ಅಗ್ನಿ ಶಾಮಕ ದಳದಿಂದ ಕನ್ನಡ ನುಡಿ ಪ್ರಚಾರ...!

| Published : Dec 20 2024, 12:45 AM IST

ಸಾರಾಂಶ

ನಾಡಿಗೆ ಮಂಡ್ಯ ಜಿಲ್ಲೆಯ ಕೊಡುಗೆಗಳು, ಕನ್ನಡಪರ ಘೋಷ ವಾಕ್ಯಗಳ ಮೂಲಕ ನವೀನ ರೀತಿಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಜಗತ್ತಿನಾದ್ಯಂತ ಇರುವ ಕನ್ನಡ ಅಭಿಮಾನಿಗಳಿಗೆ ತಲುಪಿ ಅಕ್ಷರ ಜಾತ್ರೆಗೆ ಪ್ರತಿಯೊಬ್ಬರಿಗೂ ಬರುವಂತಾಗಬೇಕು ಎಂದು ಅಗ್ನಿಶಾಮಕ ಇಲಾಖೆ ಪರ ಆತ್ಮೀಯ ಸ್ವಾಗತ ಕೋರಿದ್ದಾರೆ.

ಎಚ್.ಕೆ.ಅಶ್ವಥ್, ಹಳುವಾಡಿ

ಕನ್ನಡಪ್ರಭ ವಾರ್ತೆ ಮಂಡ್ಯ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಅಗ್ನಿ ಶಾಮಕದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮ್ಮೇಳನದ ಯಶಸ್ಸಿಗಾಗಿ, ಮಂಡ್ಯ ಜಿಲ್ಲೆ ಮಹತ್ವ, ಕನ್ನಡಭಾಷೆ ಬಗ್ಗೆ ವಿಶಿಷ್ಟ ರೀತಿಯಲ್ಲಿ ಪ್ರಚಾರ ಕೈಗೊಂಡು ಗಮನ ಸೆಳೆದಿದ್ದಾರೆ.

ನಾಡಿಗೆ ಮಂಡ್ಯ ಜಿಲ್ಲೆಯ ಕೊಡುಗೆಗಳು, ಕನ್ನಡಪರ ಘೋಷ ವಾಕ್ಯಗಳ ಮೂಲಕ ನವೀನ ರೀತಿಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಜಗತ್ತಿನಾದ್ಯಂತ ಇರುವ ಕನ್ನಡ ಅಭಿಮಾನಿಗಳಿಗೆ ತಲುಪಿ ಅಕ್ಷರ ಜಾತ್ರೆಗೆ ಪ್ರತಿಯೊಬ್ಬರಿಗೂ ಬರುವಂತಾಗಬೇಕು ಎಂದು ಅಗ್ನಿಶಾಮಕ ಇಲಾಖೆ ಪರ ಆತ್ಮೀಯ ಸ್ವಾಗತ ಕೋರಿದ್ದಾರೆ.

ಮಂಡ್ಯ ಸ್ವರ್ಣಸಂದ್ರ ಬಳಿಯ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಗ್ನಿಶಾಮಕ ಠಾಣೆ ಅಧಿಕಾರಿಗಳು, ಸಿಬ್ಬಂದಿ ಜಿಲ್ಲೆ, ತಾಲೂಕು, ನಗರ ವ್ಯಾಪ್ತಿ ನಿತ್ಯ ಎಲ್ಲಿ, ಯಾವ ಪ್ರದೇಶದಲ್ಲಾದರೂ ಯಾವುದೇ ಅಗ್ನಿ ಅವಘಡಗಳು ಸಂಭವಿಸಿದರೆ ತಕ್ಷಣ ಆಗಮಿಸಿ ಬೆಂಕಿ ಅನಾಹುತ ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದು, ಕನ್ನಡ ಭಾಷೆ ಉಳಿವಿನ ಜೊತೆಗೆ ಸಾಹಿತ್ಯ ಸಮ್ಮೇಳನ ಯಶಸ್ಸಿಗಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯ ಬಿಟ್ಟಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಕನ್ನಡ ಬಾವುಟ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿರುವ ವಿಡಿಯೋನ ಒಂದೊಂದು ಘೋಷವಾಕ್ಯಗಳು ಕನ್ನಡಭಾಷೆ ಉಳಿವು, ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವಿಕೆಹಾಗೂ ಮಂಡ್ಯ ಜಿಲ್ಲೆಯ ಮಹತ್ವ ಸಾರುತ್ತವೆ.

ಜಿಲ್ಲೆ, ರಾಜ್ಯದ ಯಾವ ಕನ್ನಡಭಿಮಾನಿಯಗಲಿ, ಸಾಹಿತಿಗಳಾಗಲಿ ಈ ವಿಡಿಯೋ ನೋಡಿದರೆ ಇವರು ಕನ್ನಡ ಭಾಷೆ ಮೇಲೆ ಇಟ್ಟಿರುವ ಅಭಿಮಾನ ಎಷ್ಟು ಎಂಬುದನ್ನು ತೋರಿಸುತ್ತದೆ. ಮಂಡ್ಯ ಜಿಲ್ಲೆಗೆ ಮೈಸೂರು ರಾಜ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ನೀಡುರುವ ಕೊಡುಗೆ ಸ್ಮರಿಸಿದ್ದಾರೆ.

ಸಕ್ಕರೆ ನಾಡು ಎಂದು ಹೆಸರಾಗಿರುವ ಮಂಡ್ಯದಲ್ಲಿ ಆದಿರಂಗ, ಮಧ್ಯರಂಗ ದೇಗುಲಗಳನ್ನು ಹೊಂದಿದೆ. ಪುಣ್ಯಕೋಟಿ ಬರೆದಿರುವ ನಾಡು ಮಂಡ್ಯ, ಕೆಚ್ಚದೆಯ ಕನ್ನಡಿಗರ ನಾಡು, ನನ್ನ ಮೊದಲ ಕರ್ಮ ಭೂಮಿ, ಸಂಪ್ರದಾಯದ ತವರೂರು, ಮೊದಲ ಜಲವಿದ್ಯುತ್ ಸ್ಥಾವರ ಹೊಂದಿರುವ ಜಿಲ್ಲೆ ಹೀಗೆ ಘೋಷ ವಾಕ್ಯಗಳನ್ನು ಕೂಗಿ ಮಹತ್ವ ಜಿಲ್ಲೆಯ ಮಹತ್ವವನ್ನು ತಿಳಿಸಿಕೊಡುವ ಕೆಲಸ ಮಾಡಿದ್ದಾರೆ.

ಮಂಡ್ಯ ಕಬ್ಬಿನ ಕಣಿವೆ ಜಿಲ್ಲೆ, ಶ್ರೀರಂಗಪಟ್ಟಣ ರಂಗನತಿಟ್ಟು ಪಕ್ಷಿಧಾಮ, ಮಳವಳ್ಳಿ ಗಗನಚುಕ್ಕಿ ಜಲಪಾತ ಸೇರಿದಂತೆ ಹಲವು ಪ್ರೇಕ್ಷಣಿಯ ಸ್ಥಳಗಳಿದ್ದು, ಮಂಡ್ಯ ಎಂದರೆ ಇಂಡಿಯಾದಲ್ಲೂ ಹೆಸರಾಗಿದೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ಮಾಂಡವ್ಯ ಮಹರ್ಷಿಗಳು ತಾಣ, ಚಂದನವನಕ್ಕೆ ಹಲವು ಕಲಾವಿದರನ್ನು ಕೊಟ್ಟ ಜಿಲ್ಲೆ, ಮೇಲುಕೋಟೆ, ಚುಂಚನಗಿರಿ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರ ಹೊಂದಿದ್ದು, ಅಪ್ಪಟ ಕನ್ನಡಿಗರ ಆಸ್ತಿಯಾಗಿರುವ ಮಂಡ್ಯ ಸಾಹಿತ್ಯ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹನೀಯರು ಹುಟ್ಟಿ ಇಡೀ ದೇಶಾದ್ಯಂತ ಸಾಕಷ್ಟು ಹೆಸರು ಮಾಡಿದ್ದಾರೆ.

ಕೊನೆಯದಾಗಿ ರಾಷ್ಟ್ರಕವಿ ಕುವೆಂಪು ಅವರನ್ನು ಸ್ಮರಿಸಿ ಎಲ್ಲಾದರೂ ಇರು ಎಂತಾದರೂ ಇರು ಡಿಸೆಂಬರ್ 20 ರಂದು ಮಂಡ್ಯದಲ್ಲಿ ಇರು ಎಂಬ ಘೋಷಣೆಯೊಂದಿಗೆ ಪ್ರತಿಯೊಬ್ಬರು 87ನೇ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.ತಾಯಿ ಕಾವೇರಿಯ ಕೃಪೆಯಿಂದ ಹಸಿರು ಪೈರುಗಳನ್ನೇ ಮುಕುಟವಾಗಿಸಿಕೊಂಡಿರುವ ಮಂಡ್ಯ ಜಿಲ್ಲೆ ಕನ್ನಡ ನಾಡು ನುಡಿಗೆ ನೀಡಿರುವ ಕೊಡುಗೆ ಅಪಾರ. ಈ ನಾಡಿನಲ್ಲಿ ಅತಿ ಹೆಚ್ಚು ಕನ್ನಡ ಭಾಷೆ ಮಾತನಾಡುವ ಜನರಿರುವ ಹೆಮ್ಮೆ ನಮ್ಮ ಮಂಡ್ಯದ ಮಣ್ಣಿನಲ್ಲಿ ಈ ಬಾರಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು.

- ಬಿ.ಎಂ.ರಾಘವೇಂದ್ರ, ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿಗಳು