ಸಾರಾಂಶ
ಇತಿಹಾಸ ನೋಡಿದಾಗ ಕನ್ನಡದ ಹಿರಿಮೆ ನಮಗೆ ತಿಳಿಯುತ್ತದೆ. ಕನ್ನಡ ನಾಡಿನಲ್ಲಿರುವ ಪ್ರತಿಯೊಬ್ಬರೂ ಕನ್ನಡವನ್ನು ಗೌರವಿಸುವುದರ ಜತೆ ಬಳಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ಶಿರಸಿ: ಕನ್ನಡ ನಾಡು, ನುಡಿ ಮರೆಯುವುದು ಮನುಷ್ಯತ್ವವಲ್ಲ. ಕನ್ನಡವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ವಿದ್ಯಾರ್ಥಿಗಳು ಹಾಗೂ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ಮಂಗಳವಾರ ನಗರದ ನೆಮ್ಮದಿ ಕುಟೀರದ ರಂಗಧಾಮದಲ್ಲಿ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ತಾಲೂಕು ಘಟಕ ಆಶ್ರಯದಲ್ಲಿ ಆಯೋಜಿಸಿದ್ದ ೨೦೨೩- ೨೪ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ೧೦೦ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇತಿಹಾಸ ನೋಡಿದಾಗ ಕನ್ನಡದ ಹಿರಿಮೆ ನಮಗೆ ತಿಳಿಯುತ್ತದೆ. ಕನ್ನಡ ನಾಡಿನಲ್ಲಿರುವ ಪ್ರತಿಯೊಬ್ಬರೂ ಕನ್ನಡವನ್ನು ಗೌರವಿಸುವುದರ ಜತೆ ಬಳಸಬೇಕು ಎಂದರು.ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಬಸವರಾಜ ಮಾತನಾಡಿ, ಇಂಗ್ಲಿಷ್ ಸಂಪರ್ಕ ಭಾಷೆಯಾಗಿ ಕಲಿಯಲು ಅಭ್ಯಂತರವಿಲ್ಲ. ತನ್ನ ಮಾತೃಭಾಷೆಯಲ್ಲಿ ಕಲಿತ ವಿದ್ಯೆ ಬೆಲೆ ಕಟ್ಟಲಾಗದು. ಕನ್ನಡ ಸಾಹಿತ್ಯ ಪರಿಷತ್ ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನರಿಗೆ ಹತ್ತಿರವಾಗುತ್ತಿದೆ. ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಸನ್ಮಾನ ಕಿರಿದಾಯಿತೆಂದು ಮಕ್ಕಳು ಭಾವಿಸಬಾರದು, ಶತಮಾನಗಳ ಇತಿಹಾಸವಿರುವ ಕನ್ನಡ ಪರಿಷತ್ತು ನಿಮಗೆ ಅಭಿನಂದಿಸಿದೆ ಎಂಬ ಭಾವನೆ ನಿಮಗಿರಲಿ. ಕನ್ನಡ ಉಳಿವಿಗೆ ಅದರ ಬೆಳವಣಿಗೆಗೆ ನಿಮ್ಮಿಂದ ಇನ್ನೂ ಹೆಚ್ಚಿನ ಕೊಡುಗೆ ಕನ್ನಡಕ್ಕೆ ಸಿಗಲಿ ಎನ್ನುವ ಸದುದ್ದೇಶದಿಂದ ಸನ್ಮಾನ ಪತ್ರ ನೀಡಿ ಗೌರವಿಸಿದ್ದೇವೆ ಎಂದರು.ನಿವೃತ್ತ ಪ್ರಾಚಾರ್ಯ ಪ್ರೊ. ಕೆ.ಎನ್. ಹೊಸ್ಮನಿ ಮಾತನಾಡಿ, ಭಾಷೆ ದೇಶದ ಸಂಸ್ಕೃತಿಯಾಗಿದೆ. ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಅವರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.೨೦೨೩- ೨೪ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ೧೦೦ ಅಂಕ ಪಡೆದ ೧೬೬ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಾಸಕ ಭೀಮಣ್ಣ ನಾಯ್ಕ ಅಭಿನಂದನೆ ಸಲ್ಲಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ವಿ.ಪಿ. ಹೆಗಡೆ ವೈಶಾಲಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಯಲ್ಲಾಪುರ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಮತ್ತಿತರರು ಇದ್ದರು. ಕಸಾಪ ಶಿರಸಿ ತಾಲೂಕಾಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರಿಕಾಂಬಾ ಪ್ರೌಢಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಸಾಪ ಶಿರಸಿ ಘಟಕದ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ಸ್ವಾಗತಿಸಿದರು. ಕೃಷ್ಣ ಪದಕಿ ನಿರೂಪಿಸಿದರು. ವಿ.ಆರ್. ಹೆಗಡೆ ಮತ್ತಿಘಟ್ಟಾ ವಂದಿಸಿದರು.