ಸಾರಾಂಶ
ಭೂಮಿ ಸ್ವಾಧೀನಪಡಿಸಿಕೊಳ್ಳುವ ಸಂಬಂಧ ರೈತರ ಜೊತೆ ಸಭೆ ನಡೆಸಿರುವುದನ್ನು ಕನ್ನಡ ಸೇನೆ -ಕರ್ನಾಟಕ ಪ್ರಬಲವಾಗಿ ವಿರೋಧಿಸುತ್ತದೆ. ಈಗಾಗಲೇ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಯೋಜನೆಯನ್ನು ವಿರೋಧಿಸಿ ಸಂಬಂಧಪಟ್ಟವರಿಗೆ ಪತ್ರ ನೀಡಲಾಗಿದೆ. ಉದ್ದೇಶಿತ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್‌ಎಸ್ ಕೆಳಭಾಗದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ವಾಹನದ ಪಾರ್ಕಿಂಗ್‌ಗೆ ೨೪ ಎಕರೆ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬಾರದು ಎಂದು ಕನ್ನಡಸೇನೆ ಆಗ್ರಹಿಸಿದೆ.ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಿಗೆ ಸೇನೆಯ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಮನವಿ ಸಲ್ಲಿಸಿ ಮಾತನಾಡಿ, ಭೂಮಿ ಸ್ವಾಧೀನಪಡಿಸಿಕೊಳ್ಳುವ ಸಂಬಂಧ ರೈತರ ಜೊತೆ ಸಭೆ ನಡೆಸಿರುವುದನ್ನು ಕನ್ನಡ ಸೇನೆ -ಕರ್ನಾಟಕ ಪ್ರಬಲವಾಗಿ ವಿರೋಧಿಸುತ್ತದೆ. ಈಗಾಗಲೇ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಯೋಜನೆಯನ್ನು ವಿರೋಧಿಸಿ ಸಂಬಂಧಪಟ್ಟವರಿಗೆ ಪತ್ರ ನೀಡಲಾಗಿದೆ. ಉದ್ದೇಶಿತ ಯೋಜನೆಯನ್ನು ತಕ್ಷಣವೇ ಕೈಬಿಡುವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣದಿಂದ ಈ ಭಾಗದ ಪರಿಸರ, ಜಲ ಮಾಲಿನ್ಯ, ಶಬ್ಧಮಾಲಿನ್ಯದ ಜೊತೆಗೆ ರೈತರು ಮತ್ತು ಅಣೆಕಟ್ಟಿನ ವ್ಯಾಪ್ತಿ ಗ್ರಾಮಗಳಿಗೆ ಧಕ್ಕೆಯಾಗುತ್ತದೆ. ಗ್ರಾಮಗಳ ಪರಿಸರ, ಕೃಷಿ ಬದುಕು ಪಲ್ಲಾಟವಾಗುತ್ತದೆ. ಈ ಯೋಜನೆಯಿಂದ ಕೆಆರ್‌ಎಸ್ ಪ್ರದೇಶದ ಯುವ ಸಮೂಹಗಳ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೃಷಿ ಬದುಕು ನಾಶವಾಗುತ್ತದೆ ಎಂದರು.ಆಣೆಕಟ್ಟಿನ ಬಳಿ ಯಾವುದೇ ದಟ್ಟಣೆಯ ಸಾರ್ವಜನಿಕ ಚಟುವಟಿಕೆಗಳು ನಡೆಯಬಾರದು. ಇದರಿಂದ ಆಮ್ಲಜನಕ ಉತ್ಪಾದನೆಗೆ ತೊಂದರೆಯಾಗಲಿದೆ. ಹಸಿರು ವಲಯ ನಾಶವಾಗುತ್ತದೆ. ಹಾಗಾಗಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಹಾಗೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿದರು.
ಕನ್ನಡ ಸೇನೆಯ ಜಿ ಮಹಾಂತಪ್ಪ. ಶಿವು. ರಾಘು ಅರಕೆರೆ . ಚಂದ್ರು. ಕುಮಾರ ಯರಳ್ಳಿ. ವೇಣುಗೋಪಾಲ್ ಇದ್ದರು.