ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಆಡಳಿತದಲ್ಲಿ ಬಳಸಬೇಕು: ಪ್ರೊ.ಪುರುಷೋತ್ತಮ ಬಿಳಿಮಲೆ

| Published : Feb 16 2025, 01:45 AM IST

ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಆಡಳಿತದಲ್ಲಿ ಬಳಸಬೇಕು: ಪ್ರೊ.ಪುರುಷೋತ್ತಮ ಬಿಳಿಮಲೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಲ್ಲಿ 19519 ಮಾತೃ ಭಾಷೆಗಳು ಇವೆ. ಹಲವು ಭಾಷೆಗಳು ನಶಿಸಿ ಹೋಗುತ್ತಿವೆ. ಕನ್ನಡದಲ್ಲಿ ಹೆಚ್ಚು ಕೃತಿಗಳನ್ನು ರಚನೆ ಮಾಡಿದವರು ಕುವೆಂಪು. ಮೈಸೂರು ಸಾಹಿತಿಗಳ ತವರೂರು. ಬೇರೆ ಭಾಷೆಗಳನ್ನು ಕಲಿಯಿರಿ, ಆದರೆ ಕನ್ನಡವನ್ನು ಹೆಚ್ಚು ಬಳಕೆ ಮಾಡಬೇಕು. ಕನ್ನಡ ಬಳಕೆಗೆ 3000 ಆದೇಶಗಳನ್ನು ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕನ್ನಡ ಭಾಷೆಯನ್ನು ಆಡಳಿತದಲ್ಲಿ ಕಡ್ಡಾಯವಾಗಿ ಬಳಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕನ್ನಡ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡವನ್ನು ಆಡಳಿತದಲ್ಲಿ ಅನುಷ್ಠಾನಕ್ಕೆ ತರಲು ಸರ್ಕಾರಗಳು ಹಲವು ಆದೇಶಗಳನ್ನು ಹೊರಡಿಸಿವೆ. 2000 ವರ್ಷಗಳ ಇತಿಹಾಸ ಇರುವ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಭಾರತದಲ್ಲಿ 19519 ಮಾತೃ ಭಾಷೆಗಳು ಇವೆ. ಹಲವು ಭಾಷೆಗಳು ನಶಿಸಿ ಹೋಗುತ್ತಿವೆ. ಕನ್ನಡದಲ್ಲಿ ಹೆಚ್ಚು ಕೃತಿಗಳನ್ನು ರಚನೆ ಮಾಡಿದವರು ಕುವೆಂಪು. ಮೈಸೂರು ಸಾಹಿತಿಗಳ ತವರೂರು. ಬೇರೆ ಭಾಷೆಗಳನ್ನು ಕಲಿಯಿರಿ, ಆದರೆ ಕನ್ನಡವನ್ನು ಹೆಚ್ಚು ಬಳಕೆ ಮಾಡಬೇಕು. ಕನ್ನಡ ಬಳಕೆಗೆ 3000 ಆದೇಶಗಳನ್ನು ಮಾಡಲಾಗಿದೆ. ಕೇವಲ ಆದೇಶಗಳಿಂದ ಭಾಷೆ ಉಳಿಸಲು ಸಾಧ್ಯವಿಲ್ಲ. ಕನ್ನಡವನ್ನು ಬಳಕೆ ಮಾಡುವ ಮೂಲಕ ಉಳಿಸಬೇಕು ಎಂದು ಅವರು ಹೇಳಿದರು.

ಕನ್ನಡ ಭಾಷೆಯ ಬೋಧನೆಯನ್ನು ಸುಲಭಗೊಳಿಸಿ ಬೋಧನೆ ಮಾಡಬೇಕು. ಜಿಲ್ಲಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಕನ್ನಡ ಬೋಧನೆಯನ್ನು ಹೆಚ್ಚು ಮಾಡಬೇಕು. ಬ್ಯಾಂಕ್ ಗಳಲ್ಲಿ ಹೆಚ್ಚಾಗಿ ಹೊರ ರಾಜ್ಯದವರು ಇರುತ್ತಾರೆ. ಆದರೆ ಅವರು 3 ತಿಂಗಳ ಒಳಗೆ ಕನ್ನಡವನ್ನು ಕಲಿತು ವ್ಯವಹಾರ ನಡೆಸಬೇಕು. ಇಲ್ಲದಿದ್ದಲ್ಲಿ ಸ್ಥಳೀಯರೊಂದಿಗೆ ವ್ಯವಹಾರ ಮಾಡಲು ಕಷ್ಟ ಆಗುತ್ತದೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಮಾತನಾಡಿ, ಸರ್ಕಾರದ ಇಲಾಖೆಗಳ ಅಂತರ್ಜಾಲ ಪುಟ ಕನ್ನಡದಲ್ಲಿ ಇರಬೇಕು. ಜಿಲ್ಲೆಯ ಅಂಗಡಿ ಮುಗ್ಗಟ್ಟುಗಳ ಬೋರ್ಡುಗಳು ಶೇ.60 ರಷ್ಟು ಕನ್ನಡದಲ್ಲಿ ಇರಬೇಕು. ಸರ್ಕಾರಿ ಇಲಾಖೆಗಳ ಕಡತಗಳಲ್ಲಿ ಕನ್ನಡವನ್ನು ಬಳಕೆ ಮಾಡಬೇಕು. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಮಕ್ಕಳು ಅನುತ್ತೀರ್ಣ ಆಗುತ್ತಿರುವ ಬಗ್ಗೆ ವರದಿ ಇದ್ದು, ಕನ್ನಡ ಭಾಷೆಗೆ ಹೆಚ್ಚಿನ ಒತ್ತು ನೀಡಿ ಬೋಧನೆ ಮಾಡಬೇಕು ಎಂದು ಸೂಚಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯ ಟಿ. ಗುರುರಾಜ್ ಮಾತನಾಡಿ, ಹಲವು ಇಲಾಖೆಗಳ ಮೋಹರುಗಳು ಇಂಗ್ಲಿಷ್ ನಲ್ಲಿ ಇದ್ದು, ಕನ್ನಡದ ಮೋಹರುಗಳನ್ನು ಬಳಕೆ ಮಾಡಬೇಕು ಎಂದರು.

ಕನ್ನಡ ಕ್ರಿಯಾ ಸಮಿತಿಯ ಕಾರ್ಯಾಧ್ಯಕ್ಷ ಸ.ರ. ಸುದರ್ಶನ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಜಿಲ್ಲೆಯಲ್ಲಿ ಇರುವ ನಾಮಫಲಕಗಳು ಕನ್ನಡಲ್ಲಿ ಇವೆ. ಆದರೆ, ಕೆಲವು ಕಡೆ 60:40 ರೇಶಿಯೋ ಇಲ್ಲ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಪರವಾನಗಿ ನವೀಕರಣಕ್ಕೆ ಬಂದಾಗ ಈ ಬಗ್ಗೆ ಷರತ್ತನ್ನು ವಿಧಿಸಿ ಅನುಷ್ಠಾನ ಮಾಡಲಾಗುವುದು.

- ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ