ಸಾರಾಂಶ
ಅಜೀಜಅಹ್ಮದ ಬಳಗಾನೂರ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಕೈ ಮುಗಿದು ಏರು ಇದು ಕನ್ನಡದ ತೇರು...!
ಈ ಬಸ್ ನೋಡಿದ ಪ್ರತಿಯೊಬ್ಬರ ಬಾಯಲ್ಲಿ ಬರುವ ಮಾತಿದು. ಹುಬ್ಬಳ್ಳಿಯ ಗ್ರಾಮಾಂತರ ಘಟಕ-1ರ ಚಾಲಕ ಹಾಗೂ ನಿರ್ವಾಹಕರ ತಂಡವೊಂದು ಬಸ್ ಅನ್ನು ಕನ್ನಡದ ತೇರಿನಂತೆ ಅಲಂಕರಿಸಿ ಬುಧವಾರ ನಗರದಾದ್ಯಂತ ಸಂಚರಿಸಿ ಕನ್ನಡದ ಜಾಗೃತಿ ಮೂಡಿಸಿರುವುದು ಕನ್ನಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.ಘಟಕದ ಚಾಲಕ ನಾಗರಾಜ ಭೂಮಣ್ಣವರ, ನಿರ್ವಾಹಕ ಮಂಜುನಾಥ ಮಡಿವಾಳರ ನೇತೃತ್ವದ ಐವರು ಚಾಲಕ ಹಾಗೂ ನಿರ್ವಾಹಕರ ತಂಡ ಸೇರಿಕೊಂಡು ಕಳೆದ 5 ವರ್ಷಗಳಿಂದ ಕನ್ನಡ ರಾಜ್ಯೋತ್ಸವದ ದಿನದಂದು ಕನ್ನಡಾಂಬೆಯ ತೇರನ್ನು ತಯಾರಿಸುತ್ತಾ ಬಂದಿದೆ.
ಏನೇನಿದೆ ಈ ತೇರಿನಲ್ಲಿ?ಕನ್ನಡದ ತೇರು (ಬಸ್)ನ್ನು ಹಳದಿ-ಕೆಂಪು ಬಣ್ಣ ಹೊಂದಿದ ಬಾವುಟಗಳು ಹಾಗೂ ಬಲೂನ್‌ಗಳಿಂದ ಶೃಂಗರಿಸಲಾಗಿತ್ತು. ಅಲ್ಲದೇ ಕವಿಗಳು, ಸಾಹಿತಿಗಳು, ಇತಿಹಾಸಕಾರರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸ್ವತಂತ್ರ್ಯ ಹೋರಾಟಗಾರರು, ಕನ್ನಡಕ್ಕಾಗಿ ಶ್ರಮಿಸಿದ ಹಲವು ಮಹನಿಯರ ಭಾವಚಿತ್ರದೊಂದಿಗೆ ಅವರ ಸಮಗ್ರ ಮಾಹಿತಿ ಹೊಂದಿದ ಪ್ರತಿ, ರಾಜ್ಯದಲ್ಲಿರುವ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು ಹಾಗೂ ಅದರ ಮಾಹಿತಿಯ ಫಲಕಗಳನ್ನು ಅಳವಡಿಸಲಾಗಿದೆ.
ಕಳೆದ 3 ದಿನಗಳಿಂದ ಬಸ್ಸನ್ನು ಶೃಂಗರಿಸುವ ಕಾರ್ಯ ಕೈಗೊಳ್ಳಲಾಗಿದೆ.ಇನ್ನು ಇದರ ಸಿದ್ಧತೆಗೆ ಬೇಕಾದ ಕವಿಗಳ, ಸಾಹಿತಿಗಳ ಸಮಗ್ರ ಮಾಹಿತಿಗಾಗಿ 8-10 ಜನರ ತಂಡವು ಕಳೆದ ಒಂದು ತಿಂಗಳಿನಿಂದ ಪರಿಶ್ರಮ ವಹಿಸುವ ಮೂಲಕ ಕನ್ನಡ ನಾಡಿನ ಸಮಗ್ರ ಮಾಹಿತಿಯುಳ್ಳ ಕನ್ನಡದ ತೇರನ್ನಾಗಿಸಿದೆ.ಪ್ರತಿ ವರ್ಷವೂ ವಿನೂತನವಾಗಿ ಈ ರಥವನ್ನು ಶೃಂಗರಿಸಲಾಗುತ್ತಿದೆ ಎಂದು ಚಾಲಕ ವಿನಾಯಕ ಕಲ್ಲಣ್ಣವರ, ಶಿವಪ್ಪ ದ್ಯಾಮಣ್ಣವರ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.₹80 ಸಾವಿರ ಖರ್ಚು:
ಈ ಬಸ್ಸನ್ನು ಕನ್ನಡದ ತೇರಾಗಿಸಲು 8-10 ಚಾಲಕ ಹಾಗೂ ನಿರ್ವಾಹಕರು ಸೇರಿ ಸುಮಾರು ₹ 80 ಸಾವಿರಕ್ಕೂ ಅಧಿಕ ಖರ್ಚು ಮಾಡಲಾಗಿದೆ. ಅದೂ ವೈಯಕ್ತಿತವಾಗಿ ₹ 8-10 ಸಾವಿರಕ್ಕೂ ಅಧಿಕ ಹಣ ವ್ಯಯ ಮಾಡಿದ್ದಾರೆ. ಬಸ್ ಶೃಂಗರಿಸಲು ಸಾರಿಗೆ ಸಂಸ್ಥೆಯಿಂದ ಯಾವುದೇ ಹಣ ಇರುವುದಿಲ್ಲ. ಕನ್ನಡ ನಾಡಿಗೆ ನಮ್ಮಿಂದ ಏನಾದರೂ ಸೇವೆ ಸಲ್ಲಿಸಬೇಕು ಎಂಬ ಉದ್ದೇಶ ಹೊಂದಿ ಕಳೆದ 5 ವರ್ಷಗಳಿಂದ ಈ ಕಾರ್ಯ ಕೈಗೊಳ್ಳುತ್ತಿರುವುದಾಗಿ ಚಾಲಕ ಶಿವಪ್ಪ ದ್ಯಾಮಣ್ಣವರ ತಿಳಿಸಿದರು.ಬಾಕ್ಸ್...
ಎಲ್ಲೆಲ್ಲಿ ಸಂಚಾರ:ನಗರದ ಗೋಕುಲ ರಸ್ತೆಯಲ್ಲಿರುವ ಸಾರಿಗೆ ಸಂಸ್ಥೆಯ ಘಟಕದಿಂದ ಆರಂಭವಾದ ಕನ್ನಡ ತೇರಿನ ಸಂಚಾರವು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ, ಸಾಯಿಬಾಬಾ ದೇವಸ್ಥಾನ, ರಾಣಿ ಚೆನ್ನಮ್ಮ ವೃತ್ತ, ಹೊಸೂರು ಬಸ್ ನಿಲ್ದಾಣ, ಸಿದ್ಧಾರೂಢರ ಮಠದ ವರೆಗೆ ತೆರಳಿ ಪ್ರತಿಯೊಂದು ಸ್ಥಳದಲ್ಲಿ ಗಂಟೆಗೂ ಹೆಚ್ಚುಕಾಲ ನಿಲ್ಲಿಸಿ ಜನರಿಗೆ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಯಿತು.
ಕೋಟ್...ಕನ್ನಡಾಂಬೆಯ ಕುರಿತು ಪ್ರತಿವರ್ಷ ಏನಾದರೂ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬ ಯೋಚನೆ ಬಂದಿತು.ಸಹೋದ್ಯೋಗಿಗಳೆಲ್ಲ ಸೇರಿ ಈ ಕನ್ನಡ ತೇರು ನಿರ್ಮಾಣ ಮಾಡಿದೆವು. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದೆಯೂ ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ.
- ನಾಗರಾಜ ಬೂಮಣ್ಣವರ, ಬಸ್ ಚಾಲಕ