ಚನ್ನಪಟ್ಟಣ: ತಾಲೂಕಿನ ಪ್ರಸಿದ್ಧ ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಭೀಮನ ಅಮಾವಾಸ್ಯೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು

ಚನ್ನಪಟ್ಟಣ: ತಾಲೂಕಿನ ಪ್ರಸಿದ್ಧ ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಭೀಮನ ಅಮಾವಾಸ್ಯೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

ಅಮಾವಾಸ್ಯೆ ಪ್ರಯುಕ್ತ ಬುಧವಾರ ಮಧ್ಯರಾತ್ರಿ ಎರಡು ಗಂಟೆಯಿಂದ ಬುಧವಾರ ಮಧ್ಯಾಹ್ನ ೨ ಗಂಟೆಯವರೆಗೆ ಅಮ್ಮನವರ ಮೂಲಮೂರ್ತಿಗೆ ಅಭಿಷೇಕ ಮಾಡಲು ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಅಮಾವಾಸ್ಯೆ ಪ್ರಯುಕ್ತ ದೇವಿಗೆ ಮೂರು ಮಹಾಮಂಗಳಾರತಿ ನಡೆಯಿತು. ಮುಂಜಾನೆ ೪.೨೮ ಕ್ಕೆ ತಾಯಿಗೆ ಮೊದಲ ಮಹಾ ಆರತಿ ಜರುಗಿತು. ಮಧ್ಯರಾತ್ರಿಯಿಂದಲೇ ಸಾವಿರಾರು ಭಕ್ತರು ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು.

ದೇವಿಗೆ ವಿಶೇಷ ಅಭಿಷೇಕ, ಅಲಂಕಾರ, ನೂರೆಂಟು ಹಾಲರವಿ ಸೇವೆ ಹಾಗೂ ರಥೋತ್ಸವ ನಡೆಯಿತು. ಮಧ್ಯಾಹ್ನ ೧೨.೩೮ಕ್ಕೆ ರಥೋತ್ಸವಕ್ಕೆ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ಚಾಲನೆ ನೀಡಿದರು. ಗರ್ಭಗುಡಿಯಲ್ಲಿರುವ ಅಮ್ಮನವರ ಮೂಲ ವಿಗ್ರಹವನ್ನು ರಥದಲ್ಲಿ ಕೂರಿಸಿ, ದೇವಸ್ಥಾನದ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ಯಾವುದೇ ವಿಶೇಷ ಅತಿಥಿಯನ್ನು ಆಹ್ವಾನಿಸದೇ ಭಕ್ತರಿಂದಲೇ ಕಾರ್ಯಕ್ರಮದ ಉದ್ಘಾಟನೆ ನಡೆಸಿದ್ದು ವಿಶೇಷವಾಗಿತ್ತು.

ಹರಿದುಬಂದ ಭಕ್ತಸಾಗರ: ಆಷಾಢದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಶ್ರೀ ಕ್ಷೇತ್ರಕ್ಕೆ ಭಕ್ತಸಾಗರವೇ ಹರಿದು ಬರುತ್ತಿದ್ದು, ಭೀಮನ ಅಮಾವಾಸ್ಯೆಯಂದು ಸಹ ಲಕ್ಷಕ್ಕೂ ಹೆಚ್ಚು ಭಕ್ತರು ಆಗಿಮಿಸಿದ್ದರು. ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ಕ್ಷೇತ್ರದ ವತಿಯಿಂದ ಕ್ರಮಕೈಗೊಳ್ಳಲಾಗಿತ್ತು. ದಾಸೋಹ ಭವನ ಮಾತ್ರವಲ್ಲದೆ, ಕ್ಷೇತ್ರದ ಇತರೆಡೆಯು ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಭಕ್ತರಿಗೆ ಬಾದಾಮಿ ಹಾಲು, ನೀರಿನ ವ್ಯವಸ್ಥೆ: ಮೊಟ್ಟ ಮೊದಲ ಬಾರಿಗೆ ಭೀಮನ ಅಮಾವಾಸ್ಯೆಯಂದು ಗೌಡಗೆರೆ ಕ್ಷೇತ್ರಕ್ಕೆ ಬರುವ ಸಾವಿರಾರು ಸಂಖ್ಯೆಯ ಭಕ್ತರಿಗಾಗಿ ಸರತಿ ಸಾಲಿನಲ್ಲೇ ಬಾದಾಮಿ ಹಾಲು, ಕುಡಿಯುವ ನೀರು, ಆಯಾಸ ಆಗದಂತೆ ಚಾಕ್ಲೇಟ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಗಂಟೆಗಳ ಕಾಲ ಕಾದು ತಾಯಿ ದರ್ಶನ ಪಡೆಯೋ ಭಕ್ತರಿಗಾಗಿ ದೇಗುಲದ ಆಡಳಿತ ಮಂಡಳಿ ಈ ನೂತನ ವ್ಯವಸ್ಥೆ ಮಾಡಿತ್ತು.

ಕಾರ್ಯಕ್ರಮದ ಅಂಗವಾಗಿ ಭಾರತ್ ವಿಕಾಸ್ ಪರಿಷತ್ ಕಣ್ಣಶಾಖೆ ಮತ್ತು ಶ್ರೀ ಅರವಿಂದ ವಲ್ಲಿ ಸಾಂಸ್ಕೃತಿಕ ಕಲಾ ಟ್ರಸ್ಟ್ ಮಹಿಳಾ ಕಲಾವಿದರಿಂದ ಮಂಗಳವಾರ ರಾತ್ರಿ ೯ ಗಂಟೆಗೆ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನು ಆಯೋಜಿಸಲಾಗಿತ್ತು. ಮಹಿಳೆಯರೇ ಸಂಪೂರ್ಣವಾಗಿ ಅಭಿನಯಿಸಿದ ಈ ನಾಟಕ ಪ್ರೇಕ್ಷಕರ ಮನಸೂರೆಗೊಂಡಿತ್ತು.ಕೋಟ್.............

ಶ್ರೀ ಕ್ಷೇತ್ರದಲ್ಲಿ ಪ್ರತಿವರ್ಷವೂ ಭೀಮನ ಅಮಾವಾಸ್ಯೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷ ಇನ್ನಷ್ಟು ವೈಭವಯುತವಾಗಿ ಕಾರ್ಯಕ್ರಮ ನಡೆದಿದೆ. ಇದಕ್ಕೆ ಕಾರಣೀಭೂತರಾದ ಭಕ್ತಾಧಿಗಳಿಗೆ, ಆರಕ್ಷಕ ಇಲಾಖೆ, ಬೆಸ್ಕಾಂ ಇಲಾಖೆ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

- ಡಾ.ಮಲ್ಲೇಶ್ ಗುರೂಜಿ, ಧರ್ಮದರ್ಶಿಗಳು, ಶ್ರೀಕ್ಷೇತ್ರ ಗೌಡಗೆರೆ

ಪೊಟೋ೧೨ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಹಮ್ಮಕೊಂಡಿದ್ದ ರಥೋತ್ಸವಕ್ಕೆ ಕ್ಷೇತ್ರದ ಧರ್ಮದರ್ಶಿ ಮಲ್ಲೇಶ್ ಗುರೂಜಿ ಚಾಲನೆ ನೀಡಿದರು.