ಒಕ್ಕಲಿಗರ ವೇದಿಕೆಯಿಂದ ನ.29 ರಂದು ಕನ್ನಡ ರಾಜ್ಯೋತ್ಸವ: ವಿ.ಎಂ.ಕುಮಾರಗೌಡ

| Published : Nov 23 2025, 01:45 AM IST

ಒಕ್ಕಲಿಗರ ವೇದಿಕೆಯಿಂದ ನ.29 ರಂದು ಕನ್ನಡ ರಾಜ್ಯೋತ್ಸವ: ವಿ.ಎಂ.ಕುಮಾರಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಜಾನಪದ ಕಲಾ ತಂಡಗಳ ಕುಣಿತದೊಂದಿಗೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ತಾಯಿ ಭುವನೇಶ್ವರಿ ಹಾಗೂ ನಾಡಪ್ರಭು ಕೆಂಪೇಗೌಡರ ಭಾವಚಿತ್ರಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಗುವುದು. ಆನಂತರ ಪಟ್ಟಣದ ಟಿಎಪಿಸಿಎಂಎಸ್ ಸಮುದಾಯ ಭವನದಲ್ಲಿ ಬೃಹತ್ ಸಭೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕು ಒಕ್ಕಲಿಗರ ವೇದಿಕೆಯಿಂದ ನ.29ರಂದು ಪಟ್ಟಣದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ವಳಗೆರೆಮೆಣಸ ವಿ.ಎಂ.ಕುಮಾರಗೌಡ ತಿಳಿಸಿದರು.

ಈ ಬಗ್ಗೆ ಪತ್ರಿಕಾ ಮಾಹಿತಿ ನೀಡಿದ ಅವರು, ರಾಜ್ಯ ಮಟ್ಟದಲ್ಲಿ ಇದುವರೆಗೂ ಯಾವುದೇ ಒಕ್ಕಲಿಗರ ಸಂಘ ಪ್ರತ್ಯೇಕ ವೇದಿಕೆ ರೂಪಿಸಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿಲ್ಲ. ಇದೇ ಪ್ರಥಮ ಬಾರಿಗೆ ತಾಲೂಕು ಒಕ್ಕಲಿಗರ ವೇದಿಕೆ ರಾಜ್ಯೋತ್ಸವ ಸಂಘಟಿಸುತ್ತಿದೆ ಎಂದರು.

ವಿವಿಧ ಜಾನಪದ ಕಲಾ ತಂಡಗಳ ಕುಣಿತದೊಂದಿಗೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ತಾಯಿ ಭುವನೇಶ್ವರಿ ಹಾಗೂ ನಾಡಪ್ರಭು ಕೆಂಪೇಗೌಡರ ಭಾವಚಿತ್ರಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಗುವುದು. ಆನಂತರ ಪಟ್ಟಣದ ಟಿಎಪಿಸಿಎಂಎಸ್ ಸಮುದಾಯ ಭವನದಲ್ಲಿ ಬೃಹತ್ ಸಭೆ ನಡೆಯಲಿದೆ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ಡಾ.ನಂಜಾವದೂತ ಸ್ವಾಮೀಜಿ, ಪುರುಷೋತ್ತಮನಾಥ ಸ್ವಾಮೀಜಿ ಮತ್ತು ಪ್ರಸನ್ನನಾಥ ಸ್ವಾಮೀಜಿಗಳು ಬೃಹತ್ ಮೆರವಣಿಗೆ ಮತ್ತು ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.

ಶಾಸಕ ಎಚ್.ಟಿ.ಮಂಜು, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್ ಸೇರಿದಂತೆ ಒಕ್ಕಲಿಗ ಸಮುದಾಯದ ಸರ್ವ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಆಗಮಿಸಲಿದ್ದಾರೆ. ರಾಜ್ಯಾದ್ಯಂತ ಒಕ್ಕಲಿಗ ಸಮುದಾಯ ಶೋಷಣೆಗೆ ಒಳಗಾಗುತ್ತಿದೆ. ತಮ್ಮ ಮೇಲಿನ ಶೋಷಣೆ ವಿರುದ್ಧ ಒಕ್ಕಲಿಗ ಸಮುದಾಯ ಒಗ್ಗೂಡಿಸಿ ಹೋರಾಟದ ವೇದಿಕೆಗೆ ಕರೆತರುವುದಕ್ಕಾಗಿ ತಾಲೂಕು ಒಕ್ಕಲಿಗರ ವೇದಿಕೆ ಅಸ್ತಿತ್ವಕ್ಕೆ ಬಂದಿದೆ ಎಂದರು.

ತಾಲೂಕಿನ ಒಕ್ಕಲಿಗ ಸಮುದಾಯದ ಎಲ್ಲಾ ಜನಪ್ರತಿನಿಧಿಗಳು ಮತ್ತು ಸ್ಥಳೀಯ ಮುಖಂಡರ ಮನೆ ಬಾಗಿಲಿಗೆ ಹೋಗಿ ವೇದಿಕೆ ಸದಸ್ಯರು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಿದ್ದಾರೆ. ಸುಮಾರು 5 ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳಲಿದ್ದಾರೆ ಎಂದರು.

ವೇದಿಕೆ ಕಾರ್ಯದರ್ಶಿ ಗೌರೀಶ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಪದಾಧಿಕಾರಿಗಳಾದ ಕಿರಣ್, ಟಿ.ವೈ.ಆನಂದ, ದೇವರಾಜು, ಬಿ.ಎಸ್.ರಾಜೇಶ್, ಸೋಮಣ್ಣ, ರೋಹಿತಾಕ್ಷ, ಕೆ.ಎಸ್.ಸಂತೋಷ್, ನಾಗರಾಜೇಗೌಡ, ವಿಶ್ವನಾಥ್ ಮತ್ತಿತರರಿದ್ದರು.