ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಂತು ನೋಡ್ರಿ... ಮುಂದಿನ ನಿಲ್ದಾಣ ಉಗಿಬಂಡಿ ನಿಲ್ದಾಣ..! ಇದು ಬೆಂಗಳೂರಿನ ನಮ್‌ ಮೆಟ್ರೋ ಅಥವಾ ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್‌ನಲ್ಲಿನ ಜಿಂಗಲ್‌ ಪದ ಬಳಕೆ ಅಲ್ಲ. ಬದಲಿಗೆ ಕನ್ನಡದ ನಿರ್ವಾಹಕ ಪ್ರಕಾಶಯ್ಯ ರಾಜಶೇಖರಯ್ಯ ಶಿವಯೋಗಿಮಠ ತಮ್ಮ ಬಸ್‌ನಲ್ಲಿ ಹೇಳುವ ಮಾತಿಗಳಿವು.

ಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಂತು ನೋಡ್ರಿ... ಮುಂದಿನ ನಿಲ್ದಾಣ ಉಗಿಬಂಡಿ ನಿಲ್ದಾಣ..! ಇದು ಬೆಂಗಳೂರಿನ ನಮ್‌ ಮೆಟ್ರೋ ಅಥವಾ ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್‌ನಲ್ಲಿನ ಜಿಂಗಲ್‌ ಪದ ಬಳಕೆ ಅಲ್ಲ. ಬದಲಿಗೆ ಕನ್ನಡದ ನಿರ್ವಾಹಕ ಪ್ರಕಾಶಯ್ಯ ರಾಜಶೇಖರಯ್ಯ ಶಿವಯೋಗಿಮಠ ತಮ್ಮ ಬಸ್‌ನಲ್ಲಿ ಹೇಳುವ ಮಾತಿಗಳಿವು.

ಮೂಲತಃ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದವರಾದ ಪ್ರಕಾಶಯ್ಯ ಅವರು 2006ರಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಡ್ರೈವರ್‌ ಕಂ ನಿರ್ವಾಹಕರಾಗಿ ಕೆಲಸಕ್ಕೆ ಸೇರಿಕೊಂಡವರು. ಅಲ್ಲಿಂದ ಈವರೆಗೂ ಬಸ್‌ನಲ್ಲಿ ಅಪ್ಪಿತಪ್ಪಿಯೂ ಒಂದೇ ಒಂದು ಆಂಗ್ಲ ಪದ ಬಳಸಿಲ್ಲ. ಇವರು ಬಸ್‌ ಹತ್ತಿದರೆ ಸಾಕು ಬರೀ ಕನ್ನಡ ಪದಗಳೇ ಕಿವಿ ಪಟಲಕ್ಕೆ ಇಂಪು ನೀಡುತ್ತವೆ. ಮೊದಲಿಗೆ ಹುಬ್ಬಳ್ಳಿ ನಗರ ಸಾರಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು, ಸದ್ಯ ಧಾರವಾಡ ನಗರ ಸಾರಿಗೆಯಲ್ಲಿ ಕರ್ತವ್ಯದಲ್ಲಿದ್ದಾರೆ.

ಕನ್ನಡ ಪದಗಳು:

ಇವರ ಬಸ್‌ನಲ್ಲಿ ಸ್ಟಾಫ್‌, ಹೋಲ್ಡ್‌ಆನ್‌, ರೈಟ್‌ ರೈಟ್‌ ಎಂಬ ಪದಗಳೇ ಕೇಳಿಸಲ್ಲ. ಬದಲಿಗೆ ಸ್ಟಾಫ್‌ ಬದಲಿಗೆ ನಿಲುಗಡೆ ಅಥವಾ ನಿಲ್ಲಿಸಿ, ರೈಟ್‌ ರೈಟ್‌ ಬದಲು ಮುಂದಕ್ಕೆ ಸಾಗಿ ಅಥವಾ ಸಾಗಲಿ, ದಾರಿಚೀಟಿ (ಟಿಕೆಟ್‌) ತೆಗೆದುಕೊಳ್ಳಿ... ನೀವು ಇಳಿಯುವ ನಿಲ್ದಾಣ ಬಂದಿದೆ. ನಿಧಾನವಾಗಿ ಇಳಿದುಕೊಳ್ಳಿ.. ಎಂದೆಲ್ಲ ಬರೀ ಕನ್ನಡ ಕನ್ನಡವನ್ನೇ ಬಳಸುತ್ತಾರೆ.

ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಹಲವಾರು ನಿಲ್ದಾಣಗಳು ಆಂಗ್ಲ ಮಯವಾಗಿದ್ದರೂ ಅವುಗಳಿಗೆ ಇವರು ಕನ್ನಡ ಪದವನ್ನೇ ಬಳಸುತ್ತಾರೆ. ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ) ಕೆಸಿಡಿ (ಕರ್ನಾಟಕ ಕಾಲೇಜ್‌), ಕೆಎಲ್‌ಇ ಟೆಕ್‌ ಯುನಿವರ್ಸಿಟಿ (ತಾಂತ್ರಿಕ ವಿಶ್ವವಿದ್ಯಾಲಯ), ವಿದ್ಯಾಗಿರಿ ಪೊಲೀಸ್‌ ಠಾಣೆ (ಆರಕ್ಷಕ ಠಾಣೆ) ಹೀಗೆ ಆಂಗ್ಲ ಮಯ ಸ್ಟಾಫ್‌ಗಳನ್ನೆಲ್ಲ ಕನ್ನಡಮಯವನ್ನಾಗಿಸಿ ಬಳಸುತ್ತಾರೆ.

ಕೆಲವು ಸಲ ಇವರು ಹೇಳಿದ ನಿಲ್ದಾಣದ ಹೆಸರು ಕೇಳಿ ಪ್ರಯಾಣಿಕರು ಗೊತ್ತಾಗದೇ ಕಂಗಾಲಾಗಿರುವುದುಂಟು. ಆಗ ಇವರೇ ತಿಳಿಸಿ ಹೇಳುತ್ತಾರೆ.

ಹಾಗಂತ ಇವರು ಬೇರೆ ಭಾಷೆ ಬರಲ್ಲ ಅಂತೇನೂ ಅಲ್ಲ. ಬಿಎ ಪದವೀಧರರಾಗಿರುವ ಇವರಿಗೆ ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿ... ಹೀಗೆ ಮೂರು ಭಾಷೆಗಳು ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯ ಹೊಂದಿದವರು. ಆದರೆ, ಬಳಸುವುದು ಮಾತ್ರ ಕನ್ನಡವನ್ನೇ ಎಂಬುದು ಇವರ ಶಪಥ. ಬೇರೆ ರಾಜ್ಯಕ್ಕೆ ಹೋದಾಗ ಅಥವಾ ಅನಿವಾರ್ಯತೆ (ಎದುರಿಗಿದ್ದವರಿಗೆ ಕನ್ನಡವೇ ಬರಲ್ಲ) ಬಂದಾಗ ಮಾತ್ರ ಬೇರೆ ಭಾಷೆ ಬಳಸುತ್ತಾರೆ. ಆದರೆ, ಬಸ್‌ನಲ್ಲಿ ಮಾತ್ರ ಅಪ್ಪಿತಪ್ಪಿಯೂ ಕನ್ನಡ ಬಿಟ್ಟು ಬೇರೆ ಭಾಷೆ ಬಳಸಿಲ್ಲ, ಬಳಸುವುದೂ ಇಲ್ಲ ಎಂಬುದು ಇವರ ಶಪಥ.

ಇವರ ಕನ್ನಡದ ಮೇಲಿನ ಪ್ರೀತಿ, ಭಾಷಾಭಿಮಾನ ನೋಡಿ ಸಂಸ್ಥೆಯಲ್ಲಿ ಇವರನ್ನು ‘ಕನ್ನಡದ ಕಂದ’ ಎಂದು ಕರೆದರೆ, ಪ್ರಯಾಣಿಕರು ‘ಕನ್ನಡ ಕಂಡಕ್ಟರ್‌’ ಎಂದು ಕರೆಯುತ್ತಾರೆ. ಕನ್ನಡ ಬಳಕೆಗೆ ಸಂಸ್ಥೆಯಲ್ಲೂ ಪ್ರೋತ್ಸಾಹಿಸುತ್ತಾರೆ. ಇವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಇವರ ಕನ್ನಡ ಬಳಕೆ ನೋಡಿ ಕರ್ನಾಟಕ ವಿದ್ಯಾವರ್ಧಕ ಸಂಘ, ಕರವೇ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿರುವುದುಂಟು. ನವೆಂಬರ್‌ನಲ್ಲಷ್ಟೇ ಕನ್ನಡ ಕನ್ನಡ ಎನ್ನುತ್ತಾ ಉಳಿದ ತಿಂಗಳು ಎನ್ನಡ ಎನ್ನುವ ಕನ್ನಡಾಭಿಮಾನಿಗಳೇ ಹೆಚ್ಚಿರುವಾಗ, ಇವರು ಕನ್ನಡಕ್ಕೆ ತಮ್ಮದೇ ಕೊಡುಗೆ ನೀಡುತ್ತಿರುವುದಂತೂ ಸತ್ಯ.

----ಭಾಷೆ ಅಭಿಮಾನ

ನನಗೆ ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆಗಳು ಬರುತ್ತವೆ. ಆದರೆ, ನಮ್ಮ ಭಾಷೆ ಬಗ್ಗೆ ನಮಗೆ ಅಭಿಮಾನ, ಪ್ರೀತಿಯಿಲ್ಲದಿದ್ದರೆ ಹೇಗೆ? ನಮ್ಮ ರಾಜ್ಯದಲ್ಲಿ ಕನ್ನಡವನ್ನೇ ಬಳಸಿದಾಗ ಮಾತ್ರವೇ ಅದು ಬೆಳೆಯುತ್ತದೆ. ನನ್ನೊಂದಿಗೆ ಹೆಚ್ಚಿನ ಪ್ರಯಾಣಿಕರು ಅಚ್ಚ ಕನ್ನಡದಲ್ಲೇ ಸಂಭಾಷಣೆ ನಡೆಸುತ್ತಾರೆ. ಇದು ಖುಷಿ ಸಂಗತಿ ಅಲ್ಲವೇ.

-ಪ್ರಕಾಶಯ್ಯ ರಾಜಶೇಖರಯ್ಯ ಶಿವಯೋಗಿಮಠ, ಚಾಲಕ ಕಂ ನಿರ್ವಾಹಕ, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ.