ಸಾರಾಂಶ
ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ನಡೆಯುತ್ತಿಲ್ಲ, ಕಸಾಪ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದ್ದು ತಾಲೂಕಾಧ್ಯಕ್ಷರನ್ನು ಬದಲಿಸುವಂತೆ ಕೆಲವು ಆಜೀವ ಸದಸ್ಯರು ಆಗ್ರಹಿಸಿದ್ದಾರೆ.
ಕೇವಲ ದತ್ತಿ ಉಪನ್ಯಾಸಕ್ಕೆ ಸೀಮಿತ । ಸಾಹಿತ್ಯಿಕ ಚಟುವಟಿಕೆಗಳು ಶೂನ್ಯ
ಪರಶಿವಮೂರ್ತಿ ದೋಟಿಹಾಳಕನ್ನಡಪ್ರಭ ವಾರ್ತೆ ಕುಷ್ಟಗಿ
ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ನಡೆಯುತ್ತಿಲ್ಲ, ಕಸಾಪ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದ್ದು ತಾಲೂಕಾಧ್ಯಕ್ಷರನ್ನು ಬದಲಿಸುವಂತೆ ಕೆಲವು ಆಜೀವ ಸದಸ್ಯರು ಆಗ್ರಹಿಸಿದ್ದಾರೆ.ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಕಾರ್ಯಕ್ರಮ ಆಯೋಜನೆ ಮಾಡದೆ ಕೇವಲ ದತ್ತಿ ಉಪನ್ಯಾಸಕ್ಕೆ ಸೀಮಿತವಾಗಿದ್ದು, ಉಳಿದಂತೆ ಕಾರ್ಯಕ್ರಮ ಮಾಡಲು ತಾಲೂಕಾಧ್ಯಕ್ಷರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುತ್ತಾರೆ ಕೇಂದ್ರ ಕಸಾಪ ಸಂಘ ಸಂಸ್ಥೆ ಪ್ರತಿನಿಧಿ ನಬಿಸಾಬ ಕುಷ್ಟಗಿ.
ನಿಷ್ಕ್ರಿಯ: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆಯ ಸಾಹಿತ್ಯವನ್ನು ನಾಡಿನೆಲ್ಲೆಡೆ ಹರಡಲು ಶ್ರಮಿಸಬೇಕಾಗಿದ್ದು, ನಾಡು ನುಡಿಯನ್ನು ಉಳಿಸಿ ಬೆಳೆಸಬೇಕಾದ ಸಂಸ್ಥೆಯಾಗಿದೆ. ಆದರೆ ಕುಷ್ಟಗಿಯಲ್ಲಿ ಸುಮಾರು ಎರಡು ವರ್ಷದಿಂದ ಕಸಾಪ ಚಟುವಟಿಕೆ ಕೈಗೊಳ್ಳದೆ ಇರುವ ಕಾರಣದಿಂದಾಗಿ ನಿಷ್ಕ್ರಿಯವಾಗಿದೆ ಎನ್ನುವುದು ಆಜೀವ ಸದಸ್ಯರ ಆರೋಪವಾಗಿದೆ.ಆಮಂತ್ರಣವೂ ಇಲ್ಲ:
ತಾಲೂಕಾಧ್ಯಕ್ಷರು ಕಸಾಪದಿಂದ ಮಾಡುವ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ಯಾವುದೇ ಆಮಂತ್ರಣ ಮುದ್ರಿಸಿ ಕೊಡುವುದಿಲ್ಲ. ಕೇವಲ ವಾಟ್ಸ್‌ಆ್ಯಪ್ ಸಂದೇಶದ ಮೂಲಕ ಮಾಹಿತಿ ನೀಡುತ್ತಿದ್ದು, ಕೇವಲ ಪ್ರಚಾರಕ್ಕಾಗಿ ಮಾತ್ರ ಕಾರ್ಯಕ್ರಮ ಮಾಡುತ್ತಿದ್ದಾರೆ. ಇವರು ಪ್ರಚಾರ ಪ್ರಿಯರಾಗಿದ್ದಾರೆ ಹೊರತು ಕನ್ನಡಪರ ಕೆಲಸ ಮಾಡುತ್ತಿಲ್ಲ ಎಂದು ಆಜೀವ ಸದಸ್ಯರೊಬ್ಬರು ಬೇಸರ ಹೊರಹಾಕಿದ್ದಾರೆ.ಸಾಹಿತ್ಯಿಕ ಚಟುವಟಿಕೆಗಳು ಶೂನ್ಯ:
ತಾಲೂಕಿನಲ್ಲಿ ನೂತನವಾಗಿ ಕಸಾಪ ಅಧ್ಯಕ್ಷರಾಗಿ ಸುಮಾರು ಎರಡು ವರ್ಷಗಳಾದರೂ ಸಹಿತ ಒಂದು ತಾಲೂಕು ಸಮ್ಮೇಳನವನ್ನು ಮಾಡಿಲ್ಲ. ಯಾವುದೇ ಕಾವ್ಯ ಕಮ್ಮಟ ಮಾಡಿಲ್ಲ, ಸಾಹಿತ್ಯ ಸಮ್ಮೇಳನವಾಗಲಿ, ಕನ್ನಡಪರ ಕಾರ್ಯಕ್ರಮವಾಗಲಿ ಮಾಡಿಲ್ಲ, ಯುವ ಪ್ರತಿಭೆಗಳನ್ನು ಹೊರತರುವ ಕೆಲಸ ಮಾಡಿಲ್ಲ. ಹೀಗಾಗಿ ಕಸಾಪ ಚಟುವಟಿಕೆಗಳೂ ಶೂನ್ಯವಾಗಿವೆ.ಆಜೀವ ಸದಸ್ಯರ ಸಭೆ:
ಕುಷ್ಟಗಿ ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಕೆಲವು ಆಜೀವ ಸದಸ್ಯರು ಸಭೆ ಮಾಡುವ ಮೂಲಕ ಕಸಾಪ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು ಹಾಗೂ ಕನ್ನಡಪರ ಕಾಳಜಿ ಇರುವಂತಹ ವ್ಯಕ್ತಿಯನ್ನು ನೂತನ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷರನ್ನು ಒತ್ತಾಯಿಸಿದ್ದಾರೆ.