ಸಾರಾಂಶ
ದೊಡ್ಡಬಳ್ಳಾಪುರ: ತಾಲೂಕಿಗೆ ಆಗಮಿಸಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥದ ಎರಡನೇ ದಿನದ ಮೆರವಣಿಗೆಗೆ ತಹಸೀಲ್ದಾರ್ ವಿದ್ಯಾ ವಿಭಾ ರಾಥೋಡ್ ಚಾಲನೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ಮಾತನಾಡಿ, ಕನ್ನಡ ಜಾನಪದ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಗೊ.ರು.ಚನ್ನಬಸಪ್ಪ ಅವರು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು ಸಂತಸದ ಸಂಗತಿಯಾಗಿದೆ. ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ಅವರ ಪಾತ್ರ ದೊಡ್ಡದು. ಹೊನ್ನು ಬಿತ್ತೇವು ಹೊಲಕ್ಕೆಲ್ಲ, ಕರ್ನಾಟಕ ಜಾನಪದ ಕಲೆಗಳು ಮುಂತಾದ ಕೃತಿಗಳು ಜಾನಪದ ಅಧ್ಯಯನ ಮಾಡುವವರಿಗೆ ಅಮೂಲ್ಯ ಕೃತಿಗಳಾಗಿವೆ ಎಂದು ಹೇಳಿದರು.ಗೊ.ರು.ಚನ್ನಬಸಪ್ಪ ಅವರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತರಾಗಿ ಆಗಿ ಮಹತ್ವದ ಸೇವೆ ಸಲ್ಲಿಸಿದವರು.ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳಿಗೆ ಹಲವಾರು ನೃತ್ಯ ಗೀತೆಗಳನ್ನು ರಚಿಸಿದ್ದಾರೆ. ವಯಸ್ಕರ ಶಿಕ್ಷಣ ಮತ್ತು ಭಾರತ ಸೇವಾದಳದಲ್ಲೂ ಸಹ ಗೊ.ರು.ಚನ್ನಬಸಪ್ಪನವರು ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ವಿವರಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಮಂಡ್ಯದಲ್ಲಿ ಡಿ. 20, 21 ಮತ್ತು 22ರಂದು ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗುವ ಪ್ರತಿನಿಧಿಗಳಿಗೆ ಆನ್‌ಲೈನ್‌ನಲ್ಲಿ ನೋಂದಣಿಯಾಗುವ ಅವಕಾಶವಿದೆ. ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು ₹600 ನಿಗದಿಯಾಗಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದಿರುವವರು ಪರಿಷತ್ತಿನ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿದ ನಂತರ ಹಣ ಪಾವತಿ ಕೂಡ ಆನ್‌ಲೈನ್ ಮೂಲಕ ಮಾಡಬೇಕಿರುತ್ತದೆ. ನೋಂದಣಿಯಾಗುವವರಿಗೆ ವಸತಿಯ ಸ್ಥಳ, ವಿಳಾಸ, ನೋಡಲ್ ಅಧಿಕಾರಿಗಳ ಮೊಬೈಲ್ ಸಂಖ್ಯೆ ಹಾಗೂ ಆನ್‌ಲೈನ್‌ನಲ್ಲೇ ಫೋಟೋ ಸಹಿತ ಗುರುತಿನ ಚೀಟಿ ದೊರೆಯುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರ, ಉಪಾಧ್ಯಕ್ಷ ಮಲ್ಲೇಶ್, ಪೌರಾಯುಕ್ತ ಕಾರ್ತಿಕ್ ಈಶ್ವರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ, ರಂಗಭೂಮಿ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ಗೌರವಾಧ್ಯಕ್ಷ ಕಂಟನಕುಂಟೆ ಕೃಷ್ಣಮೂರ್ತಿ, ಕನ್ನಡಪರ ಹೋರಾಟಗಾರರಾದ ತ.ನ.ಪ್ರಭುದೇವ್, ಸಂಜೀವನಾಯಕ್, ಜಿ.ಸತ್ಯನಾರಾಯಣ, ರಾಜಘಟ್ಟರವಿ, ಸಹಾಯಕ ಆಯುಕ್ತರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ರಾಜಶೇಖರ್, ಶಿಕ್ಷಣ ಇಲಾಖೆ, ಮಹಿಳಾ ಹಾಗೂ ಮಕ್ಕಳ ಇಲಾಖೆಯ ಅಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.
ಅದ್ಧೂರಿ ಮೆರವಣಿಗೆ:ದೊಡ್ಡಬಳ್ಳಾಪುರ ಬಸವಭವನ ಸಮೀಪದಿಂದ ಪ್ರಾರಂಭವಾದ ಕನ್ನಡ ಜ್ಯೋತಿ ರಥಕ್ಕೆ ರಸ್ತೆ ಬದಿಯಲ್ಲಿ ಸಾಲಾಗಿ ನಿಂತ ಶಾಲಾ ಕಾಲೇಜು ಸಾವಿರಾರು ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದರು. ಮೆರವಣಿಗೆಯಲ್ಲಿ ಕಲಾ ತಂಡಗಳೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಪೂರ್ಣ ಕುಂಭದೊಂದಿಗೆ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಕನ್ನಡ ಕವಿಗಳು, ಸಾಹಿತಿಗಳು, ಸಾಧಕರ ಪೋಟೋ ಮತ್ತು ಕನ್ನಡ ಬಾವುಟ ಹಿಡಿದು ಗಮನ ಸೆಳೆದರು.
ತಾಲೂಕು ಕಛೇರಿ ವೃತ್ತ, ಮುಗುವಾಳಪ್ಪ ವೃತ್ತ, ಇಸ್ಲಾಂಪುರ ರಸ್ತೆ, ಕೊಂಗಾಡಿಯಪ್ಪ ಕಾಲೇಜು ಮುಂಭಾಗ, ಬಯಲು ಬಸವಣ್ಣ ದೇವಸ್ಥಾನ, ಕನಕದಾಸ ವೃತ್ತದ ತನಕ ಕನ್ನಡ ಜ್ಯೋತಿ ರಥದ ಆದ್ದೂರಿ ಮೆರವಣಿಗೆ ನಡೆಯಿತು. ನಂತರ ಮಧುರೆಯ ಮೂಲಕ ನೆಲಮಂಗಲ ತಾಲೂಕನ್ನು ಕನ್ನಡ ಜ್ಯೋತಿ ರಥ ಪ್ರವೇಶ ಮಾಡಿತು.ಬಾಕ್ಸ್...........
ಸಂವಿಧಾನ ದಿನಾಚರಣೆ: ಪೀಠಿಕೆ ಬೋಧನೆಕನ್ನಡ ಜ್ಯೋತಿ ರಥದ ಮೆರವಣಿಗೆ ತಾಲೂಕು ಕಛೇರಿ ವೃತ್ತಕ್ಕೆ ಬರುತ್ತಿದ್ದಂತೆ ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಪೀಠಿಕೆಯನ್ನು ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ದುರ್ಗಾಶ್ರೀ ಬೋಧನೆ ಮಾಡಿದರು. ವಿವಿಧ ಇಲಾಖೆಯ ಅಧಿಕಾರಿಗಳು, ಕನ್ನಡಪರ ಸಂಘಟನೆಯ ಮುಖಂಡರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಫೋಟೋ-26ಕೆಡಿಬಿಪಿ4-
ದೊಡ್ಡಬಳ್ಳಾಪುರದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ರಥ ಮೆರವಣಿಗೆಗೆ ಸಂಭ್ರಮದ ಚಾಲನೆ ನೀಡಲಾಯಿತು.26ಕೆಡಿಬಿಪಿ5-
ದೊಡ್ಡಬಳ್ಳಾಪುರದಲ್ಲಿ ಕನ್ನಡ ರಥದ ಮೆರವಣಿಗೆ ವೇಳೆ ಸಂವಿಧಾನ ದಿನದ ಅಂಗವಾಗಿ ಸಂವಿಧಾನ ಪ್ರಸ್ತಾವನೆ ಪ್ರತಿಜ್ಞೆ ಬೋಧಿಸಲಾಯಿತು.