ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಪೌರ ಕಾರ್ಮಿಕರಾಗಿದ್ದ ಮಹಿಳೆ, ಕನ್ನಡತಿ ಸವಿತಾ ಕಾಂಬಳೆ ಅವರಿಗೆ ಬೆಳಗಾವಿ ಮೇಯರ್ ಪಟ್ಟ ಕಟ್ಟುವ ಮೂಲಕ ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸದಲ್ಲಿ ಆಡಳಿತಾರೂಢ ಬಿಜೆಪಿ ಮತ್ತೊಂದು ಐತಿಹಾಸಿಕ ದಾಖಲೆ ಸೃಷ್ಟಿಸಿದೆ.
ಅಲ್ಲದೆ, 5 ವರ್ಷಗಳ ಬಳಿಕ ಬೆಳಗಾವಿ ಮಹಾನಗರಕ್ಕೆ ಕನ್ನಡತಿಯೊಬ್ಬರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ವಾರ್ಡ್ ನಂ.17ರ ಸದಸ್ಯೆ ಸವಿತಾ ಕಾಂಬಳೆ ಮೇಯರ್ ಆಗಿದ್ದು, ದಲಿತ ಮಹಿಳೆಯೊಬ್ಬರಿಗೆ ಮೇಯರ್ ಸ್ಥಾನಕ್ಕೆ ಪಟ್ಟಕಟ್ಟುವ ಮೂಲಕ ಬಿಜೆಪಿ ಇತಿಹಾಸ ನಿರ್ಮಿಸಿದೆ.
2018-19ರಲ್ಲಿ ಕನ್ನಡಿಗ ಬಸವರಾಜ ಚಿಕ್ಕಲದಿನ್ನಿ ಮೇಯರ್ ಆಗಿದ್ದರು. ಬಿಜೆಪಿಯ ಆಡಳಿತದ ಮೊದಲ ಅವಧಿಗೆ ನಡೆದ ಚುನಾವಣೆಯಲ್ಲಿ ಮೇಯರ್, ಉಪಮೇಯರ್ ಎರಡೂ ಸ್ಥಾನ ಮರಾಠಿಗರ ಪಾಲಾಗಿದ್ದವು.
ಆದರೆ, ಈ ಬಾರಿ ಮೇಯರ್ ಸ್ಥಾನ ಕನ್ನಡಿಗರ ಪಾಲಾಗಿದ್ದರೆ, ಉಪಮೇಯರ್ ಸ್ಥಾನ ಮರಾಠಿ ಭಾಷಿಕರ ಪಾಲಾಗಿದೆ.
ಪಾಲಿಕೆಯ ಸಭಾಭವನದಲ್ಲಿ ಗುರುವಾರ ನಡೆದ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಆಯ್ಕೆ ಬಯಸಿ ಸವಿತಾ ಕಾಂಬಳೆ ಹಾಗೂ ಲಕ್ಷ್ಮೀ ರಾಠೋಡ ನಾಮಪತ್ರ ಸಲ್ಲಿಸಿದ್ದರು.
ಆದರೆ, ಪಕ್ಷದ ನಾಯಕರ ಸೂಚನೆ ಮೇರೆಗೆ ಲಕ್ಷ್ಮೀ ತಮ್ಮ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಸವಿತಾ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾದರು.
ಉಪಮೇಯರ್ ಸ್ಥಾನಕ್ಕೆ ಬಿಜೆಪಿಯ ಆನಂದ ಚೌಹಾಣ್ ಚುನಾಯಿತರಾದರು.ಮೂಲತಃ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಶಿರಗೂರ ಗ್ರಾಮದ ಸವಿತಾ, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು.
ಬೆಳಗಾವಿಯ ಸದಾಶಿವನಗರದ ಬೆಲ್ದಾರ ಛಾವಣಿ ಪ್ರದೇಶದಲ್ಲಿ ಉಳಿದುಕೊಂಡು, ಸುತ್ತಮುತ್ತಲಿನ ಮನೆಗಳ ಕಸಮುಸುರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.
ಕೆಲ ಕಾಲ ಪೌರ ಕಾರ್ಮಿಕರಾಗಿಯೂ ಕೆಲಸ ನಿರ್ವಹಿಸಿದ್ದರು. ನಿತ್ಯಕೂಲಿ ಕೆಲಸ ಮಾಡಿಯೇ ಜೀವನ ಸಾಗಿಸುತ್ತಿದ್ದ ಸವಿತಾ ಅವರು ತಮ್ಮನ್ನು ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡರು.
ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂ.17ರಲ್ಲಿ ಕಣಕ್ಕಿಳಿದು, ಮೊದಲ ಯತ್ನದಲ್ಲೇ ಗೆಲುವು ಸಾಧಿಸಿದರು. ಬಳಿಕ, ಉದ್ಯಮಬಾಗದಲ್ಲಿ ಉದುಬತ್ತಿ ತಯಾರಿಕೆ ಕಂಪನಿಯಲ್ಲಿ ಕೆಲಸ ಮಾಡಿದರು.
ಹೆಲ್ಮೇಟ್ ಕಂಪನಿಯೊಂದರಲ್ಲಿಯೂ ಕೆಲಸಕ್ಕೆ ಸೇರಿದರು. ಈ ಜಂಜಾಟದ ನಡುವೆಯೇ ಸರ್ದಾರ ಹೈಸ್ಕೂಲ್‌ನಲ್ಲಿ ಎಸ್ಸೆಸ್ಸೆಲ್ಸಿವರೆಗೆ ವ್ಯಾಸಂಗ ಮಾಡಿದರು.