ಕನ್ನಡನಾಡು ಮಾದಕ ವಸ್ತುಗಳ ಬೀಡಾಗುತ್ತಿರುವುದು ನಮ್ಮ ದುರಂತ ಎಂದು ಸಂಪನ್ಮೂಲ ವ್ಯಕ್ತಿ ಹಾಗೂ ಪತ್ರಕರ್ತ ಎಚ್.ಎಂ. ಸದಾನಂದ ಹೇಳಿದ್ದಾರೆ.

- ಗುಳದಹಳ್ಳಿ, ಎರೇಬೂದಿಹಾಳು ಶಾಲೆಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

- - -

ಮಲೇಬೆನ್ನೂರು: ಕನ್ನಡನಾಡು ಮಾದಕ ವಸ್ತುಗಳ ಬೀಡಾಗುತ್ತಿರುವುದು ನಮ್ಮ ದುರಂತ ಎಂದು ಸಂಪನ್ಮೂಲ ವ್ಯಕ್ತಿ ಹಾಗೂ ಪತ್ರಕರ್ತ ಎಚ್.ಎಂ. ಸದಾನಂದ ಹೇಳಿದರು. ಇಲ್ಲಿಗೆ ಸಮೀಪದ ಗುಳದಹಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಎರೇಬೂದಿಹಾಳು ಪಿ ಬಸವನಗೌಡ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಜಾಗೃತಿ ಉಪನ್ಯಾಸ ನೀಡಿದರು.

ಭಾರತವನ್ನು ದುರ್ಬಲಗೊಳಿಸಲು ಬರ್ಮಾ, ಆಫ್ಘಾನಿಸ್ತಾನ, ಥೈಲ್ಯಾಂಡ್, ನೈಜೀರಿಯಾ ಮತ್ತು ನೇಪಾಳ ರಾಷ್ಟ್ರಗಳು ಯುವಕರನ್ನು ಗುರಿಯಾಗಿಸಿ ಸುಂದರವಾದ ಯುವತಿಯರ ಮೂಲಕ ಮಾದಕ ವಸ್ತುಗಳನ್ನು ವಿತರಿಸುತ್ತಿವೆ. ಇದು ಖಂಡನೀಯ ಸಂಗತಿ. ಕೋಲ್ಕತ್ತಾ, ಮುಂಬೈ, ಚೆನ್ನೈ, ಹೈದರಾಬಾದ್, ಅಹಮದಾಬಾದ್, ಬೆಂಗಳೂರು ಮುಂತಾದ ಬೃಹತ್‌ ಮಹಾನಗರಗಳು ಡ್ರಗ್ ಸಿಟಿಗಳಾಗುವುದು ಅಪಾಯಕಾರಿ ಎಂದರು.

ರಾಜ್ಯದ ಪ್ರವಾಸಿ ತಾಣಗಳಾದ ಉಡುಪಿ, ದಕ್ಷಿಣ ಕನ್ನಡ, ಹಂಪಿ, ಮಂಗಳೂರು, ಗೋಕರ್ಣ, ಧಾರವಾಡ, ಮುರ್ಡೇಶ್ವರ ಕ್ಷೇತ್ರಗಳಲ್ಲೂ ವಿದೇಶಿ ಪೆಡ್ಲರ್‌ಗಳಿಂದ ಮಾದಕ ವಸ್ತುಗಳು ಮಾರಾಟ ಆಗುತ್ತಿವೆ. ಕೆಲ ಯಕ್ಷಗಾನ ಕಲಾವಿದರೂ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಈ ಎಲ್ಲ ಅನಿಷ್ಠಗಳಿಂದ ಭಾರತೀಯರು ಜಾಗೃತರಾಗಿ, ದುಶ್ಚಟಗಳಿಂದ ದೂರವಾಗಬೇಕು. ಇಂಥ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ೧೯೫೮ ಮದ್ಯವರ್ಜನ ಶಿಬಿರ ಅತ್ಯಂತ ಶ್ಲಾಘನೀಯ. ಈ ಶಿಬಿರಗಳಿಂದಾಗಿ ೧.೧೯ ಲಕ್ಷ ಕುಡುಕರು ಮದ್ಯ ಸೇವನೆ ಚಟ ತೊರೆದು ನವಜೀವನ ನಡೆಸುತ್ತಿದ್ದಾರೆ ಎಂದು ಸದಾನಂದ ತಿಳಿಸಿದರು.

ಮುಖ್ಯ ಶಿಕ್ಷಕ ರವಿಕುಮಾರ್ ಮಾತನಾಡಿ, ಇಂದಿನ ಬಹುತೇಕ ಯುವಜನತೆ ಮೋಜು- ಮಸ್ತಿಯಲ್ಲಿ ತೇಲಾಡುತ್ತಿದೆ. ತಂಬಾಕು ಉತ್ಪನ್ನಗಳ ಸೇವನೆ ಪರಿಣಾಮ ಕುಟುಂಬಗಳಲ್ಲಿ ಶಾಂತಿ- ಸಾಮರಸ್ಯ ಕದಡುತ್ತಿದೆ. ನೆಮ್ಮದಿಯೇ ಇಲ್ಲದಾಗುತ್ತದೆ. ಮಕ್ಕಳೂ ಕೆಟ್ಟ ದಾರಿ ಹಿಡಿದು ಕುಟುಂಬಗಳು ವಿಭಾಗವಾಗುವಂಥ ಘಟನೆಗಳೂ ಇಲ್ಲದಿಲ್ಲ ಎಂದರು.

ಯೋಜನಾಧಿಕಾರಿ ವಸಂತ್ ದೇವಾಡಿಗ ಮಾತನಾಡಿ, ಪ್ರೌಢಶಾಲೆ, ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗೆ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. ಇದನ್ನು ಅರಿತಿರುವ ಧರ್ಮಸ್ಥಳ ಕ್ಷೇತ್ರ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಸ್ವಚ್ಛ ಹಾಗೂ ಆರೋಗ್ಯ ಪೂರ್ಣ ಸಮಾಜ ನಿರ್ಮಿಸುವಲ್ಲಿ ಶ್ರಮಿಸುತ್ತಿದ್ದಾರೆ ಎಂದರು.

ಮುಖ್ಯ ಶಿಕ್ಷಕ ರುದ್ರೇಶ್, ಮೇಲ್ವಿಚಾರಕ ಯೋಗೇಶ್, ಶಿಕ್ಷಕರಾದ ರವಿಕುಮಾರ್, ಪದ್ದಪ್ಪ, ಸುಧಾ, ಒಕ್ಕೂಟದ ಅಧ್ಯಕ್ಷ ಕುಮಾರ್, ಸೇವಾ ಪ್ರತಿನಿಧಿಗಳಾದ ಪುಷ್ಪಾ, ಕರಿಯಮ್ಮ, ಚೈತ್ರ ಹಾಗೂ ಬೋಧಕರು, ವಿದ್ಯಾರ್ಥಿಗಳು ಇದ್ದರು. ಕೃತಿಕಾ, ಇಂದ್ರಮ್ಮ, ಮನೋಜ್ ಅನಿಸಿಕೆ ಹಂಚಿಕೊಂಡರು.

- - -

-ಚಿತ್ರ೧: ಗುಳದಹಳ್ಳಿ ಶಾಲೆ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ರವಿಕುಮಾರ್ ಮಾತನಾಡಿದರು.