ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು

| Published : Jan 04 2025, 12:30 AM IST

ಸಾರಾಂಶ

ಕರ್ನಾಟಕದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡಕ್ಕೆ, ಕನ್ನಡಿಗರಿಗೆ ಮೊದಲ ಆದ್ಯತೆ ದೊರೆಯಬೇಕು. ಮಾತೃಭಾಷೆ ಮನೆಮಾತಾಗಿ ಎಲ್ಲರೂ ನಿತ್ಯ ಕನ್ನಡವನ್ನು ಬಳಿಸಿ ಬೆಳೆಸುವ ಸಂಕಲ್ಪ ಮಾಡಬೇಕು. ಎಲ್ಲೆಡೆ ಕನ್ನಡದ ಕಹಳೆ ಮೊಳಗಬೇಕು ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಕರ್ನಾಟಕದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡಕ್ಕೆ, ಕನ್ನಡಿಗರಿಗೆ ಮೊದಲ ಆದ್ಯತೆ ದೊರೆಯಬೇಕು. ಮಾತೃಭಾಷೆ ಮನೆಮಾತಾಗಿ ಎಲ್ಲರೂ ನಿತ್ಯ ಕನ್ನಡವನ್ನು ಬಳಿಸಿ ಬೆಳೆಸುವ ಸಂಕಲ್ಪ ಮಾಡಬೇಕು. ಎಲ್ಲೆಡೆ ಕನ್ನಡದ ಕಹಳೆ ಮೊಳಗಬೇಕು ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ನಗರದ ದಿಬ್ಬೂರಿನಲ್ಲಿ ಶುಕ್ರವಾರ ಕನ್ನಡಿಗರ ಯುವ ವೇದಿಕೆ ಹಮ್ಮಿಕೊಂಡಿರುವ ಮೂರು ದಿನಗಳ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕನ್ನಡ ರಾಜ್ಯೋತವ ಆಚರಣೆಯನ್ನು ನವೆಂಬರ್ ತಿಂಗಳಿಗೇ ಸೀಮಿತ ಮಾಡಬಾರದು. ವರ್ಷದ ಎಲ್ಲಾ ದಿನವೂ ಕನ್ನಡ ಹಬ್ಬ ಆಚರಿಸಿ, ರಾಜ್ಯೋತ್ಸವವನ್ನು ನಿತ್ಯೋತ್ಸವವಾಗಿ ಸಂಭ್ರಮಿಸಬೇಕು ಎಂದು ಹೇಳಿದರು.

ಕನ್ನಡಗರ ಹೃದಯದಲ್ಲಿ ಕನ್ನಡ ರಾರಾಜಿಸಬೇಕು. ತನು, ಮನ, ಅಭಿಮಾನ ಕನ್ನಡವಾಗಬೇಕು. ನಾವು ಕನ್ನಡಿಗರೆಂಬ ಅಭಿಮಾನದಿಂದ ಹೆಮ್ಮೆ ಪಡಬೇಕು ಎಂದು ಹೇಳಿದರು.

ಹಿರಿಯ ರಂಗಭೂಮಿ ಕಲಾವಿದ ಡಾ.ಲಕ್ಷ್ಮಣದಾಸ್ ಮಾತನಾಡಿ, ಕನ್ನಡ ಅಭಿವೃದ್ಧಿ, ಬೆಳವಣಿಗೆ ಕನ್ನಡಿಗರ ನಿತ್ಯ ಮಂತ್ರವಾಗಬೇಕು. ಕನ್ನಡ ಶಾಲೆಗಳನ್ನು ಮುಚ್ಚದಂತೆ ಕಾಪಾಡಿ ಅಭಿವೃದ್ಧಿಪಡಿಸಬೇಕು, ಕನ್ನಡಿಗರಿಗೆ ಆದ್ಯತೆಯಾಗಿ ಉದ್ಯೋಗ ನೀಡಿ ಕನ್ನಡವನ್ನು ಅನ್ನದ ಭಾಷೆಯಾಗಿ ಬೆಳೆಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು, ನಾಮ ಫಲಕಗಳಲ್ಲಿ ಶೇಕಡ 60ರ ಪ್ರಮಾಣದಲ್ಲಿ ಕನ್ನಡ ಇರಬೇಕು ಎಂದು ಸರ್ಕಾರ ಆದೇಶ ಮಾಡಿದ್ದರೂ ತುಮಕೂರಿನಲ್ಲಿ ಅದರ ಅನುಷ್ಠಾನ ಆಗುತ್ತಿಲ್ಲ. ಆದೇಶ ಅನುಸರಿಸದವರಿಗೆ ದಂಡ ವಿಧಿಸಲು ಆವಕಾಶವಿದ್ದರೂ ನಗರಪಾಲಿಕೆ ಅಧಿಕಾರಿಗಳು ಅಂತಹ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸಚಿವರು, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು, ತಪ್ಪಿದಲ್ಲಿ ಕನ್ನಡ ಪರ ಸಂಘಟನೆಗಳು ಇದರ ವಿರುದ್ಧ ಆಂದೋಲನ ರೂಪಿಸಬೇಕಾಗುತ್ತದೆ ಎಂದರು.

ಕಾರ್ಖಾನೆ, ಉದ್ದಿಮೆಗಳಲ್ಲಿ ಶೇಕಡ 83ರಷ್ಟು ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು ಎಂಬ ನಿಯಮವಿದ್ದರೂ ಜಿಲ್ಲೆಯಲ್ಲಿರುವ ಯಾವ ಕಾರ್ಖಾನೆಗಳಲ್ಲೂ ಇದರ ಪಾಲನೆ ಆಗುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು, ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಗಳನ್ನು ಮಂಗಳ ವಾದ್ಯ, ಪೂರ್ಣ ಕುಂಭಗಳೊಂದಿಗೆ ಸ್ವಾಗತಿಸಿ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಯಿತು. ದಿಬ್ಬೂರು ಕನ್ನಡಿಗರ ಯುವ ವೇದಿಕೆಯ ಗಿರೀಶ್, ಇಂದ್ರಕುಮಾರ್, ಶ್ರೀನಿವಾಸ್, ಪರಮೇಶ್, ಭೈರೇಶ್ ಹಾಗೂ ಸ್ಥಳೀಯ ಮುಖಂಡರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಮೂರು ದಿನಗಳ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ವಿವಿಧ ಚುನಾಯಿತ ಪ್ರತಿನಿಧಿಗಳು, ಗಣ್ಯರು, ಚಲನಚಿತ್ರ, ಕಿರುತೆರೆ ನಟನಟಿಯರು ಭಾಗವಹಿಸಿಲಿದ್ದಾರೆ.