ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಕಸಾಪ ಘಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹೆಬ್ರಿ ಇಂದಿರಾನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನ. 1 ರಂದು ನಡೆಯಿತು.ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಿ ವೇದಿಕೆಯಲ್ಲಿ ಉಪಸ್ಥಿತರಿರುವ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಹಿರಿಯರಾದ ಹೆಬ್ರಿ ರಾಗಿಹೊಕ್ಲು ನಿವಾಸಿ ನಿವೃತ್ತ ಪ್ರಥಮ ದರ್ಜೆ ಸಹಾಯಕರಾದ ಕೆ. ಗಂಗಾಧರ ರಾವ್ ದಂಪತಿಯವರಿಗೆ ಹೆಬ್ರಿ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸನ್ಮಾನಿತರು ಸನ್ಮಾನ ಸ್ವೀಕರಿಸಿ ಮಾತನಾಡಿ ನಾನು ಶಾಲೆಯಲ್ಲಿ ಕರ್ತವ್ಯದಲ್ಲಿರುವಾಗಲೇ ಕನ್ನಡ ಭಾಷಾಭಿಮಾನ ಬೆಳೆಸಿಕೊಂಡು ಕನ್ನಡದ ಬೆಳವಣಿಗೆಗೆ ನನ್ನಿಂದಾದಷ್ಟು ಪ್ರಯತ್ನ ಪಟ್ಟಿರುವೆ. ಶಾಲಾ ವಿದ್ಯಾರ್ಥಿಗಳನ್ನು ಸಂಘಟಿಸಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಿರುವೆ. ನನಗಿರುವ ಕನ್ನಡ ಪ್ರೇಮದಿಂದ ಇದೆಲ್ಲಾ ಸಾಧ್ಯವಾಯಿತು. ನಿವೃತ್ತರಾದ ಬಳಿಕವೂ ನಾನು ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಂದಿರುವೆ . ಈ ಕಾರ್ಯಕ್ರಮದಿಂದಾಗಿ ನಾನು ಸಂತೋಷ ಗೊಂಡಿರುವೆ.ಕಸಾಪ ದ ಸಂಘಟಕರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಕನ್ನಡ ಪರ ಸಂಘಟನೆಗಳು ಕನ್ನಡ ನಾಡು ನುಡಿಯ ಬೆಳವಣಿಗೆಗೆ ಶ್ರಮಿಸಿದ ಕನ್ನಡ ಪರ ಸಂಘಟನೆಗಳನ್ನು ಕನ್ನಡಾಂಬೆಯು ಹರಸಲಿ ಎಂದರು.
ಸಭೆಯ ಅಧ್ಯಕ್ಷತೆಯನ್ನು ಹೆಬ್ರಿ ಕ ಸಾ ಪ. ಘಟಕ ದ ಅಧ್ಯಕ್ಷರಾದ ಶ್ರೀನಿವಾಸ್ ಭಂಡಾರಿ ಮಾತನಾಡಿ, ನಾವು ಪ್ರತಿ ವರ್ಷವೂ ಕನ್ನಡದ ಬೆಳವಣಿಗೆಗೆ ಶ್ರಮಿಸಿದ ಹಿರಿಯರನ್ನು ಕನ್ನಡ ರಾಜ್ಯೋತ್ಸವ ದಿನದಂದು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿ ಹಿರಿಯರಾದ ಗಂಗಾಧರ ರಾವ್ ಅವರನ್ನು ಸನ್ಮಾನಿಸಿದ್ದೇವೆ. ಅವರು ಕನ್ನಡದ ಬೆಳವಣಿಗೆಗೆ ಸದ್ದಿಲ್ಲದೇ ದುಡಿದ ವ್ಯಕ್ತಿ. ಅವರ ಅಪಾರ ಅನುಭವ ಸಮಾಜಕ್ಕೆ ದೊರಕಿದೆ. ಅವರನ್ನು ಸನ್ಮಾನಿಸುವ ಕಾರ್ಯ ಇತರರಿಗೆ ಪ್ರೇರಣೆಯಾಗಲಿದೆ ಎಂದರು.ಹೆಬ್ರಿ ಲಯನ್ಸ್ ಕ್ಲಬ್ ಅಧ್ಯಕ್ಷ ಸೀತಾನದಿ ನಾಗೇಶ್ ನಾಯಕ್ ಮಾತನಾಡಿ, ಸನ್ಮಾನಿತರು ಕನ್ನಡದ ಭಾಷಾಭಿಮಾನದಿಂದ ಸಮಾಜದಲ್ಲಿ ಗೌರವ ಪಡೆದವರಾಗಿದ್ದಾರೆ. ಅವರು ಸರ್ಕಾರಿ ಕನ್ನಡ ಶಾಲೆಯಲ್ಲಿರುವಾಗಲೇ ಕನ್ನಡ ಭಾಷೆಯ ಅಭಿಮಾನದಿಂದ ಶಾಲಾ ಮಕ್ಕಳಿಗೆ ಕನ್ನಡದ ಬಗ್ಗೆ ಹೆಚ್ಚಿನ ಒಲವು ಮೂಡಿಸುತ್ತಿದ್ದರು. ನಾವು ಮಾತನಾಡುವ ಕನ್ನಡ ಭಾಷೆಯಲ್ಲಿ ಆಂಗ್ಲ ಭಾಷೆ ಮಿಶ್ರವಾಗಿ ಬಂದರೂ, ಶುದ್ಧ ಕನ್ನಡದ ಸಂಭಾಷಣೆಯನ್ನು ಯಕ್ಷಗಾನದಲ್ಲಿ ಮಾತ್ರ ಕೇಳಿ ಕನ್ನಡದ ಕಂಪನ್ನು ಸವಿಯಲು ಸಾಧ್ಯ ಎಂದರು.
ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಸುರೇಶ್ ಭಂಡಾರಿ, ಹೆಬ್ರಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಸುಧಾಕರ ಹೆಗ್ಡೆ, ಶಾಲಾ ಮುಖ್ಯೋಪಾಧ್ಯಾಯರಾದ ರಾಮಾಂಜನೇಯ, ನಿವೃತ್ತ ಪ್ರಾಂಶುಪಾಲರಾದ ಡಾ. ವಾಸುದೇವ ಭಟ್, ಶಾಲಾ ಎಸ್. ಡಿ. ಎಂ. ಸಿ . ಅಧ್ಯಕ್ಷೆ ಜ್ಯೋತಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಮಹಿಳೆಯರು ಸಮೂಹವಾಗಿ ಕನ್ನಡ ನಾಡು ಗೀತೆಯನ್ನು ಹಾಡಿದರು.
ಹೆಬ್ರಿ ಕ. ಸಾ. ಪ ಪದಾಧಿಕಾರಿಗಳಾದ ಮಹೇಶ್ ಹೈಕಾಡಿ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಮಂಜುನಾಥ ಶಿವಪುರ ನಿರೂಪಿಸಿ, ಸಂಫಟನಾ ಕಾರ್ಯದರ್ಶಿ ಪ್ರೀತೇಶ್ ಕುಮಾರ್ ಶೆಟ್ಟಿ ವಂದಿಸಿದರು. ಪೂರ್ಣೇಶ್ ಹೆಬ್ರಿ ಸನ್ಮಾನ ಪತ್ರ ವಾಚಿಸಿದರು.ಕ. ಸಾ. ಪ. ಪದಾಧಿಕಾರಿಗಳು, ಸದಸ್ಯರು, ಸನ್ಮಾನಿತರ ಬಂಧುಬಳಗ ಹಾಜರಿದ್ದರು.