ಕಸಾಪ ನಡೆಯಿಂದ ಕನ್ನಡಿಗರಿಗೆ ಅಪಮಾನ!

| Published : Nov 06 2024, 12:42 AM IST

ಸಾರಾಂಶ

ಹಂಪನಾ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಇನ್ನೆಷ್ಟು ಯೋಗ್ಯತೆಬೇಕೆಂದು ಕಸಾಪ ಹಾಲಿ ಅಧ್ಯಕ್ಷರಿಗೆ ಪರೋಕ್ಷವಾಗಿ ಡಾ. ರಾಮೇಗೌಡ ಪ್ರಶ್ನಿಸಿದರು.

ಧಾರವಾಡ

ಹಿರಿಯ ಸಾಹಿತಿಗಳಾದ ಹಂ.ಪ. ನಾಗರಾಜಯ್ಯ ಅವರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ನೀಡದೇ ಇರುವುದು ಕನ್ನಡಿಗರಿಗೆ ಹಾಗೂ ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಮಾಡಿದ ಅವಮಾನ ಎಂದು ಸಾಹಿತಿ ಡಾ. ಬೈರಹೊಂಗಲ ರಾಮೇಗೌಡ ಆರೋಪಿಸಿದರು.

69ನೇ ರಾಜ್ಯೋತ್ಸವದ ನಿಮಿತ್ತ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇಡೀ ತಿಂಗಳು ನಡೆಯಲಿರುವ ಧರೆಗೆ ದೊಡ್ಡವರು ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಮೊದಲ ದಿನ ಮಂಗಳವಾರ ಹಂ.ಪ. ನಾಗರಾಜಯ್ಯ ಅವರ ಬದುಕು-ಬರಹ ಕುರಿತು ಮಾತನಾಡಿದ ಅವರು, ಹಂಪನಾ ಅವರು ಎಂಟು ವರ್ಷಗಳ ಕಾಲ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ. 115 ಕೃತಿಗಳನ್ನು ರಚಿಸಿದ್ದು 88ನೇ ವಯಸ್ಸಿನಲ್ಲೂ ದೇಶ-ವಿದೇಶಗಳ ವಿಶ್ವವಿದ್ಯಾಲಯಗಳಿಗೆ ಹೋಗಿ ಕನ್ನಡದ ಬಗ್ಗೆ ಉಪನ್ಯಾಸ ನೀಡುತ್ತಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಇನ್ನೆಷ್ಟು ಯೋಗ್ಯತೆ ಬೇಕೆಂದು ಕಸಾಪ ಹಾಲಿ ಅಧ್ಯಕ್ಷರಿಗೆ ಪರೋಕ್ಷವಾಗಿ ಡಾ. ರಾಮೇಗೌಡ ಪ್ರಶ್ನಿಸಿದರು.

ಪ್ರತಿ ಬಾರಿ ಸರ್ವಾಧ್ಯಕ್ಷ ಸ್ಥಾನಕ್ಕೆ ಹಂಪನಾ ಹೆಸರು ಉಲ್ಲೇಖವಾದಾಗ ಕ್ಷುಲ್ಲಕ ನೆಪಗಳನ್ನು ಇಟ್ಟುಕೊಂಡು ತಿರಸ್ಕರಿಸಲಾಗುತ್ತಿದೆ. ಕಸಾಪದ ಈ ನಡೆಯು ಕನ್ನಡಿಗರಿಗೆ ಹಾಗೂ ಕನ್ನಡದ ಸಾರಸ್ವತ ಲೋಕಕ್ಕೆ ಮಾಡಿದ ಅಪಮಾನವೇ ಸರಿ. ಹಂಪನಾ ಅವರಿಗೆ ಆಗುತ್ತಿರುವ ಈ ಅವಮಾನವನ್ನು 134 ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ವಿದ್ಯಾವರ್ಧಕ ಸಂಘವು ಧರೆಗೆ ದೊಡ್ಡವರು ಎಂಬ ವಿಶಿಷ್ಟ ಕಾರ್ಯಕ್ರಮದ ಉದ್ಘಾಟನೆಗೆ ಅವರನ್ನು ಆಹ್ವಾನಿಸುವ ಮೂಲಕ ಸರಿದೂಗಿಸಿದೆ ಎಂದರು.