ಸಾರಾಂಶ
ದೊಡ್ಡಬಳ್ಳಾಪುರ: ಕನ್ನಡ ಭಾಷೆಯ ಮಹತ್ವಕ್ಕೆ ಧಕ್ಕೆ ತರುವ ಯಾವುದೇ ನಿರ್ಧಾರಗಳು ಖಂಡನೀಯ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡ ಪ್ರಶ್ನೆ ಪತ್ರಿಕೆಯನ್ನು 125ಕ್ಕೆ ಬದಲಾಗಿ 100 ಅಂಕಗಳಿಗೆ ಸೀಮಿತಗೊಳಿಸುವ ಪ್ರಸ್ತಾವನೆ ಅವೈಜ್ಞಾನಿಕ. ಯಾವುದೇ ಕಾರಣಕ್ಕೂ ಅಂಕಗಳ ಕಡಿತ ಆಗಬಾರದು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ನಿರ್ದೇಶಕ ಹುಲಿಕಲ್ ನಟರಾಜ್ ಹೇಳಿದರು.
ಇಲ್ಲಿನ ತಾಲೂಕು ಕಸಾಪ ಹಾಗೂ ಕಸಬಾ ಹೋಬಳಿ ಕಸಾಪ ಸಹಯೋಗದಲ್ಲಿ ನಗರದ ಎಂಎಬಿಎಲ್ ಪ್ರೌಢಶಾಲೆಯಲ್ಲಿ ನಡೆದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕನ್ನಡ ಭಾಷೆಯ ಅನನ್ಯತೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕಿದ್ದು, ಭಾಷೆಯ ಬಳಕೆಯಿಂದ ಭಾಷೆ ಸದೃಢಗೊಳ್ಳುತ್ತದೆ. ಕನ್ನಡ ಸಾಹಿತ್ಯಕ್ಕೆ ಅನ್ಯ ಭಾಷಿಕ ಸಾಹಿತಿಗಳೂ ಸಹ ಮಹತ್ವದ ಕೊಡುಗೆ ನೀಡಿದ್ದಾರೆ. ಪ್ರಜ್ಞಾವಂತಿಕೆ ಮತ್ತು ಹೃದಯವಂತಿಕೆ ಇಂದು ಮನುಷ್ಯನ ಬದುಕಿಗೆ ಅಗತ್ಯವಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಚ್ಚು ಜ್ಞಾನ ಸಂಪಾದನೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಬೆಳೆಸಿಕೊಳ್ಳುವುದು ಅಗತ್ಯ. ಗುರುಹಿರಿಯರ ಶಿಸ್ತಿನ ಪಾಠ ಮಕ್ಕಳ ಭವಿಷ್ಯಕ್ಕೆ ಬುನಾದಿಯಾಗಿದೆ. ಸಂಸ್ಕಾರಭರಿತ ಶಿಕ್ಷಣ ನೀಡದಿದ್ದರೆ ಭವಿಷ್ಯದಲ್ಲಿ ಶಾಲೆಗಳಿಗಿಂತ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚಾಗಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನನ ಶರವೇಗದಲ್ಲಿ ಮುಂದುವರೆಯುತ್ತಿದ್ದು ವೈಜ್ಞಾನಿಕ ಮನೋಭಾವನೆ ಬೆಳಸಿಕೊಂಡು ಉತ್ತಮ ಪ್ರಜೆಗಳಾಗಬೇಕು. ಈ ನಿಟ್ಟಿನಲ್ಲಿ ಸಾಹಿತ್ಯದೊಂದಿಗೆ ವಿಜ್ಞಾನ ಅಗತ್ಯವೂ ಇದ್ದು, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ನಗರದ ಹೊರವಲಯದ ಬೆಸೆಂಟ್ ಪಾರ್ಕ್‍ನಲ್ಲಿ ತಾರಾಲಯ ನಿರ್ಮಾಣ, ಮಕ್ಕಳಿಂದಲೇ ಟೆಲಿಸ್ಕೋಪ್ ತಯಾರಿಕೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಮಾತನಾಡಿ, ಕನ್ನಡ ಭಾಷೆ ಲಿಪಿಗಳ ರಾಣಿಯಾಗಿದ್ದು ಉಚ್ಚರಿಸಿದ್ದನ್ನೇ ಬರೆಯುವ, ಬರೆದಿದ್ದನ್ನೇ ಉಚ್ಚರಿಸುವ ಜಗತ್ತಿನ ವಿಶಿಷ್ಟವಾದ ಭಾಷೆಯಾಗಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಯಲ್ಲಿ ಯುವ ಸಮುದಾಯ ಗುರುತರ ಪಾತ್ರ ವಹಿಸಬೇಕು. ನಾಡು ನುಡಿಯ ರಕ್ಷಣೆಗೆ ಕಂಕಣಬದ್ದರಾಗಬೇಕು ಎಂದರು.
ತಾ.ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತರಾಗದೆ ಭಾಷೆಯ ಅಧ್ಯಯನದಲ್ಲಿ ತೊಡಗಬೇಕಿದೆ ಎಂದು ತಿಳಿಸಿದರು. ಎಂಎಬಿಎಲ್ ಶಾಲೆ ಕಾರ್ಯನಿರ್ವಹಣಾಕಾರಿ ಬಿ.ಪಿ.ಪ್ರಿಯಾಂಕ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಡಾ. ಮುನಿರಾಜು, ಸಾಹಿತಿ ಶರಣಯ್ಯ ಹಿರೇಮಠ, ತಾ.ಕಸಾಪ ಕಾರ್ಯದರ್ಶಿ ಎ. ಜಯರಾಮ, ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾಮಹದೇವ, ಕಸಾಪ ಕಸಬಾ ಹೋಬಳಿ ಅಧ್ಯಕ್ಷ ದಾದಾಫೀರ್, ಪ್ರತಿನಿಧಿ ಶಫೀರ್, ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಲಯನ್ಸ್ ಕ್ಲಬ್ ಅಧ್ಯಕ್ಷ ನಂಜುಂಡೇಶ್ವರಸ್ವಾಮಿ, ಕಲಾವಿದ ದರ್ಗಾಜೋಗಹಳ್ಳಿ ಮಲ್ಲೇಶ್, ಮುಖ್ಯಶಿಕ್ಷಕ ಜಿ.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.25ಕೆಡಿಬಿಪಿ2- ದೊಡ್ಡಬಳ್ಳಾಪುರದ ಎಂಎಬಿಎಲ್ ಶಾಲೆಯಲ್ಲಿ ತಾ.ಕಸಾಪದಿಂದ ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಕನ್ನಡದಲ್ಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.