ಕನ್ನಡಪ್ರಭದ ಪರಿಸರ ಕಾಳಜಿ ಶ್ಲಾಘನೀಯ

| Published : Nov 23 2025, 03:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಕಾಗವಾಡ ಪ್ರಸ್ತುತ ದಿನಗಳಲ್ಲಿ ಅರಣ್ಯ ರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ ಬಹಳ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಂರಕ್ಷಣೆಯ ಜಾಗೃತಿ ಅಗತ್ಯವಾಗಿದೆ ಎಂದು ಐನಾಪೂರ ಕೆ.ಆರ್.ಈ.ಎಸ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಉಪಪ್ರಾಚಾರ್ಯ ಎ.ಎಂ.ಹುಲ್ಲೆನ್ನವರ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಪ್ರಸ್ತುತ ದಿನಗಳಲ್ಲಿ ಅರಣ್ಯ ರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ ಬಹಳ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಂರಕ್ಷಣೆಯ ಜಾಗೃತಿ ಅಗತ್ಯವಾಗಿದೆ ಎಂದು ಐನಾಪೂರ ಕೆ.ಆರ್.ಈ.ಎಸ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಉಪಪ್ರಾಚಾರ್ಯ ಎ.ಎಂ.ಹುಲ್ಲೆನ್ನವರ ಹೇಳಿದರು.

ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ಕೆ.ಆರ್.ಈ.ಎಸ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್ ಆಯೋಜಿಸಿದ್ದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ತಾಲೂಕು ಮಟ್ಟದ ಅರ್ಹತಾ ಸುತ್ತಿನ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉತ್ತಮ ಪರಿಸರದಲ್ಲಿ ಪ್ರಮುಖ ಪಾತ್ರ ವಹಿಸುವ ಅರಣ್ಯ ಸಂಪತ್ತು ಮಾನವಕುಲದ ಅವಿಭಾಜ್ಯ ಅಂಗವಾಗಿದೆ. ಅರಣ್ಯ ನಾಶವಾದರೆ ಪರಿಸರವೂ ಕಲುಷಿತಗೊಳ್ಳುತ್ತದೆ. ಇದು ನೇರವಾಗಿ ಮನುಷ್ಯನ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಪರಿಸರದಲ್ಲಿ ಮರ, ಗಿಡಗಳನ್ನು ನೆಟ್ಟು ಅರಣ್ಯೀಕರಣಕ್ಕೆ ಒತ್ತು ನೀಡಬೇಕು. ಅರಣ್ಯ ಜಾಗೃತಿಯ ಭಾಗವಾಗಿ ಕನ್ನಡಪ್ರಭ ದಿನಪತ್ರಿಕೆಯ ಪರಿಸರ ಮತ್ತು ಅರಣ್ಯ ಸಂರಕ್ಷಣೆ ಮೇಲಿನ ಕಾಳಜಿ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರಕಲಾ ಶಿಕ್ಷಕ ರಮೇಶ ಕುಲ್ಲೋಳ್ಳಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಅರಣ್ಯ, ಪರಿಸರ ಪ್ರಾಣಿ-ಪಕ್ಷಿ ಸಂಕುಲದ ಬಗ್ಗೆ ಮಕ್ಕಳಲ್ಲಿ ತೀವ್ರ ಕುತೂಹಲ ಇರುತ್ತದೆ. ಮಕ್ಕಳ ಈ ಕುತೂಹಲ ಪ್ರೀತಿಯನ್ನು ತೋರ್ಪಡಿಸಲು ವೇದಿಕೆ ಕಲ್ಪಿಸುತ್ತಿರುವುದು ವಿಶೇಷ ಕಾರ್ಯಕ್ರಮ. ಇತ್ತೀಚಿನ ದಿನಗಳಲ್ಲಿ ಮನುಷ್ಯ ದುರಾಸೆಯಿಂದ ಕಾಡು ಕ್ರಮೇಣ ನಾಶವಾಗುತ್ತಿದೆ. ಇದರಿಂದ ಕಾಡು ಪ್ರಾಣಿ, ಪಕ್ಷಿಗಳಿಗೂ ತೊಂದರೆಯಾಗುತ್ತಿದೆ. ಹೀಗಾಗಿ, ಪ್ರತಿಯೊಬ್ಬರೂ ಅರಣ್ಯ ರಕ್ಷಣೆಗೆ ಬಗ್ಗೆ ಚಿಂತನ- ಮಂಥನ ನಡೆಸಬೇಕು ಎಂದರು.

ಅತಿಥಿ ವಿಶ್ವನಾಥ ಅವಟಿ ಮಾತನಾಡಿ, ಪರಿಸರ ಕಾಳಜಿ ಇಲ್ಲದವರಿಂದ ನಿರಂತರವಾಗಿ ಭೂ ತಾಯಿಯ ಮೇಲೆ ಶೋಷಣೆ ನಡೆಯುತ್ತಿದೆ. ಪರಿಸರ ನಾಶ ಹೆಚ್ಚಾದರೆ ಜೀವ ಜಗತ್ತು ಉಳಿಯಲು ಸಾಧ್ಯವಿಲ್ಲ. ಸ್ವಾರ್ಥಕೋಸ್ಕರ ಭೂ ತಾಯಿ ಬದುಕು ಹಾಳು ಮಾಡುವ ಜನರಿಗೆ ಇಂದಿನ ಯುವಕರು ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದು ಹೇಳಿದರು.

ಕಾಗವಾಡ ತಾಲೂಕಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ 8, 9 ಹಾಗೂ 10 ನೇ ತರಗತಿಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ 8ನೇ ವರ್ಗದ ಜಾನವಿ ಶಿಂಧೆ ಪ್ರಥಮ, ಶ್ರೇಯಸ್ ಶಿಂಧೆ, ದ್ವಿತೀಯ ಅಮೃತಾ ಕೋಳಿ ತೃತೀಯ, 9 ನೇ ವರ್ಗದ ಸೌಂದರ್ಯ ಉಮರಾಣಿ ಪ್ರಥಮ, ವೀಣಾ ಕೇರಿಕಾಯಿ ದ್ವಿತೀಯ, ಪ್ರಿಯಂಕಾ ಕುಂಬಾರ ತೃತೀಯ, 10ನೇ ತರಗತಿಯ ಐಶ್ವರ್ಯ ಉಮರಾಣಿ ಪ್ರಥಮ, ಶಬಾನಾ ಮುಜಾವರ ದ್ವಿತೀಯ, ಸಂಜೀವಿನಿ ಯಂಡೊಳ್ಳಿ ತೃತೀಯ ಸ್ಥಾನ ಪಡೆದರು. ಉಳಿದ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ ನೀಡಿ ಗೌಡವಿಸಲಾಯಿತು. -----------

ಬಾಕ್ಸ್‌

ಸ್ಪರ್ಧೆ ಏರ್ಪಡಿಸಿದ್ದಕ್ಕೆ ಕನ್ನಡಪ್ರಭಕ್ಕೆ ಧನ್ಯವಾದಗಳು

ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್ ಆಯೋಜಿಸುತ್ತಿರುವ ಕಾಗವಾಡ ತಾಲೂಕು ಮಟ್ಟದ ಕರ್ನಾಟಕ ಅರಣ್ಯ, ವನ್ಯಜೀವಿ ಕುರಿತು ಚಿತ್ರಕಲೆ ಬಿಡಿಸಿ ಬಣ್ಣ ತುಂಬುವುದು ಖುಷಿಯಾಯಿತು. ನಾವು ಪ್ರತಿನಿತ್ಯ ಮನುಷ್ಯನ ದಿನಚರಿಯನ್ನು ನೋಡುತ್ತೇವೆ. ಆದರೆ, ಕಾಡು ಪ್ರಾಣಿಗಳ ಬಗ್ಗೆ ಓದಿ ಅಥವಾ ಟಿವಿಗಳ ಮೂಲಕ ತಿಳಿದುಕೊಳ್ಳುತ್ತೇವೆಯೇ ಹೊರತು ಕಾಡಿನೊಳಗಿನ ಸತ್ಯಾಸತ್ಯತೆಗಳನ್ನು ಚಿತ್ರಗಳ ಮೂಲಕ ನಮಗೆ ಬಿಡಿಸಲು ಕನ್ನಡ ಪ್ರಭ ದಿನಪತ್ರಿಕೆ ಸ್ಪರ್ಧೆ ಏರ್ಪಡಿಸಿರುವುದಕ್ಕೆ ಧನ್ಯವಾದಗಳು. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಬಗ್ಗೆ ಖುಷಿಯಾಗಿದೆ ಎಂದು ವಿದ್ಯಾರ್ಥಿಗಳಾದ ಜಾನವಿ ಶಿಂಧೆ, ಸೌಂದರ್ಯ ಉಮರಾಣಿ, ಐಶ್ವರ್ಯ ಉಮರಾಣಿ ಅನಿಸಿಕೆ ಹಂಚಿಕೊಂಡರು.