ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾಭಿಮಾನ ಸ್ವಲ್ಪಮಟ್ಟಿಗೆ ಕುಂದುತ್ತಿದೆ ಎಂದು ನಿವೃತ್ತ ವಿಷಯ ಪರಿವೀಕ್ಷಕ ಎಸ್.ಲೋಕೇಶ್ ಕಳವಳ ವ್ಯಕ್ತಪಡಿಸಿದರು.ನಗರದ ನೆಹರು ನಗರದಲ್ಲಿರುವ ವಿ.ಎಲ್.ಎನ್.ವಿದ್ಯಾಸಂಸ್ಥೆಯ ಡ್ಯಾಫೋಡಿಲ್ಸ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ- ಪುಸ್ತಕಮೇಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಕನ್ನಡದ ಭಾಷೆಯನ್ನು ದ್ವಿತೀಯ- ತೃತೀಯ ಭಾಷೆಯನ್ನಾಗಿ ಓದುವ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಅಭಿಮಾನ ಸ್ವಲ್ಪಮಟ್ಟಿಗೆ ಕುಂದುತ್ತಿದೆ. ಭಾಷೆಯ ಅಭಿಮಾನ ಅಂಕದಿಂದ ತುಂಬಿಹೋಗಬಾರದು, ಅಂಕದಿಂದ ಗೌಣವೂ ಆಗಬಾರದು ಎಂದು ನುಡಿದರು.ಕನ್ನಡ ಭಾಷೆಯನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತೇವೆಯೋ ಎಷ್ಟರಮಟ್ಟಿಗೆ ಬೆಳೆಸುತ್ತೇವೆ ಎಂಬುದೂ ಕೂಡ ಬಹಳ ಮುಖ್ಯ. ಸಾಹಿತಿ ಜಿ.ಪಿ.ರಾಜರತ್ನಂ ಅವರು ಕನ್ನಡ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದರು, ಸಾಕಷ್ಟು ಪದ್ಯಗಳನ್ನು ಆಡುಭಾಷೆಯಲ್ಲಿ ರಚಿಸಿದ್ದಾರೆ ಎಂದು ಹೇಳಿದರು.
ಕನ್ನಡ ರಾಜ್ಯೋತ್ಸವದ ಹೆಮ್ಮೆಯನ್ನು ಹಾಡುಗಳ ರೂಪದಲ್ಲಿ ಸಾಹಿತಿಗಳು ಕಟ್ಟಿಕೊಟ್ಟಿದ್ದಾರೆ. ಈ ಕರುನಾಡಿಗೆ ಅಸ್ತಿತ್ವ, ಅಸ್ಮಿತೆಯನ್ನು ತಂದುಕೊಡುವ ಹಾಡುಗಳು ಜನಪ್ರಿಯವಾಗಿವೆ. ಇಲ್ಲಿ ಹಾಡಿದ ಹಾಡುಗಳು ಕೇವಲ ಪದಗಳ ಗುಚ್ಚವಾಗಿ ಬಂದಿಲ್ಲ. ಹೋರಾಟದ ರೂಪಕವಾಗಿ ಬಂದಿವೆ. ಅವೆಲ್ಲವನ್ನೂ ಕೇವಲ ರಚನೆಗಾಗಿ ಬರೆದಿಲ್ಲ. ಕನ್ನಡವನ್ನು ಹೃದಯದ ಭಾಷೆಯಾಗಿಸಿಕೊಂಡು ಹೊರತಂದ ಅದ್ಭುತ ರಚನೆಗಳಾಗಿವೆ ಎಂದು ತಿಳಿಸಿದರು.ಮತ್ತೊಬ್ಬ ನಿವೃತ್ತ ವಿಷಯ ಪರಿವೀಕ್ಷಕ ಸಿ.ಎಲ್.ನಂಜರಾಜು, ವಿದ್ಯಾರ್ಥಿಗಳು ಪ್ರಶ್ನೆಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು, ಪಠ್ಯ ಪುಸ್ತಕಗಳನ್ನು ಹೆಚ್ಚು ಓದಬೇಕು, ನೋಟ್‌ಬುಕ್‌ನಲ್ಲಿ ಪ್ರಶ್ನೆಗೆ ಉತ್ತರ ಮಾತ್ರವಿರುತ್ತದೆ. ಆದರೆ ಪುಸ್ತಕ ಓದಿ ಪರೀಕ್ಷೆ ಬರೆಯುವುದರಿಂದ ಜ್ಞಾನ ಇನ್ನಷ್ಟು ವೃದ್ಧಿಸುತ್ತದೆ ಎಂದು ತಿಳಿಸಿದರು.
ಖ್ಯಾತ ಸಾಹಿತಿ ಡಾ.ಪ್ರದೀಪಕುಮಾರ ಹೆಬ್ರಿ ವಿರಚಿತ ಕೃತಿ ಲೋಕಾರ್ಪಣೆಗೊಂಡಿತು, ವಿದ್ಯಾರ್ಥಿಗಳೇ ಖರೀದಿಸಿ ಓದಿ ತಂದಿದ್ದ ಮಕ್ಕಳ ಪುಸ್ತಕಗಳ ಪುಸ್ತಕ ಮನೆ ಅನಾವರಣಗೊಂಡಿತು, ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಾಧಕರಿಗೆ ಅಭಿನಂದನೆ ನಡೆಯಿತು.ಕಾರ್ಯಕ್ರಮದಲ್ಲಿ ವಿ.ಎಲ್.ಎನ್. ವಿದ್ಯಾ ಸಂಸ್ಥೆ ಅಧ್ಯಕ್ಷ ಪ್ರದೀಪಕುಮಾರ ಹೆಬ್ರಿ, ಕಾರ್ಯದರ್ಶಿ ಸುಜಾತಕೃಷ್ಣ, ಟ್ರಸ್ಟಿ ಮದನ್‌ಲಾಲ್, ಆಡಳಿತಾಧಿಕಾರಿ ದೀಪ್ತಿಕೃಷ್ಣ, ಮುಖ್ಯಶಿಕ್ಷಕಿ ನಯನಾ ಮತ್ತು ಶಿಕ್ಷಕಿಯರ ವೃಂದ ಹಾಜರಿದ್ದರು.