ಕನ್ನಡ ಭಾಷೆಯು ಇನ್ನೂ ಕೈಗಾರಿಕಾ ಪೂರ್ವ ಕಾಲದ ಹಳ್ಳಿಯ ನೆನಪುಗಳು ಮತ್ತು ಆಚರಣೆಗಳಿಂದ ಸಂಪೂರ್ಣವಾಗಿ ಹೊರಬಂದಿಲ್ಲ. ಸಮಕಾಲೀನ ಬದುಕಿನ ಸಂಕೀರ್ಣ ಪ್ರಶ್ನೆಗಳು ಹಾಗೂ ತೊಡಕುಗಳನ್ನು ಗ್ರಹಿಸಿ ಅಭಿವ್ಯಕ್ತಿಸಲು ನಮ್ಮ ಭಾಷೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಓ.ಎಲ್.ನಾಗಭೂಷಣ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು : ಕನ್ನಡ ಭಾಷೆಯು ಇನ್ನೂ ಕೈಗಾರಿಕಾ ಪೂರ್ವ ಕಾಲದ ಹಳ್ಳಿಯ ನೆನಪುಗಳು ಮತ್ತು ಆಚರಣೆಗಳಿಂದ ಸಂಪೂರ್ಣವಾಗಿ ಹೊರಬಂದಿಲ್ಲ. ಸಮಕಾಲೀನ ಬದುಕಿನ ಸಂಕೀರ್ಣ ಪ್ರಶ್ನೆಗಳು ಹಾಗೂ ತೊಡಕುಗಳನ್ನು ಗ್ರಹಿಸಿ ಅಭಿವ್ಯಕ್ತಿಸಲು ನಮ್ಮ ಭಾಷೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಓ.ಎಲ್.ನಾಗಭೂಷಣ್ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನೆಲಾ ಎಜ್ಯುಕೇಷನಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ರಂಗ ಚಂದಿರ ಮತ್ತು ಸಿರಿವರ ಕಲ್ಚರಲ್ ಅಕಾಡೆಮಿ ಮತ್ತು ಕಿರಂ ಪ್ರಕಾಶನದ ಸಹಯೋಗದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ನೆಲಾ ಪುಸ್ತಕಗಳ ಜನಾರ್ಪಣೆ, ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇವಲ ಧರ್ಮ ಅಥವಾ ರಾಜಕೀಯ ಸಿದ್ಧಾಂತಗಳ ಆಧಾರದ ಮೇಲೆ ಮನುಷ್ಯರನ್ನು ತೀರ್ಮಾನಿಸುವುದು ಅಪಾಯಕಾರಿ. ಆಂಗ್ಲ ಕಾದಂಬರಿಕಾರ ಜಾರ್ಜ್ ಆರ್ವೆಲ್ ಹೇಳಿದಂತೆ ಭಾಷೆ ಕೊಳೆಯಲು ಶುರುವಾದಾಗ ಸಮಾಜವೂ ಕೊಳೆಯುತ್ತದೆ. ಪ್ರಸ್ತುತ ನಮ್ಮ ಕನ್ನಡವೂ ಅಂತಹ ಸ್ಥಿತಿಗೆ ತಲುಪುತ್ತಿದೆಯೇ ಎಂಬ ಆತಂಕ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅನುವಾದವು ಭಾಷೆಯನ್ನು ಹೊಸತನಕ್ಕೆ ಒಡ್ಡಿಕೊಳ್ಳಲು ನೆರವಾಗುತ್ತದೆ
ಅನುವಾದವು ನಮ್ಮ ಸಾಂಪ್ರದಾಯಿಕ ಆಲೋಚನಾ ಕ್ರಮವನ್ನು ಮುರಿದು, ಭಾಷೆಯನ್ನು ಹೊಸತನಕ್ಕೆ ಒಡ್ಡಿಕೊಳ್ಳಲು ನೆರವಾಗುತ್ತದೆ. ಬುಕರ್ ಪ್ರಶಸ್ತಿ ವಿಜೇತ ''ದಿ ಗರ್ಲ್, ವುಮನ್, ಅದರ್'' ಮುಂತಾದ ಜಾಗತಿಕ ಕೃತಿಗಳ ಕಥನಗಳನ್ನು ಕನ್ನಡದಲ್ಲಿ ದಕ್ಕಿಸಿಕೊಳ್ಳಲು ನಾವು ಭಾಷಿಕವಾಗಿ ಬೆಳೆಯಬೇಕಿದೆ ಎಂದರು
ಇತರ ಭಾಷೆಗಳಿಗೆ ಅನುವಾದಗೊಂಡು ಹೆಚ್ಚಿನ ಜನರನ್ನು ತಲುಪುತ್ತಿರುವುದು ಸಂತೋಷ
ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಮಾತನಾಡಿ, ಪಿ.ಲಂಕೇಶ್ ಅವರ ಕೃತಿಗಳು ಇತರ ಭಾಷೆಗಳಿಗೆ ಅನುವಾದಗೊಂಡು ಹೆಚ್ಚಿನ ಜನರನ್ನು ತಲುಪುತ್ತಿರುವುದು ಅತ್ಯಂತ ಸಂತೋಷದ ವಿಚಾರ. ಗೌರಿ ಲಂಕೇಶ್ ಅವರ ಅಗಲಿಕೆ ನಂತರ ಪತ್ರಿಕೆ ಹಾಗೂ ಪುಸ್ತಕಗಳ ಪ್ರಕಟಣೆ ನಿಲ್ಲಿಸಲಾಗಿತ್ತು. ಆದರೆ, ಲಂಕೇಶ್ ಅವರ ಸಾಹಿತ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಲಂಕೇಶ್ ಅವರ ಕೃತಿಗಳು ಮತ್ತು ‘ಹುಳಿಮಾವಿನ ಮರ ಮತ್ತು ನಾನು’ ಪುಸ್ತಕವನ್ನು ಪುನಃ ಪ್ರಕಟಿಸಲು ನಿರ್ಧರಿಸಲಾಯಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಎಂ.ಎಸ್.ಆಶಾದೇವಿ, ಚ.ಹ.ರಘುನಾಥ ಇದ್ದರು.