ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಅನೇಕ ಮಹಾನಗರಗಳಲ್ಲಿ ಕನ್ನಡಿಗರ ಹಾಗೂ ಕನ್ನಡ ಮಾತನಾಡುವವರ ಸಂಖ್ಯೆ ತುಂಬಾ ಕಡಿಮೆ ಆಗುತ್ತಿದ್ದು, ಪ್ರಸ್ತುತ ಹಳ್ಳಿಗಳಲ್ಲಿ ಕನ್ನಡದ ಅಭಿಮಾನ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ತಾಲೂಕಿನ ಯರೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡ್ತಿ ಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಅವರು ಭಾನುವಾರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಮಹಾನಗರಗಳಲ್ಲಿ ಆಂಗ್ಲ ಮತ್ತು ಇತರೆ ಭಾಷೆಗಳ ಮೇಲಿನ ವ್ಯಾಮೋಹ ಅತಿಯಾಗುತ್ತಿದ್ದು, ಕನ್ನಡ ಮಾತನಾಡುವವರನ್ನು ಕೀಳಾಗಿ ಕಾಣುವ ಸಂಸ್ಕೃತಿ ಬೆಳೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರಸ್ತುತ ಹಳ್ಳಿ ಹಳ್ಳಿಗಳಲ್ಲಿ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕನ್ನಡ ವಿಶ್ವದ ಸುಂದರ ಲಿಪಿಯುಳ್ಳ ೩ನೇ ಸುಂದರ ಭಾಷೆಯಾಗಿದ್ದು, ಸುಮಾರು ೨೦೦೦ ವರ್ಷಗಳ ಇತಿಹಾಸ ಹೊಂದಿದೆ. ಬರೆದಂತೆ ಓದಬಲ್ಲ ಭಾಷೆ ಇದು. ಸ್ಪಷ್ಟ, ಶುದ್ಧ ಓದು, ಬರಹ ರೂಢಿಸಿಕೊಂಡು ಕನ್ನಡ ಉಳಿಸಿ ಬೆಳೆಸಿ ಎಂದು ಕರೆ ನೀಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ, ಬಡ್ತಿ ಮುಖ್ಯ ಶಿಕ್ಷಕ ಮೈಲಾರಪ್ಪ, ಶಿಕ್ಷಕಿಯರಾದ ದೇವಕರಣಮ್ಮ, ಶೋಭಾ, ಲಿಂಗಮೂರ್ತಿ, ಕನ್ನಡ ಯುವಕ ಸಂಘದ ಪದಾಧಿಕಾರಿಗಳು, ಪ್ರಮುಖರಾದ ಅಶೋಕ್, ದಿವಾಕರ್, ಆನಂದ್, ಸೋಮಶೇಖರ್ ಮತ್ತು ವೆಂಕಟೇಶ್, ಊರಿನ ಹಿರಿಯರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.