ಸಾರಾಂಶ
- ಹೊನ್ನಾಳಿಯಲ್ಲಿ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಶಾಸಕ ಶಾಂತನಗೌಡ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕನ್ನಡ ಭಾಷೆಯನ್ನು ಎಲ್ಲರೂ ಹೆಚ್ಚಾಗಿ ಬಳಸಬೇಕು. ಆ ಮೂಲಕ ಭಾಷೆಯನ್ನು ಬೆಳೆಸಬೇಕಾಗಿದೆ. ಮಾತೃಭಾಷೆಯಾದ ಕನ್ನಡ ಕನ್ನಡಿಗರ ಅನ್ನದ ಭಾಷೆಯಾಗಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.ಪಟ್ಟಣದ ಕನಕ ರಂಗಮಂದಿರದಲ್ಲಿ ನ.1ರಂದು ಶುಕ್ರವಾರ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಭಾಷೆ ಅತ್ಯಂತ ಸರಳ, ಸಂದರವಾಗಿದೆ. ಹೊರರಾಜ್ಯಗಳಿಂದ ಕರ್ನಾಟಕಕ್ಕೆ ಐಎಎಸ್, ಐಪಿಎಸ್ ಅಧಿಕಾರಿಗಳು ರಾಜ್ಯಕ್ಕೆ ಬಂದ ಕೇವಲ 3- 4 ತಿಂಗಳಲ್ಲಿಯೇ ಕನ್ನಡ ಭಾಷೆ ಮಾತನಾಡುವ, ಆದೇಶಗಳನ್ನು ಮಾಡುವುದನ್ನು ಕಲಿಯುತ್ತಾರೆ. ಎಂಥವರನ್ನೂ ಆಕರ್ಷಿಸುವ ಸಾಮರ್ಥ್ಯ ಕನ್ನಡ ಭಾಷೆಗಿದೆ ಎಂದರು.
ಸರ್ಕಾರ ವತಿಯಿಂದ ಸುಮಾರು 32 ವಿವಿಧ ಆಚರಣೆಗಳನ್ನು ಆಚರಿಸಲಾಗುತ್ತಿದೆ. ಕೊನೆ ಪಕ್ಷ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಈ ಆಚರಣೆಗಳಿಗೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಗೈರಾಗದೇ, ಕಡ್ಡಾಯವಾಗಿ ಹಾಜರಿದ್ದು ಅಭಿಮಾನ ಮೆರೆಯಬೇಕು. ಈ ಬಗ್ಗೆ ತಹಸೀಲ್ದಾರ್ ಕಟ್ಟುನಿಟ್ಟಾಗಿ ಹಾಜರಾತಿ ಪಡೆಯಬೇಕು. ಅಧಿಕಾರಿಗಳು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ನಿಶ್ಚಿತ ಎಂದು ಘೋಷಿಸಿದರು.ಉಪವಿಭಾಗಾಧಿಕಾರಿ ಅಭಿಷೇಕ್ ಮಾತನಾಡಿ, ಈ ಬಾರಿ ಬೆಳಕಿನ ಹಬ್ಬ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ ಎರಡು ಅಚರಣೆಗಳ ಅವಕಾಶ ಒದಗಿದೆ. ದೊಡ್ಡವರು ಮನೆಗಳಲ್ಲಿಯೇ ಮೊದಲು ಮಕ್ಕಳಿಗೆ ಮಾತೃಭಾಷೆಯಲ್ಲಿ ಮಾತನಾಡಿಸುವ ರೂಢಿ ಪಾಲಿಸಬೇಕು. ಇದರಿಂದ ಪೀಳಿಗೆಯಿಂದ ಪೀಳಿಗೆಗೆ ಕನ್ನಡ ಭಾಷೆ ತನ್ನಿಂದ ತಾನೇ ಬೆಳೆಯುತ್ತದೆ ಎಂದರು.
ಕನ್ನಡ ಶಿಕ್ಷಕ ಬಸವರಾಜಪ್ಪ ಎಂ. ಅವರು ಕನ್ನಡ ನಾಡು-ನುಡಿ ಕುರಿತು ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಮುರುಗೆಪ್ಪ ಗೌಡ, ಕನ್ನಡಪರ ಸಂಘಟನೆಗಳ ಶ್ರೀನಿವಾಸ್, ವಿನಯ್ ವಗ್ಗರ್ ಮುಂತಾದವರು ಮಾತನಾಡಿದರು.ರಾಜ್ಯೋತ್ಸವ ಅಂಗವಾಗಿ ಆರಂಭದಲ್ಲಿ ಉಪವಿಭಾಗಾಧಿಕಾರಿ ಅಭಿಷೇಕ್ ರಾಷ್ಠ್ರಧ್ವಜಾರೋಹಣ ನೇರವೇರಿಸಿದರು. ನಂತರ ಜಯಚಾಮರಾಜೇಂದ್ರ ವೃತ್ತದಲ್ಲಿ ಯುವಶಕ್ತಿ ಒಕ್ಕೂಟದ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಗೌಡ ಕನ್ನಡ ಧ್ವಜಾರೋಹಣ ನೆರವೇರಿಸಿ, ಶುಭಕೋರಿದರು.
ಈ ಬಾರಿ ಭುವನೇಶ್ವರಿ ದೇವಿ ಭಾವಚಿತ್ರವನ್ನು ಆನೆ ಮೇಲಿರಿಸಿ, ಕನ್ನಡ ರಥದೊಂದಿಗೆ ವಿವಿಧ ವಾದ್ಯಮೇಳಗಳೊಂದಿಗೆ ಪಟ್ಟಣದಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಅನಂತರ ಪ್ರತಿಭಾವಂತರಿಗೆ ಸನ್ಮಾನ ಜರುಗಿತು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪಟ್ಟರಾಜಗೌಡ, ತಾಪಂ ಇಒ ಪ್ರಕಾಶ್, ಬಿಇಒ ನಿಂಗಪ್ಪ ಪುರಸಭೆ ಅಧ್ಯಕ್ಷ ಮೈಲಪ್ಪ, ಉಪಾಧ್ಯಕ್ಷೆ ಸಾವಿತ್ರಮ್ಮವಿಜೇಂದ್ರಪ್ಪ, ಮುಖ್ಯಾಧಿಕಾರಿ ಟಿ.ಲೀಲಾವತಿ, ಪುರಸಭೆ ಸದಸ್ಯರು ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಶಾಲಾ ಮಕ್ಕಳು ಹಾಗೂ ಮುಖಂಡರು ಭಾಗವಹಿಸಿದ್ದರು.
- - - -1ಎಚ್.ಎಲ್.ಐ1:ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.