ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕನ್ನಡ ಭಾಷೆ, ಸಾಹಿತ್ಯ, ಕಲೆ, ಜಾನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆ ಮಹದಾಶಯದೊಂದಿಗೆ 1915ರಲ್ಲಿ ಹುಟ್ಟಿಕೊಂಡ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷಾ ಸಾಹಿತ್ಯವನ್ನು ಪೋಷಿಸುವ ಕೆಲಸ ಮಾಡುತ್ತಿದೆ ಎಂದು ನಿವೃತ್ತ ಶಿಕ್ಷಕ ಸಾಹಿತಿ ಚಂದ್ರಶೇಖರಯ್ಯ ಹೇಳಿದರು.ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕಸಾಪ ಸಂಸ್ಥಾಪನ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1915ರ ಮೇ 5ರಂದು ಬೆಂಗಳೂರಿನಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಎಂಬುದಾಗಿ ಸ್ಥಾಪಿಸಿದರು. 1925ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಲಾಯಿತು ಎಂದರು.
ಮೇ 5 ರಂದು ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾದ ಸವಿನೆನಪಿಗಾಗಿ ಪ್ರತಿ ವರ್ಷ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿವಸ ಆಚರಿಸಲಾಗುತ್ತಿದೆ. ಕನ್ನಡ ನಾಡಿನ ನಾಡು, ನುಡಿ, ಮತ್ತು ಜನರ ಹಿತಾಸಕ್ತಿಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಮತ್ತು ವಿಶೇಷ ಜವಾಬ್ದಾರಿ ಈ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ ಎಂದರು.ಕನ್ನಡ ಸಾಹಿತಿಗಳು ಮತ್ತು ಕವಿಗಳಿಗೆ ಪ್ರೋತ್ಸಾಹ, ಕನ್ನಡ ಪುಸ್ತಕಗಳ ಪ್ರಕಟಣೆ, ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ, ಕನ್ನಡ ಭಾಷೆ ರಕ್ಷಣೆ, ಕನ್ನಡ ಶಾಲೆಗಳ ಉಳಿವಿಗಾಗಿ ಹೋರಾಟ ಸೇರಿದಂತೆ ಹಲವು ಕಾರ್ಯಗಳನ್ನು ಕಸಾಪ ನಿರಂತರವಾಗಿ ಮಾಡುತ್ತಿದೆ. ಕನ್ನಡ ಸಾಹಿತ್ಯದ ಸವಿಯನ್ನು ನಾಡಿನ ಮೂಲೆ ಮೂಲೆಗೆ ತಲುಪಿಸುವ ಮತ್ತು ವಿಸ್ತರಿಸುವ ಅಭೂತಪೂರ್ವ ಕಾರ್ಯವನ್ನು ಕಸಾಪ ಸದ್ದಿಲ್ಲದೆ ಮಾಡುತ್ತಿರುವುದು ಸಮಾಧಾನಕರ ಅಂಶವಾಗಿದೆ ಎಂದು ಬಣ್ಣಿಸಿದರು.
ಕನ್ನಡ ಸಾಹಿತ್ಯ ಲೋಕದ ದಿಗ್ಗಜರು, ಸಾಹಿತ್ಯಾಸಕ್ತರು, ಕನ್ನಡ ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಒಂದೆಡೆ ಸೇರಿ, ಪ್ರಚಲಿತ ಸಾಹಿತ್ಯದ ಸ್ಥಿತಿಗತಿಗಳನ್ನು ಚರ್ಚಿಸುವಂತಹ ಬಹುದೊಡ್ಡ ವೇದಿಕೆ-ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಪ್ರತಿ ವರ್ಷ ನಾಡಿನ ಬೇರೆ ಬೇರೆ ಸ್ಥಳಗಳಲ್ಲಿ 3 ದಿನಗಳ ಕಾಲ ಭಾಷೆ ಉಳಿವಿನ ನಿಟ್ಟಿನಲ್ಲಿ ಅದ್ಧೂರಿಯಾಗಿ ಸಾಹಿತ್ಯ ಸಮ್ಮೇಳನದಲ್ಲಿ ನಡೆಸಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಪ್ರಕಾಶ್ ಮೇನಾಗಾರ, ಕಾರ್ಯದರ್ಶಿ ಎರೇಗೌಡನಹಳ್ಳಿ ವೆಂಕಟೇಶ್, ಸ್ವಾಮಿಗೌಡ ಡಾಮಡಹಳ್ಳಿ ಮತ್ತಿತ್ತರು ಉಪಸ್ಥಿತರಿದ್ದರು.