ಎಷ್ಟು ಭಾಷೆಯನ್ನಾದರೂ ಕಲಿಯಿರಿ, ಮಾತೃಭಾಷೆಗೆ ಆದ್ಯತೆ ನೀಡಿ

| Published : Nov 27 2024, 01:00 AM IST

ಎಷ್ಟು ಭಾಷೆಯನ್ನಾದರೂ ಕಲಿಯಿರಿ, ಮಾತೃಭಾಷೆಗೆ ಆದ್ಯತೆ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳು ಹೆಚ್ಚು ಬುದ್ಧಿಮತ್ತೆ ಹೊಂದಿರುತ್ತಾರೆ. ಆದ್ದರಿಂದ ಮನೆಯಿಂದಲೇ ಮಾತೃಭಾಷೆ ಕಲಿಸುವ ಕೆಲಸ ಆಗಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಭಾಷೆ ಎಂಬುದು ದ್ವೇಷಿಸುವ ವಸ್ತುವಲ್ಲ, ಎಷ್ಟು ಭಾಷೆ ಬೇಕಾದರೂ ಕಲಿಯಿರಿ. ಆದರೆ ಮಾತೃಭಾಷೆಗೆ ಆದ್ಯತೆ ನೀಡಿ ಎಂದು ಮೈಸೂರು ಆಕಾಶವಾಣಿ ಹಿರಿಯ ಉದ್ಘೋಷಕ ಪ್ರಭುಸ್ವಾಮಿ ಮಳಿಮಠ ಕರೆ ನೀಡಿದರು.

ಮೈಸೂರು ಟ್ರಾವೆಲ್ಸ್‌ ಅಸೋಸಿಯೇಷನ್‌ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತಸಭಾದಲ್ಲಿ ಮಂಗಳವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕನ್ನಡದ ಜೊತೆಗೆ ಇಂಗ್ಲಿಷ್, ಹಿಂದಿ ಸೇರಿದಂತೆ ಎಷ್ಟು ಬೇಕಾದರೂ ಭಾಷೆ ಕಲಿಯಿರಿ. ಆದರೆ ಮಾತೃಭಾಷೆಯನ್ನು ಪ್ರೀತಿಸಿ ಎಂದರು.

ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳು ಹೆಚ್ಚು ಬುದ್ಧಿಮತ್ತೆ ಹೊಂದಿರುತ್ತಾರೆ. ಆದ್ದರಿಂದ ಮನೆಯಿಂದಲೇ ಮಾತೃಭಾಷೆ ಕಲಿಸುವ ಕೆಲಸ ಆಗಬೇಕು ಎಂದರು.

ಯಾವುದೋ ವಸ್ತುವಾದರೂ ಬಳಸದಿದ್ದರೆ ಹಾಳಾಗುತ್ತದೆ. ಆದ್ದರಿಂದ ಕನ್ನಡ ಭಾಷೆಯನ್ನು ಬಳಸಿ. ಸಂವಹನಕ್ಕೆ ಭಾಷೆ ಬೇಕು. ಅದನ್ನು ಬಳಸಬೇಕಾದರೆ ಅಧ್ಯಯನ ಕೂಡ ಮುಖ್ಯವಾಗುತ್ತದೆ. ಸಾಹಿತ್ಯ ಕೃತಿಗಳನ್ನು ಓದುವ ಮೂಲಕ ಜಗತ್ತನ್ನು ಅರಿಯಿರಿ ಎಂದರು.

ಮತ್ತೊರ್ವ ಸನ್ಮಾನಿತರಾದ ಸಂವಹನ ಪ್ರಕಾಶನದ ಡಿ.ಎನ್‌. ಲೋಕಪ್ಪ ಮಾತನಾಡಿ, ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ಕುವೆಂಪು ಅವರು ಹೇಳಿದ್ದರು. ಆದರೆ ಏಕೀಕರಣವಾಗಿ ಇಷ್ಟು ವರ್ಷಗಳಾದರೂ ಇನ್ನೂ ಕರ್ನಾಟಕದ ಗಡಿ, ಜಲ, ನೆಲ, ಭಾಷೆ ಮತ್ತಿತರ ಸಮಸ್ಯೆಗಳು ಬಗೆಹರಿದಿಲ್ಲ ಎಂದು ವಿಷಾದಿಸಿದರು.

ಪ್ರತಿಯೊಬ್ಬರೂ ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಪುಸ್ತಕ ಹಾಗೂ ಪತ್ರಿಕೆಗಳನ್ನು ಓದಬೇಕು. ಎಲ್ಲರ ಮನೆಯಲ್ಲೂ ಒಂದು ಪುಟ್ಟದಾದ ಗ್ರಂಥಾಲಯ ಇರಬೇಕು ಎಂದು ಅವರು ಸಲಹೆ ಮಾಡಿದರು.

ಮೈಸೂರು ಆಕಾಶವಾಣಿ ಕೇಳುಗರ ಬಳಗವಾದ ಸಮುದ್ಯತಾ ಶ್ರೋತ್ರು ಸಂಘದ ಅಧ್ಯಕ್ಷ ಕಣ್ಣೂರು ವಿ. ಗೋವಿಂದಾಚಾರಿ ಮಾತನಾಡಿ, ವಾಹನಗಳ ಮೇಲೆ ಕನ್ನಡದಲ್ಲಿ ಘೋಷವಾಕ್ಯ ಬರೆಸಿ ಎಂದು ಸಲಹೆ ಮಾಡಿದರು.

ಪ್ರವಾಸಿ ರಾಯಭಾರಿಗಳು

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಮೈಸೂರು ಟ್ರಾವೆಲ್ಸ್‌ ಅಸೋಸಿಯೇಷನ್‌ ಸದಸ್ಯರಾಗಿರುವ ಮಾಲೀಕರು ಹಾಗೂ ಚಾಲಕರು ಪ್ರವಾಸಿ ರಾಯಭಾರಿಗಳಂತೆ ಕೆಲಸ ಮಾಡುತ್ತಿದ್ದಾರೆ. ಅವರ ಈ ಸೌಜನ್ಯಯುತ ನಡವಳಿಕೆಯಿಂದಾಗಿಯೇ ಇತ್ತೀಚಿನ ದಿನಗಳಲ್ಲಿ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ ಎಂದರು.

ಅಸೋಸಿಯೇನ್‌ ಸದಸ್ಯರು ಕೋವಿಡ್‌ ಸಂದರ್ಭದಲ್ಲಿ ಅಶಕ್ತರಿಗೆ ಉಚಿತ ವಾಹನ ಒದಗಿಸಿದ್ದಾರೆ. ಆಹಾರ, ಔಷಧಿ ವಿತರಣೆಯಲ್ಲೂ ಕಾಳಜಿ ತೋರಿ ಮಾನವೀಯತೆ ಮೆರೆದಿದ್ದಾರೆ ಎಂದು ಶ್ಲಾಘಿಸಿದರು.

ಕನ್ನಡ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಸಿ.ಎಸ್. ಶ್ರೀನಿವಾಸ್‌ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಸ್ಕಾಲ್‌ ಇಂಟರ್‌ ನ್ಯಾಷನಲ್‌ ಅಧ್ಯಕ್ಷ ಸಿ.ಟಿ. ಜಯಕುಮಾರ್‌ ವಂದಿಸಿದರು. ಸನ್ಮಾನಿತರನ್ನು ಕಾರ್ಯದರ್ಶಿ ಮಂಜುನಾಥ್‌, ಎ.ಸಿ. ರವಿ ಪರಿಚಯಿಸಿದರು. ಅನಿತಾ ಡೇವಿಡ್‌ ಪ್ರಾರ್ಥಿಸಿದರು. ಧಾತ್ರಿ ಭಾರದ್ವಾಜ್‌ ನಿರೂಪಿಸಿದರು. ನಂತರ ಕನ್ನಡ ಗೀತೆಗಳ ಗಾಯನ ನಡೆಯಿತು.