ಮನೆಯಂಗಳದಲ್ಲಿ ರಿಂಗಣಿಸಿದ ಕನ್ನಡ ಕಂಪು..

| Published : Nov 12 2023, 01:00 AM IST

ಸಾರಾಂಶ

ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಕನ್ನಡ ನಾಡು -ನುಡಿ- ಸಂಸ್ಕೃತಿ ಕುರಿತಾಗಿ ‘ಮನೆಯಂಗಣದಲ್ಲಿ ಕನ್ನಡ ರಿಂಗಣ’ ಹರಟೆ ಎಂಬ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಲ್ಲಿ ವೇದಿಕೆ ಇರಲಿಲ್ಲ., ಸಭಿಕರಿಗೆಂದು ಎದುರುಗಡೆ ಆಸನಗಳಿರಲಿಲ್ಲ., ಅತಿಥಿಗಳೆಂದು ಕರೆದವರೂ ಇನ್ನೆಲ್ಲೋ ಇದ್ದರು., ಬಂದಿದ್ದವರೆಲ್ಲರೂ ಸುತ್ತಲೂ ಕುಳಿತಿದ್ದರು., ಎಲ್ಲರೂ ಅತಿಥಿಗಳಾಗಿದ್ದರು., ಪರಸ್ಪರ ಒಬ್ಬರಿಗೊಬ್ಬರು ಮುಖ ಮುಖ ನೋಡಿಕೊಂಡು ಮಾತನಾಡುತ್ತಿದ್ದರು., ಮನಸು ಬಿಚ್ಚಿ ಹರಟುತ್ತಿದ್ದರು. ಹಾಡಿದರು., ಮನದಾಳದ ಮಾತುಗಳನ್ನು ಬಿಚ್ಚಿಟ್ಟರು., ಹಾಸ್ಯ ಚಟಾಕಿ ಹಾರಿಸಿದರು., ಒಬ್ಬರಿಗೊಬ್ಬರು ಕಾಲೆಳೆಯುತ್ತಾ ಚೇಷ್ಟೆಯೂ ಮಾಡಿದರು., ಆದರೂ ಎಲ್ಲರೂ ಒಂದೇ ಮನೆಯವರಂತೆ ಬೆರೆತು ಸಂಭ್ರಮಿಸಿದರು...ಹೌದು, ಇಂಥದ್ದೊಂದು ಅಪರೂಪದ ಚಿತ್ರಣ ಕಂಡುಬಂದಿದ್ದು ಕುಶಾಲನಗರದ ಸೋಮೇಶ್ವರ ಬಡಾವಣೆಯ ಮನೆಯೊಂದರಲ್ಲಿ., ಕನ್ನಡ ಸ್ನೇಹ ಸಿರಿ ಬಳಗದ ವತಿಯಿಂದ ಅಲ್ಲಿನ ನಿವಾಸಿ, ಪಿ.ಎಸ್. ಜಾನ್ ಅವರ ಮನೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಕನ್ನಡ ನಾಡು -ನುಡಿ- ಸಂಸ್ಕೃತಿ ಕುರಿತಾಗಿ ‘ಮನೆಯಂಗಣದಲ್ಲಿ ಕನ್ನಡ ರಿಂಗಣ’ ಹರಟೆ ಎಂಬ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕನ್ನಡ ಮನಸುಗಳು ಒಂದಾಗಿ ಬೆರೆತು ಸಂಭ್ರಮಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಕನ್ನಡಾಭಿಮಾನಿಗಳು ತಮಗಿಷ್ಟವಾದ ಕನ್ನಡ ಹಾಡುಗಳನ್ನು ಹಾಡಿದರೆ, ಕೆಲವರು ಹಾಸ್ಯ ಚಟಾಕಿಗಳನ್ನು ಹಾರಿಸಿದರು. ಇನ್ನೂ ಕೆಲವರು ಮನದಾಳದ ಮಾತುಗಳನ್ನು ಹೇಳಿಕೊಂಡರೆ, ಇನ್ನೂ ಕೆಲವರು ಕವನ, ಚುಟುಕಗಳನ್ನು ಹೇಳಿದರು. ಪರಸ್ಪರ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು. ಕನ್ನಡ ಆಸ್ತಿಯಾಗಬೇಕು: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ಮಾತನಾಡಿ, ಇದೊಂದು ಅಪರೂಪದ ಕ್ಷಣವಾಗಿದೆ. ಪ್ರೀತಿಯ ಕರೆಗೆ ಅಭಿಮಾನವಿಟ್ಟು ಕನ್ನಡದ ಮೂಲಕ ಸಂಬಂಧ ಕಲ್ಪಿಸಿ ಪರಸ್ಪರ ಒಂದುಗೂಡುವಿಕೆಗೆ ಕಾರಣವಾಗಿದೆ. ಹರಟೆಯ ಮೂಲಕ ಅಭಿಪ್ರಾಯಗಳನ್ನು ಸಮಾಜಕ್ಕೆ ಹೇಳಿದಾಗ ಮುಂದಿನ ಪೀಳಿಗೆಗೆ ತಲಪುವದಲ್ಲದೆ, ಕನ್ನಡದ ಬಗ್ಗೆ ಮನಸಿನಲ್ಲಿ ಜಾಗೃತಿ ಮೂಡಿಸಿ, ಕನ್ನಡವನ್ನು ಆಸ್ತಿಯನ್ನಾಗಿ ಮಾಡಿಕೊಳ್ಳಲು ಅವಕಾಶವಾಗಲಿದೆ ಎಂದು ಹೇಳಿದರು. ನಾವು ಯಾವದೇ ಭಾಷೆಯ ವಿರೋಧಿಗಳಾಗಬಾರದು, ಬಹು ಭಾಷಿಕರು ಇರುವ ಕೊಡಗು ಜಿಲ್ಲೆಯಲ್ಲಿ ಬೇರೆ ಭಾಷೆಗಳ ನಡುವೆ ಕನ್ನಡ ಬಾಷೆಯನ್ನು ಬೆಳೆಸಬೆಕು. ಎಲ್ಲರೂ ಒಂದುಗೂಡಿದರೆ ಇದು ಸಾಧ್ಯವಿದೆ. ಸಾಹಿತಿಗಳು ಬರೆದಿರುವ ಪುಸ್ತಕಗಳನ್ನು ಓದುವದರೊಂದಿಗೆ ಕನ್ನಡ ಕೃಷಿ ಮಾಡುವವರನ್ನು ಪ್ರೊತ್ಸಾಹಿಸಬೇಕೆಂದು ಕರೆ ನೀಡಿದರು.

ಛಲವಿದ್ದರೆ ಸಾಧ್ಯ: ಅತಿಥಿಯಾಗಿದ್ದ ಹಿರಿಯ ಸಾಹಿತಿ, ಕಣಿವೆಯ ಭಾರಧ್ವಾಜ ಆನಂದತೀರ್ಥ ಅವರು ಮಾತನಾಡಿ, ಕನ್ನಡ ಮನಸುಗಳನ್ನು ಒಂದುಗೂಡಿಸುವಂತಹ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವದು ಶ್ಲಾಘನೀಯವಾದುದು. ಇಲ್ಲಿ ಎಲ್ಲರೂ ಎಲ್ಲವನ್ನೂ ಮರೆತು ಒಟ್ಟುಗೂಡಿದ್ದಾರೆ. ಯಾವದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಛಲವಿದ್ದರೆ ಎಲ್ಲವೂ ಸಾಧ್ಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕನ್ನಡ ಸ್ನೇಹ ಸಿರಿ ಬಳಗದ ಅಧ್ಯಕ್ಷ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಕನ್ನಡ ಮನಸುಗಳನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಹಾಗೂ ಕನ್ನಡದ ಕೆಲಸಗಳಿಗೆ ಪ್ರೊತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಸುವರ್ಣ ಸಂಭ್ರಮ ಅಂಗವಾಗಿ ಒಟ್ಟು ಐವತ್ತು ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಹೊಂದಲಾಗಿದ್ದು, ಈಗಾಗಲೇ ಐದು ಕಾರ್ಯಕ್ರಮಗಳನ್ನು ಪೂರೈಸಲಾಗಿದೆ. ಎಲ್ಲ ಕನ್ನಡ ಮನಸುಗಳ ಸಹಕಾರದಿಂದ ಇದು ಸಾಧ್ಯವಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್, ಸೊಮವಾರಪೇಟೆ ತಾಲೂಕು ಮಾಜಿ ಅಧ್ಯಕ್ಷ ಜವರಪ್ಪ, ಮಡಿಕೇರಿ ನಗರ ಚೇಂಬರ್ ಅಧ್ಯಕ್ಷ ಎಂ. ಧನಂಜಯ, ವೆಂಕಟನಾಯಕ್, ಪತ್ರಕರ್ತ ಕುಶಾಲನಗರದ ಪ್ರಭುದೇವ್, ಸಿದ್ದಾಪುರದ ನಾ ಕನ್ನಡಿಗ, ತಳೂರು ಉಷಾರಾಣಿ ಮಾತನಾಡಿದರು. ಪೆರುಬಾಯಿ ತುಳಸಿ, ಬಸವರಾಜಪ್ಪ, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ನೊನಿಟಾ ಜಾನ್, ಮೀರಾ ಜಾನ್ ಸೇರಿದಂತೆ ಇತರರು ಹಾಡು ಹಾಡಿದರು. ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್ ಕಾರ್ಯಕ್ರಮ ನಡೆಸಿಕೊಟ್ಟರೆ, ಪ್ರಾಂಶುಪಾಲ ಪಿ.ಎಸ್. ಜಾನ್ ವಂದಿಸಿದರು.