ಕನ್ನಡಪ್ರಭ ವಾರ್ತೆ ಬೆಳಗಾವಿ
ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಕ್ಕೆ ಸರಜೂ ಕಾಟ್ಕರ್ ವಿಶೇಷ ಕೊಡುಗೆ ನೀಡಿದ್ದಾರೆ. ಮರಾಠಿ ಶಿಕ್ಷಕರ ಮಗನಾದ ಡಾ.ಕಾಟ್ಕರ್ ಅವರು ಹುಬ್ಬಳ್ಳಿಯಿಂದ ಬೆಳಗಾವಿಗೆ ಬಂದು ಕನ್ನಡ ಸಾಹಿತ್ಯ ಕಣಜವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹಿರಿಯ ಸಾಹಿತಿ ಬಸವರಾಜ ಜಗಜಂಪಿ ಹೇಳಿದರು.ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಚಂದ್ರಕಾಂತ ಕುಸನೂರ ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಹಾಗೂ ಎಂ.ಕೆ. ಪಬ್ಲಿಸಿಟಿ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ನೃಪತುಂಗ ಪ್ರಶಸ್ತಿಗೆ ಭಾಜನರಾಗಿರುವ ಸಾಹಿತಿ ಡಾ.ಸರಜೂ ಕಾಟ್ಕರ್ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಳಗಾವಿ ಬಹಳಷ್ಟು ಸಾಹಿತಿಗಳನ್ನು ಬೆಳೆಸಿದೆ. ಇಂಥ ಬೆಳಗಾವಿಗೆ ಬಂದ ಅವರು ಸಾಹಿತ್ಯ ಲೋಕದ ಸವ್ಯಸಾಚಿ ಎನಿಸಿದ್ದಾರೆ. ಸರಜೂ ಕಾಟ್ಕರ್ ಅವರು ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಬೆಳೆಸಿದ್ದಾರೆ. ಅವರಿಗೆ ಇನ್ನಷ್ಟು ಪ್ರಶಸ್ತಿಗಳು ಲಭಿಸಲು ಎಂದು ಶುಭಹಾರೈಸಿದರು.ಹಿರಿಯ ಸಾಹಿತಿ ಬಿ.ಎಸ್.ಗವಿಮಠ ಮಾತನಾಡಿ, ೮೦ ಕೃತಿಗಳನ್ನು ಬರೆದಿರುವ ಸರಜೂ ಕಾಟ್ಕರ್ ೩೫ಕ್ಕೂ ಹೆಚ್ಚು ಆಯ್ಕೆ ಸಮಿತಿಗಳಲ್ಲಿ ಕೆಲಸ ಮಾಡಿದ ಅಪರೂಪದ ಸಾಹಿತಿ. ಅವರಿಂದ ಸಾಹಿತ್ಯ ಲೋಕ ಇನ್ನಷ್ಟು ಬೆಳಗಬೇಕಿದೆ. ಸಾಹಿತ್ಯ ಮತ್ತು ಪತ್ರಿಕೋದ್ಯಮ ಎರಡೂ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ವಿಶಿಷ್ಟ ಸಾಹಿತಿ ಸರಜೂ ಕಾಟ್ಕರ್. ಪ್ರಶಸ್ತಿಗಳನ್ನೆ ಅನುಮಾನಿಸುವ ಸಂದರ್ಭದಲ್ಲಿ ಸರಜೂ ಕಾಟ್ಕರ್ ಅಂಥವರಿಗೆ ಪ್ರಶಸ್ತಿ ಬಂದರೆ ಪ್ರಶಸ್ತಿಯ ಮೌಲ್ಯ ಹೆಚ್ಚುತ್ತದೆ ಎಂದರು.ಡಾ.ಸರಜೂ ಕಾಟ್ಕರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಕನ್ನಡ ಸಾಹಿತ್ಯದ ಶ್ರೇಷ್ಠ ಪ್ರಶಸ್ತಿ ಎನಿಸಿರುವ ನೃಪತುಂಗ ಪ್ರಶಸ್ತಿ ಬಂದಿರುವುದನ್ನು ನಂಬಲಾಗಲಿಲ್ಲ. ಬೆಳಗಾವಿ ನನಗೆ ಎಲ್ಲವನ್ನೂ ನೀಡಿ ಬೆಳೆಸಿದೆ. ಜ್ಞಾನ ಪೀಠ ಪ್ರಶಸ್ತಿಯಷ್ಟೇ ಮಹತ್ವದ ನೃಪತುಂಗ ಪ್ರಶಸ್ತಿ ಸಿಕ್ಕಿದ್ದು ಅತ್ಯಂತ ಸಂತಸ ನೀಡಿದೆ ಎಂದರು.ಸಾಹಿತಿ ಎಲ್.ಎಸ್.ಶಾಸ್ತ್ರಿ ನ್ಯಾಯವಾದಿ ಎಸ್.ಎಂ.ಕುಲಕರ್ಣಿ, ಚಂದ್ರಕಾಂತ ಕುಸನೂರ ಪ್ರತಿಷ್ಠಾನದ ಅಧ್ಯಕ್ಷ ರವಿ ಕೊಟಾರಗಸ್ತಿ, ರಂಗತಜ್ಞ ರಾಮಕೃಷ್ಣ ಮರಾಠೆ, ಆರ್.ಬಿ.ಕಟ್ಟಿ, ಎಂ.ಕೆ.ಜೈನಾಪುರ, ಶಿರೀಶ ಜೋಶಿ, ಪಿ.ಜಿ.ಕೆಂಪಣ್ಣವರ್ಇ, ಇತರರು ಉಪಸ್ಥಿತರಿದ್ದರು.