ಕನ್ನಡ ರಾಜ್ಯೋತ್ಸವ ಅಸ್ಮಿತೆಯ ಸಂಕೇತ

| Published : Nov 02 2024, 01:30 AM IST

ಸಾರಾಂಶ

ಕನ್ನಡ ನಾಡು ಉದಯವಾಗಿ 68 ವರ್ಷಗಳು ಕಳೆದಿವೆ. ಒಂದೆಡೆ ಅಭಿವೃದ್ಧಿಯಾದರೇ ಇನ್ನೊಂದೆಡೆ ಕನ್ನಡ ಭಾಷೆ, ಆಹಾರ, ಉಡುಗೆ-ತೊಡುಗೆ, ಸಂಸ್ಕೃತಿಗಳ ಮೇಲೆ ಅನ್ಯ ಸಂಸ್ಕೃತಿಯ ಪ್ರಭಾವದಿಂದ ಕನ್ನಡತನ ಮರೆಯಾಗುತ್ತಿದೆ.

ಕಲಘಟಗಿ:

ಕನ್ನಡ ರಾಜ್ಯೋತ್ಸವ ಅಸ್ಮಿತೆಯ ಸಂಕೇತವಾಗಿದೆ ಎಂದು ತಹಸೀಲ್ದಾರ್ ವೀರೇಶ ಮುಳಗುಂದಮಠ ಹೇಳಿದರು.

ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ತಾಲೂಕಾಡಳಿತ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಕನ್ನಡ ಪರ ಸಂಘಟನೆಗಳ ಆಶ್ರಯದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಕುರಿತು ಯುವಪೀಳಿಗೆಗೆ ಅರಿವು ಮೂಡಿಸಬೇಕಿದೆ. ಆದರಿಂದ ಪ್ರತಿಯೊಬ್ಬರು ಕನ್ನಡ ಬಳಸಿ, ಬೆಳೆಸಿ ಮೆರೆಸಬೇಕೆಂದು ಕರೆ ನೀಡಿದರು.

ಉಪನ್ಯಾಸ ನೀಡಿದ ಸಾಹಿತಿ ವೈ.ಜಿ. ಭಗವತಿ, ಕನ್ನಡ ನಾಡು ಉದಯವಾಗಿ 68 ವರ್ಷಗಳು ಕಳೆದಿವೆ. ಒಂದೆಡೆ ಅಭಿವೃದ್ಧಿಯಾದರೇ ಇನ್ನೊಂದೆಡೆ ಕನ್ನಡ ಭಾಷೆ, ಆಹಾರ, ಉಡುಗೆ-ತೊಡುಗೆ, ಸಂಸ್ಕೃತಿಗಳ ಮೇಲೆ ಅನ್ಯ ಸಂಸ್ಕೃತಿಯ ಪ್ರಭಾವದಿಂದ ಕನ್ನಡತನ ಮರೆಯಾಗುತ್ತಿದೆ. ಕನ್ನಡಿಗರು ಎಚ್ಚೆತ್ತುಕೊಂಡು ಅಚ್ಚ ಕನ್ನಡದಲ್ಲಿ ಮಾತನಾಡಬೇಕು. ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿ ಕಲಿಸಬೇಕೆಂದರು.

ಪ್ರಾಚೀನ ಭಾಷೆಯಾದ ಕನ್ನಡ ಆಂಗ್ಲಭಾಷೆಯ ವ್ಯಾಮೋಹದಿಂದಾಗಿ ಸಂಬಂಧದ ಪದಗಳು ನಶಿಸಿಹೋಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಹರಿದು ಹಂಚಿಹೋಗಿದ್ದ ಕನ್ನಡದ ಪ್ರದೇಶಗಳು ಒಂದುಗೂಡಿದ ದಿನ ಕನ್ನಡ ರಾಜ್ಯೋತ್ಸವ ಆಗಿದ್ದು ಇಂಥಹ ದಿನವನ್ನು ಕನ್ನಡಿಗರು ಅಭಿಮಾನದಿಂದ ಮನೆ ಹಬ್ಬವಾಗ ಆಚರಿಸಬೇಕು ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ತಾಲೂಕಿನ 10 ಸಾಧಕರನ್ನು ಸನ್ಮಾನಿಸಲಾಯಿತು ಶಾಲಾ ಮಕ್ಕಳಿಂದ ಸಂಸ್ಕೃತಿ ಕಾರ್ಯಕ್ರಮ ಜರುಗಿದವು.

ಈ ವೇಳೆ ತಾಪಂ ಇಒ ಪಿ.ವೈ. ಸಾವಂತ, ಬಿಇಒ ಉಮಾದೇವಿ ಬಸಾಪುರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥಗೌಡ ಮುರಳಿ, ಗಿರೀಶ್ ಮುಕ್ಕಲ್, ಪ್ರಭು ರಂಗಾಪುರ, ಶಶಿಕುಮಾರ ಕಟ್ಟಿಮನಿ , ಪುಂಡಲೀಕ ಯಲ್ಲಾರಿ, ವಿಎಸ್‌. ನಾಗಲೋತಿಮಠ, ಸಂಪತ್ ಕಿಚಡಿ, ಉದಯ ಗೌಡರ, ಗಂಗಾಧರ ಗೌಳಿ, ಎಸ್‌.ಎ. ಚಿಕ್ಕನರ್ತಿ, ಬಸವರಾಜ ಹೊಂಕಣದವರ, ಜಗದೀಶ ವಿರಕ್ತಮಠ, ಎಂ.ಆರ್‌. ತೋಟಗಂಟಿ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು, ತಾಲೂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.