ಜಿಲ್ಲೆಯಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಕನ್ನಡಸೇನೆ ಮನವಿ

| Published : Nov 16 2024, 12:37 AM IST

ಸಾರಾಂಶ

ನಗರದಲ್ಲಿ ಇಂಗ್ಲೀಷ್‌ ನಾಮಫಲಕಗಳು ಅಲ್ಲಲ್ಲಿ ಕಾಣಿಸುತ್ತಿವೆ. ಅವುಗಳನ್ನು ತಕ್ಷಣವೇ ಬದಲಾವಣೆ ಮಾಡಬೇಕು. ಮಂಡ್ಯದಲ್ಲಿ ಶೇ.40 ರಷ್ಟು ಮಾತ್ರ ಫಲಕ ಬದಲಾವಣೆ ಆಗಿರುವುದು ಕಂಡುಬರುತ್ತಿದೆ. ಅತಿಹೆಚ್ಚು ಕನ್ನಡ ಮಾತಾಡುವ ಮಂಡ್ಯ ಜಿಲ್ಲೆಯಲ್ಲಿ ಇಂತಹ ಸ್ಥಿತಿ ಆದರೆ ಹೇಗೆ ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಸಂದರ್ಭದಲ್ಲಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಂಗಡಿ- ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ಕನ್ನಡ ಸೇನೆ ಸಂಘಟನೆ ವತಿಯಿಂದ ನಗರಸಭೆ ಅಧ್ಯಕ್ಷ ನಾಗೇಶ್‌ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಕನ್ನಡ ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್.ಕುಮಾರ್ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಯ ಮುಖಂಡರು ನಗರಸಭೆ ಅಧ್ಯಕ್ಷ ನಾಗೇಶ್‌ ಅವರನ್ನು ಭೇಟಿ ಮಾಡಿ ಕನ್ನಡ ನಾಮಫಲಕ ಕಡ್ಡಾಯ ಕುರಿತು ಚರ್ಚೆ ನಡೆಸಿದರು.

ನಗರದಲ್ಲಿ ಇಂಗ್ಲೀಷ್‌ ನಾಮಫಲಕಗಳು ಅಲ್ಲಲ್ಲಿ ಕಾಣಿಸುತ್ತಿವೆ. ಅವುಗಳನ್ನು ತಕ್ಷಣವೇ ಬದಲಾವಣೆ ಮಾಡಬೇಕು. ಮಂಡ್ಯದಲ್ಲಿ ಶೇ.40 ರಷ್ಟು ಮಾತ್ರ ಫಲಕ ಬದಲಾವಣೆ ಆಗಿರುವುದು ಕಂಡುಬರುತ್ತಿದೆ. ಅತಿಹೆಚ್ಚು ಕನ್ನಡ ಮಾತಾಡುವ ಮಂಡ್ಯ ಜಿಲ್ಲೆಯಲ್ಲಿ ಇಂತಹ ಸ್ಥಿತಿ ಆದರೆ ಹೇಗೆ ಎಂದು ಪ್ರಶ್ನಿಸಿದರು.

ನಗರಸಭೆ ಆಡಳಿತ ಮಂಡಳಿಯು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಒಂದು ವೇಳೆ ನಾಮಫಲಕ ಬದಲಾವಣೆಯಾಗದಿದ್ದರೆ ಕನ್ನಡ ಸೇನೆ ಕರ್ನಾಟಕದ ವತಿಯಿಂದ ಪ್ರತಿಭಟನೆ ಮಾಡಲಾಗುವುದು. ಅದಕ್ಕೆ ಅವಕಾಶ ಮಾಡಿಕೊಡದಂತೆ ಕನ್ನಡ ನಾಮಫಲಕ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು.

ನಗರಸಭೆ ಅಧ್ಯಕ್ಷ ನಾಗೇಶ್ ಮಾತನಾಡಿ, ಈ ವಿಷಯವಾಗಿ ಅಂಗಡಿ ಮಾಲೀಕರ ಸಭೆ ಕರೆದು ಆದೇಶ ಮಾಡಲಾಗುವುದು, ಕನ್ನಡ ನಾಡಿನಲ್ಲಿ ಕನ್ನಡವನ್ನು ನಾವೇ ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ. ಹಾಗಾಗಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವ ಆದೇಶವನ್ನು ನೀಡುತ್ತೇವೆ. ಅದರ ಪಾಲನೆ ಮಾಡದಿದ್ದರೆ ವರ್ತಕರ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಭರವಸೆ ನೀಡಿದರು.

ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಪ್ರಥಮ ದರ್ಜೆ ಗುತ್ತಿಗೆದಾರದ ಎಚ್.ವಿ.ನಟರಾಜ್, ಕನ್ನಡ ಸೇನೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌, ಮುಖಂಡರಾದ ಹನುಮಂತಪ್ಪ, ಸಂಚಾಲಕರಾದ ಜಿ.ಮಹಾಂತಪ್ಪ, ಪ್ರಧಾನ ಕಾರ್ಯದರ್ಶಿ ಕಮ್ಮನಾಯಕನಹಳ್ಳಿ ಮಂಜು, ತಾಲೂಕು ಘಟಕದ ಅಧ್ಯಕ್ಷ ಸತೀಶ್ ಭಾಗವಹಿಸಿದ್ದರು.