ಸಾರಾಂಶ
ಕನ್ನಡಪ್ರಭವಾರ್ತೆ ತೀರ್ಥಹಳ್ಳಿ ಯಾವುದೇ ಭಾಷೆ ಕೇವಲ ಒಂದೆರಡು ದಿನಗಳ ಆಚರಣೆ ನಡೆಸಿ ಸಂಭ್ರಮಿಸಿದ ಮಾತ್ರಕ್ಕೆ ಬೆಳೆಯುವುದು ಅಸಾಧ್ಯ. ಆಳುವ ಸರ್ಕಾರಗಳು ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಪರಿವರ್ತಿಸುವ ದಿಟ್ಟತನದ ಇಚ್ಚಾಶಕ್ತಿಯನ್ನು ತೋರಬೇಕಾದ ಅಗತ್ಯವಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಶನಿವಾರ ಸಂಜೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ 2022-23ನೇ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿ ಅವರು ಮಾತನಾಡಿದರು.ಭಾಷೆ ಉಳಿವಿಗೆ ಎಲ್ಲ ರೀತಿಯ ಪ್ರಯತ್ನಗಳು ನಡೆಯಬೇಕಿದೆ. ಪ್ರಮುಖವಾಗಿ ಕನ್ನಡಿಗರ ಯೋಗದಾನದ ಅಗತ್ಯವಿದೆ. ಸಾಹಿತಿಗಳಿಂದ ಲಾಗಾಯ್ತಿನಿಂದಲೂ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಪರಭಾಷೆಯವರ ದಾಳಿಯಿಂದ ಇನ್ನೇನು ಭಾಷೆಯ ಅವಸಾನವಾಯ್ತೇನೋ ಎಂಬ ಹಂತದಲ್ಲಿ ಕರವೇ ಮುಂತಾದ ಕನ್ನಡ ಪರ ಸಂಘಟನೆಗಳಿಂದ ಕನ್ನಡಪರ ಹೋರಾಟಗಳು ನಡೆದಿರುವುದು ಸಮಾಧಾನಕರ ಸಂಗತಿಯಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮಾತನಾಡಿ, 2000 ವರ್ಷಗಳ ಇತಿಹಾಸವಿರುವ ಶ್ರೀಮಂತ ಭಾಷೆ ಎಂಬ ಹೆಮ್ಮೆ ನಮ್ಮದು. ಪರಭಾಷೆಯನ್ನು ಪ್ರೀತಿಸುವ ಕನ್ನಡಿಗರು ಭಾಷೆಯ ಮೇಲಿನ ಅಭಿಮಾನವನ್ನು ಎಂದೂ ಕಳೆದುಕೊಂಡಿಲ್ಲ. ಅಮೆರಿಕ ಮತ್ತು ಅರಬ್ ಮುಂತಾದ ರಾಷ್ಟ್ರಗಳಲ್ಲಿ ನೆಲೆಸಿರುವ ಹೊರನಾಡಿನ ಕನ್ನಡಿಗರೂ ಹೊರತಾಗಿಲ್ಲ. ಹಿರಿಯರು ಹಾಕಿಕೊಟ್ಟಿರುವ ಹಾದಿಯಲ್ಲಿ ಭಾಷಾಭಿಮಾನವನ್ನು ಮೆರೆಯೋಣ ಎಂದರು.ಪಪಂ ಅಧ್ಯಕ್ಷೆ ಗೀತಾ ರಮೇಶ್ ಮಾತನಾಡಿ, ಕನ್ನಡಕ್ಕೆ ಬಂದಿರುವ 8 ಜ್ಞಾನಪೀಠ ಪ್ರಶಸ್ತಿಗಳಲ್ಲಿ 2 ಪ್ರಶಸ್ತಿಗಳನ್ನು ಪಡೆದಿರುವ ಹೆಗ್ಗಳಿಕೆಯನ್ನು ಹೊಂದಿರುವ ನಮಗೆ ಕನ್ನಡತನವನ್ನು ಅನುಸರಿಸುವ ಹೊಣೆಗಾರಿಕೆಯೂ ಇದೆ ಎಂದರು.
ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಹೆಗ್ಡೆ ಪ್ರಾಥಮಿಕವಾಗಿ ಮಾತನಾಡಿ, ಸ್ವಾಭಿಮಾನಿ ಕರ್ನಾಟಕಕ್ಕಾಗಿ ಹೋರಾಟ ನಡೆಸುತ್ತಿರುವ ನಮ್ಮ ಸಂಘಟನೆಗೆ 25 ವರ್ಷಗಳು ಸಂದಿವೆ. ನೆಲಜಲದ ರಕ್ಷಣೆಗೆ ಆಪತ್ತು ಬಂದಾಗ ಬೀದಿಗಿಳಿದು ಹೋರಾಡಲು 1.65 ಲಕ್ಷ ಕಾರ್ಯಕರ್ತರನ್ನು ಹೊಂದಿದ್ದೇವೆ ಎಂದರು.ಕರವೇ ಅಧ್ಯಕ್ಷ ಯಡೂರು ಸುರೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ನೀರುಸರಬರಾಜು ಮತ್ತು ಒಳಚರಂಡಿ ಇಲಾಖೆ ಮಾಜಿ ನಿರ್ದೇಶಕ ಆರ್.ಮದನ್, ಜ್ಯೋತಿ ದಿಲೀಪ್, ವಿಜಯ ಬಿಳಿಗಿರಿ, ಹರ್ಷೇಂದ್ರ ಕುಮಾರ್, ಮಲ್ಲಕ್ಕಿ ರಾಘವೇಂದ್ರ, ಎಸ್.ಎನ್.ರವಿ, ವಿಕ್ರಂ ಶೆಟ್ಟಿ ಇದ್ದರು.
- - - ಟಾಪ್ ಕೋಟ್ ರಾಜಕೀಯದ ಅಸ್ತಿತ್ವಕ್ಕಾಗಿ ನೆರೆರಾಜ್ಯಗಳ ಎಂಇಎಸ್ ತರದ ಭಾಷಾಂಧರ ಅನುಕರಣೆ ನಮ್ಮ ಭಾಷೆಯನ್ನು ಬೆಳೆಸಬೇಕಾದ ಅಗತ್ಯವಿಲ್ಲಾ. ಬೇರೆ ಭಾಷೆಯನ್ನೂ ಗೌರವಿಸುವ ಮೂಲಕ ಕನ್ನಡಿಗರಾದ ನಾವುಗಳು ಕುವೆಂಪುರವರ ಭಾರತ ಜನನಿಯ ತನುಜಾತೆ ಎಂಬಂತೆ ಘರ್ಷಣೆಗೆ ಅವಕಾಶವಾಗದಂತೆ ಎಲ್ಲ ಭಾಷೆಗಳನ್ನೂ ಪ್ರೀತಿಸುವ ಮನೋಭಾವವನ್ನು ಹೊಂದೋಣ- ಆರಗ ಜ್ಞಾನೇಂದ್ರ, ಶಾಸಕ, ತೀರ್ಥಹಳ್ಳಿ ಕ್ಷೇತ್ರ
- - - -26ಟಿಟಿಎಚ್01:ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದ ರಾಜ್ಯೋತ್ಸವವದಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.