ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ತಂಡ ನಾಡು, ನುಡಿ ಬಿಂಬಿಸುವ ಹಳೆಯ ಕನ್ನಡ ಹಾಡುಗಳಿಗೆ ನೃತ್ಯ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.
ಕನ್ನಡಪ್ರಭ ವಾರ್ತೆ ಕೊಡ್ಲಿಪೇಟೆ
ಕೂರ್ಗ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಸೋಮವಾರ ಇಲ್ಲಿನ ಬಸ್ ನಿಲ್ದಾಣದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ತಂಡ ನಾಡು, ನುಡಿ ಬಿಂಬಿಸುವ ಹಳೆಯ ಕನ್ನಡ ಹಾಡುಗಳಿಗೆ ನೃತ್ಯ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳ ತಂಡ ಕನ್ನಡ ಹಾಡುಗಳಿಗೆ ವರ್ಣಮಯ ನೃತ್ಯ ಪ್ರದರ್ಶನ ಮಾಡುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಲಾಯಿತು.ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಗಳ ತಂಡ ಹಳೆಯ ಕನ್ನಡ ಹಾಡುಗಳಿಗೆ ಕನ್ನಡ ನಾಡು ಬಿಂಬಿಸುವ ಹರಿಸಿನ ಮತ್ತು ಕೆಂಪು ಬಣ್ಣದ ವಸ್ತ್ರಗಳನ್ನು ತೊಟ್ಟು ಕೈಯಲ್ಲಿ ಕನ್ನಡ ಬಾವುಟ ಹಿಡಿದು ಅದ್ಭುತ ನೃತ್ಯ ಪ್ರದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ.ಮಂತರ್ ಗೌಡ ಮಾತನಾಡಿ ಕನ್ನಡ ರಾಜ್ಯೋತ್ಸವ ಕೇವಲ ನವಂಬರ್ ತಿಂಗಳಿಗೆ ಸೀಮಿತ ಆಗಬಾರದು. ನಿರಂತರವಾಗಿ ಪ್ರತಿದಿನ ಕನ್ನಡ ಕಾರ್ಯಕ್ರಮಗಳು ನಡೆಯಬೇಕು. ನಾವು ಕನ್ನಡಿಗರಬೇಕು. ಆಂಗ್ಲ ವ್ಯಾಮೋಹ ದಿಂದ ಮಾತೃಭಾಷೆಯನ್ನು ಕಡೆಗಣಿಸಲಾಗುತ್ತಿದೆ. ಅದು ಆಗಬಾರದು ಕನ್ನಡ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಆಟೋ ಚಾಲಕರ ಸಂಘದವರು ಕನ್ನಡ ಧ್ವಜವನ್ನು ನಿರಂತರವಾಗಿ ಹಾರಿಸುತ್ತಿರುವುದು ಹೆಮ್ಮೆಯ ವಿಚಾರ. ಜೊತೆಗೆ ಆಟೋಚಾಲಕರು ಕನ್ನಡ ಸಿನಿಮಾಗಳ ಅಭಿಮಾನಿಗಳಾಗಿದ್ದಾರೆ. ಆಟೋಚಾಲಕರ ಸಮಾಜ ಸೇವೆ ಶ್ಲಾಘನೀಯ. ಆಟೋ ಚಾಲಕರ ಸಮಸ್ಯೆಗಳಿಗೆ ನಾವು ಸ್ಪಂದಿಸುತ್ತೇವೆ. ಜೊತೆಗೆ ಜಾಗ ಪರಿಶೀಲನೆ ಮಾಡಿ ಆಟೋನಿಲ್ದಾಣಕ್ಕೆ ಸೂಕ್ತ ಸ್ಥಳ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಊರ್ದು ಶಾಲೆಯ ಮುಖ್ಯ ಶಿಕ್ಷಕ ಮುಜಾಮಿಲ್ ಅಖ್ತರ್ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕೂರ್ಗ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಡಿ.ವಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಪ್ಸರೆ ಬೇಗಂ, ಸದಸ್ಯರಾದ ಚಂದ್ರಶೇಖರ್, ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಖಜಾಂಜಿ ಡಾ.ಉದಯಕುಮಾರ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಜನಾರ್ದನ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಔರಂಗಜೇಬು, ಕೂರ್ಗ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಮಾಜಿ ಅಧ್ಯಕ್ಷರಾದ ಸೋಮಣ್ಣ, ವಿಜಯ್, ಅಬ್ದುಲ್ , ವಾಜಪೇಯಿ ವಸತಿ ಶಾಲೆ ಶಿಕ್ಷಕ ಸತೀಶ್ ಮತ್ತು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ತೀರ್ಪುಗಾರರಾಗಿ ಮುಜಾಮಿಲ್ ಅಖ್ತರ್, ಜಾಕಿರ್, ಧರ್ಮಣ್ಣ ಕಾರ್ಯನಿರ್ವಹಿಸಿದರು.
ಇದೇ ಸಂದರ್ಭ ಸಂಘದ ವತಿಯಿಂದ ಶಾಸಕ ಡಾ.ಮಂತರ್ ಗೌಡ ಅವರನ್ನು ಸನ್ಮಾನಿಸಿ ಗೌರವಿಸಿದರು.