ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಹಾಕಿ ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗೈರು ಹಾಜರಿಯಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಅವರು ಭಾಗವಹಿಸಿ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ ಮಾಡಿ ನಮನ ಸಲ್ಲಿಸಿ, ನಂತರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದರು.ಕನ್ನಡ ಭಾಷೆಗೆ ೩ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ ಎನ್ನಲಾಗಿದೆ. ಕಿ.ಪೂ.೨ನೇ ಶತಮಾನದಲ್ಲೇ ಕನ್ನಡ ಭಾಷೆ, ಸಾಹಿತ್ಯ ಇತ್ತೆಂದು ವಿದ್ವಾಂಸರು ಪ್ರತಿಪಾದಿಸಿದ್ದಾರೆ. ಆ ನಂತರದಲ್ಲಿ ಹಂತಹಂತವಾಗಿ ವಿವಿಧ ಸ್ವರೂಪಗಳಲ್ಲಿ ನಮ್ಮ ಭಾಷೆ, ಸಂಸ್ಕೃತಿ, ಪದ್ಧತಿ, ಪರಂಪರೆಗಳು ಬೆಳೆದು ಬಂದಿವೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ನಮ್ಮ ಸಾಹಿತ್ಯಿಕ ಶ್ರೀಮಂತಿಕೆಯ ಸಂಕೇತವಾಗಿದೆ ಎಂದರು.
ಶಾತವಾಹನರು, ಚಾಲುಕ್ಯರು, ಕದಂಬರು, ರಾಷ್ಟ್ರಕೂಟರು, ಸೇವುಣರು, ಹೊಯ್ಸಳರು, ತಲಕಾಡು ಗಂಗರು, ವಿಜಯನಗರ ಅರಸರು, ನಾಯಕರು, ಬಹುಮನಿ ಸುಲ್ತಾನರು, ಬ್ರಿಟೀಷರು ಸೇರಿದಂತೆ ಹತ್ತು ಹಲವು ಆಳರಸರ ಆಡಳಿತದಲ್ಲಿ ನಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು ಬಂದ ಹೆಮ್ಮೆ ಕನ್ನಡಿಗರದ್ದು. ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ಸಂಗೊಳ್ಳಿರಾಯಣ್ಣ, ಮದಕರಿನಾಯಕರಂತಹ ಕೆಚ್ಚೆದೆಯ ಕಲಿಗಳ ವೀರ ಪರಂಪರೆಯೂ ನಮ್ಮಲ್ಲಿದೆ. ಅದೇ ರೀತಿ ಕರ್ನಾಟಕ ಶಿಲ್ಪಕಲೆಗಳ ತವರೂರು ಕೂಡ ಹೌದು. ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಈ ಜಿಲ್ಲೆಯ ವಿಶ್ವವಿಖ್ಯಾತ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಾದರೆ, ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಹೀಗೆ ನೂರಾರು ಸ್ಥಳಗಳು ನಮ್ಮ ನಾಡಿನ ಭವ್ಯ ಪರಂಪರೆ ಇತಿಹಾಸವನ್ನು ಇಂದಿಗೂ ಸಾರುತ್ತಿವೆ. ಬೇಲೂರು-ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳು ಇತ್ತೀಚೆಗೆ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿದೆ. ಇದು ಸಂತದ ವಿಷಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಾಡು ನುಡಿ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಎ.ಎಸ್ ಕೃಷ್ಣೇಗೌಡ,ಹಳ್ಳಿ ವೆಂಕಟೇಶ್, ಸೋಮಣ್ಣ, ಹೊ.ರಾ ಪರಮೇಶ್ ಹೊಡೆನೂರು, ಸುಮಾ ವೀಣಾ, ಶೈಲಜಾ ಬಿ. ವಿ,ಗುರುರಾಜ ಬಿನ್ ನಂಜಯ್ಯ, ಲಕ್ಷಣ ಟಿ. ಎಸ್, ಬ್ಯಾಟಾಚಾರ್, ಶಿವಶಂಕರ್ ಕೆ.ಜಿ, ಮಂಜುನಾಥ್ ಹೆಚ್ ಜಿ, ಲಕ್ಷ್ಮಿ ಎನ್, ಚಂದನಾ ವೆಂಕಟೇಶ್, ಮೈತ್ರಿ ಎಸ್ ಮಾದಗುಂಡಿ, ರುಕ್ಮಿಣಿ ನಾಗೇಂದ್ರ, ದೇವರಾಜ್, ಮಂಜು, ಯೂಕೂಬ್ ಖಾನ್, ಡಾ.ಶಾಂತ ಅತ್ನಿ,ಜಿ. ಎಚ್ ನಾಗರಾಜ, ಜಯಂತಿ ಚಂದ್ರಶೇಖರ್, ಆರ್. ಬಿ. ಪುಟ್ಟೇಗೌಡ, ಮಂಜು,ಕೆ. ಬಿ. ಸತೀಶ್, ಚನ್ನಂಗಿಹಳ್ಳಿ ಶ್ರೀಕಾಂತ, ಸುಂದರೇಶ್ ಡಿ ಉಡುವರೆ, ಕ್ರೀಡಾ ಕ್ಷೇತ್ರದಲ್ಲಿ ಸಂತೋಷ್ ಶೆಟ್ಟಿ, ವೈ ಎಸ್ ಅನಿಲ್ ಕುಮಾರ್ ,ಎಚ್ ಎಸ್ ಮೋಹಿತ್, ಎಸ್ ಆರ್ ಕಂಠಿ, ಕನ್ನಡ ಪರ ಹೋರಾಟಗಾರ ಕ್ಷೇತ್ರದಲ್ಲಿ ಎಂ ರಘು ಪಾಳ್ಯ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪಿ.ಎ. ಶ್ರೀನಿವಾಸ್, ಎಸ್ ಡಿ ರಂಗಸ್ವಾಮಿ, ವಿ ಮಧುಸೂದನ್, ಸಾಮಾಜಿಕ ಕ್ಷೇತ್ರದಲ್ಲಿ ಗಿಡ್ಡಮ್ಮ, ಷ್ಷಪಗಿರಿ ಮಠ ಹಾಗೂ ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ಸಂಸ್ಥೆ, ಜಿ. ಎಸ್ ಕಲಾವತಿ ಮಧುಸೂದನ, ಪ್ರಕಾಶ, ಶಿವಮ್ಮ ಸಾಲಿ, ರಾಜೇಶ್, ಎಸ್ ರವಿ, ಡಾ. ಜಮೀರ್ ಅಹ್ಮದ್, ಚೇತನ್ ಜೈನ್, ಲತಾ ಪಿ.ಎಸ್.ಐ, ಭಾನುಮತಿ ಎಚ್.ಎಸ್, ಅಪೂರ್ವ ಅಂಗಡಿ, ರಾಜು ಬಿ.ಹೆಚ್ , ಕಾಳಪ್ಪ, ಹೆಚ್ ಜಿ. ಗಣೇಶ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ನೆರೆಯ ತುಮಕೂರು, ಬೆಂಗಳೂರು ಹಾಗೂ ಚನ್ನಪಟ್ಟಣಗಳಲ್ಲಿ ಮಿತಿ ಮೀರಿದ ಸಂಖ್ಯೆಯಲ್ಲಿ ಪಾಸುಗಳನ್ನು ವಿತರಣೆ ಮಾಡಿದ್ದರಿಂದ ಹಾಸನಾಂಬ ಜಾತ್ರೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಅವ್ಯವಸ್ಥೆ ಉಂಟಾಗಿ ಮಾರಾಮಾರಿಗೆ ಕಾರಣವಾಯಿತು. ಇದರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೇ ನೇರ ಹೊಣೆ ಎನ್ನುವ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬರದಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದೇ ವೇಳೆ ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್, ಕ್ಷೇತ್ರದ ಶಾಸಕರಾದ ಸ್ವರೂಪ್ ಪ್ರಕಾಶ್, ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.