ಮೂಡುಬಿದಿರೆ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ

| Published : Nov 02 2024, 01:30 AM IST / Updated: Nov 02 2024, 01:31 AM IST

ಮೂಡುಬಿದಿರೆ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಮಾತನಾಡಿ ಕನ್ನಡ ಮಾಧ್ಯಮ ಅಥವಾ ಶಾಲೆಗೆ ಹೋಗುವ ಮಕ್ಕಳು ಮಾತ್ರ ಕನ್ನಡ ಭಾಷೆಯನ್ನು ಮಾತನಾಡಿದರೆ ಸಾಲದು ಬದಲಾಗಿ ನಮ್ಮ ಮನೆಯಲ್ಲಿ ಕೂಡಾ ಕನ್ನಡವನ್ನು ಮಾತನಾಡಬೇಕು. ಆಗ ಮಾತ್ರ ಭಾಷೆಯ ಉಳಿವು ಸಾಧ್ಯ ಎಂದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮೂಡುಬಿದಿರೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಆಡಳಿತ ಸೌಧದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ತಾಲೂಕು ತಹಸೀಲ್ದಾರ್ ಶ್ರವಣ್ ಅವರು ಧ್ವಜರೋಹಣ ನೆರವೇರಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದರೂ ಕರುನಾಡಿಗೆ ಸ್ವಾತಂತ್ರ್ಯ ಬಂದಿರಲಿಲ್ಲ. 9 ಜಿಲ್ಲೆಗಳು ಮುಂಬೈಗೆ ಸೇರಿದ್ದವು ಉಳಿದಂತೆ ಕನ್ನಡಿಗರು ಮೈಸೂರಿಗೆ ಹಂಚಿ ಹೋಗಿದ್ದರು. ಅವರನ್ನು ಒಟ್ಟುಗೂಡಿಸುವ ಜವಾಬ್ದಾರಿ ಕನ್ನಡಿಗರಿಗಿತ್ತು ಆದ್ದರಿಂದ ಆಲೂರು ವೆಂಕಟಾಚಲರಾವ್ ಮತ್ತು ನಾರಾಯಣ ರಾವ್ ಅವರು ಕನ್ನಡಿಗರನ್ನು ಜಾಗೃತಿಗೊಳಿಸುವ ಕೆಲಸವನ್ನು ಆರಂಭಿಸಿದರು ಇದರ ಫಲವಾಗಿ 1953ರಲ್ಲಿ ಮೈಸೂರು ಪ್ರಾಂತವಾಯಿತು. ನಂತರ 1973ರಲ್ಲಿ ಹೆಸರು ಬದಲಾವಣೆಯಾಯಿತು. ಈ ನಿಟ್ಟಿನಲ್ಲಿ ನಮ್ಮ ನೆಲ, ಜಲ, ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಮಾತನಾಡಿ ಕನ್ನಡ ಮಾಧ್ಯಮ ಅಥವಾ ಶಾಲೆಗೆ ಹೋಗುವ ಮಕ್ಕಳು ಮಾತ್ರ ಕನ್ನಡ ಭಾಷೆಯನ್ನು ಮಾತನಾಡಿದರೆ ಸಾಲದು ಬದಲಾಗಿ ನಮ್ಮ ಮನೆಯಲ್ಲಿ ಕೂಡಾ ಕನ್ನಡವನ್ನು ಮಾತನಾಡಬೇಕು. ಆಗ ಮಾತ್ರ ಭಾಷೆಯ ಉಳಿವು ಸಾಧ್ಯ ಎಂದರು.

ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಕುಸುಮಾಧರ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ., ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ಅಕ್ಷತಾ ನಾಯಕ್, ಅಬಕಾರಿ, ಪಶು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಗ್ನಿಶಾಮಕ, ಕಂದಾಯ, ಅರಣ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಉಪ ತಹಸೀಲ್ದಾರ್‌ ರಾಮ್ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.