ್ನಡ ಸಾಹಿತ್ಯ ಅನೇಕ ಪ್ರಕಾರಗಳಿಂದ ಶ್ರೀಮಂತವಾಗಿದೆ

| Published : May 18 2024, 12:32 AM IST

ಸಾರಾಂಶ

ಹೊನ್ನೇಕೊಡಿಗೆ ಎನ್‌ಎಸ್‌ಎಸ್‌ ಶಿಬಿರದಲ್ಲಿ ಲೇಖಕಿ ಭಾಗ್ಯನಂಜುಂಡಸ್ವಾಮಿ ವಿಶೇಷ ಉಪನ್ಯಾಸ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ:

ಕನ್ನಡ ಸಾಹಿತ್ಯವು ಅನೇಕ ಪ್ರಕಾರಗಳಿಂದ ಶ್ರೀಮಂತವಾಗಿದೆ ಎಂದು ಅಗ್ರಹಾರದ ಲೇಖಕಿ ಭಾಗ್ಯ ನಂಜುಂಡಸ್ವಾಮಿ ಹೇಳಿದರು.

ತಾಲೂಕಿನ ಹೊನ್ನೇಕೊಡಿಗೆ ಸರ್ಕಾರಿ ಶಾಲಾ ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ವಾರ್ಷಿಕ ಎನ್‌ಎಸ್‌ಎಸ್‌ ಶಿಬಿರದಲ್ಲಿ "ವಿದ್ಯಾರ್ಥಿಗಳಿಗೇಕೆ ಸಾಹಿತ್ಯ " ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಸಾಹಿತ್ಯವು ಹೆಚ್ಚಾಗಿ ಪದಗಳ ರೂಪದಲ್ಲಿ ಬರೆಯಲ್ಪಡುತ್ತದೆ. ಸಾಹಿತ್ಯದಲ್ಲಿ ಕಾವ್ಯ, ವಚನ, ಕಗ್ಗ, ಕೀರ್ತನೆ, ಕಾದಂಬರಿ, ಕಥೆ, ನಾಟಕ, ಹಾಸ್ಯ, ಪ್ರಬಂಧಗಳೆಂಬ ಅನೇಕ ಪ್ರಕಾರಗಳಿವೆ. ಅವುಗಳನ್ನು ಆಳವಾಗಿ ಅಭ್ಯಾಸ ಮಾಡಬೇಕಾದ ಅಗತ್ಯತೆ ಪ್ರಸ್ತುತ ಕಾಲ ಘಟ್ಟದಲ್ಲಿ ಅನಿವಾರ್ಯವಾಗಿದೆ. ವಿದ್ಯಾರ್ಥಿಗಳು ಪ್ರಸಿದ್ದ ಕವಿಗಳು ಬರೆದ ಗ್ರಂಥ ಹಾಗೂ ಪುಸ್ತಕಗಳನ್ನು ಓದುವುದರೊಂದಿಗೆ ಜ್ಞಾನ ಸಂಪಾದನೆ ಮಾಡಬೇಕು. ಕವಿ ಮತ್ತು ಸಾಹಿತಿಗಳ ಜೀವನ ಚರಿತ್ರೆ, ಆತ್ಮ ಕಥೆಗಳನ್ನು ಓದಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಯುವ ಜನರು ಬರೆಯುವ ಆಸಕ್ತಿ ಮೂಡಿಸಿಕೊಂಡಿರುವುದು ಶ್ಲಾಘನೀಯವಾಗಿದೆ. ಕವನ ಬರೆಯುವಾಗ ಕೇವಲ ಪ್ರಾಸ ಪದಗಳಿಗೆ ಹೆಚ್ಚು ಒತ್ತು ನೀಡದೆ ವಸ್ತು ನಿಷ್ಠ ವಿಷಯದ ಬಗ್ಗೆಯೂ ಗಮನ ನೀಡಬೇಕು. ಪ್ರತಿ ನಿತ್ಯ ದಿನ ಪತ್ರಿಕೆಗಳನ್ನು ಓದುವುದರಿಂದ ಶಬ್ದ ಭಂಡಾರ ಹೆಚ್ಚಾಗುತ್ತದೆ. ಅಲ್ಲದೆ ಪ್ರಾಪಂಚಿಕ ಜ್ಞಾನವೂ ಸಿಗಲಿದೆ ಎಂದರು.

ಶಿಬಿರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಧನಂಜಯ, ಶಿಬಿರಾಧಿಕಾರಿಗಳಾದ ರುಖಿಯತ್‌, ಪ್ರೊ.ವಿಶ್ವನಾಥ್, ಎಚ್‌.ಎಂ, ಸಹ ಶಿಬಿರಾಧಿಕಾರಿಗಳಾದ ಜಯಶ್ರೀ ಎಚ್‌.ಎಸ್‌. ಪ್ರೊ. ದಿನಕರ್‌ ನಾಯ್ಕ್, ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಪ್ರಸಾದ್‌ ಆರ್‌.ಕೆ. ಇದ್ದರು.

ಅಗ್ನಿ ಅವಘಡ ಕುರಿತು ಮಾಹಿತಿ: ಅಗ್ನಿ ಶ್ಯಾಮಕದಳದ ಸಿಬ್ಬಂದಿಗಳು ಗುರುವಾರ ಮದ್ಯಾಹ್ನ ಎನ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಪ್ರಾತ್ಯಕ್ಷಿಕೆಯೊಂದಿಗೆ ಅಗ್ನಿ ಅನಾಹುತ ಆಗದಂತೆ ವಹಿಸಬೇಕಾದ ಮುನ್ನಚ್ಚರಿಕೆ ಕ್ರಮ ಹಾಗೂ ಅಗ್ನಿ ಅವಘಡ ಸಂಭವಿಸಿದಾಗ ವಹಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಅಗ್ನಿ ಶ್ಯಾಮಕ ದಳದ ಮುಖ್ಯಸ್ಥ ಹೆನ್ರಿ. ಡಿಸೋಜ ಮಾಹಿತಿ ನೀಡಿ, ಹುಲ್ಲಿನ ಬಣವೆಗಳನ್ನು ಮನೆಯ ಪಕ್ಕದಲ್ಲಿ ಹಾಕಬಾರದು ಎಂದರು ಅಲ್ಲದೆ ಸಿಗರೇಟು, ಬೀಡಿ ಸೇದಿ ನಂತರ ಎಲ್ಲೆಂದರಲ್ಲಿ ಬಿಸಾಡಬಾರದು. ಗ್ಯಾಸ್ ಒಲೆ ಸಿಲಿಂಡರಿಗಿಂತ ಎತ್ತರದ ಜಾಗದಲ್ಲಿ ಇರಿಸಬೇಕು ಮತ್ತು ಅಡಿಗೆ ಅನಿಲ ಸೋರಿಕೆ ಕಂಡು ಬಂದರೆ ಕೂಡಲೇ ಮನೆಯ ಎಲ್ಲಾ ಬಾಗಿಲ, ಕಿಟಕಿ ತೆರೆಯಬೇಕು. ಯಾವುದೇ ವಿದ್ಯುತ್ ಸ್ವಿಚ್‌ ಹಾಕಬಾರದು ಎಂದು ಸಲಹೆ ನೀಡಿದರು.