ರಾಜಧಾನಿಯಲ್ಲಿ ಕನ್ನಡ ಉಳಿವು ಸವಾಲಾಗಿದೆ: ಪ್ರೊ.ಎಂ.ಜಿ. ಮಂಜುನಾಥ್ ಕಳವಳ

| Published : May 06 2025, 12:19 AM IST

ರಾಜಧಾನಿಯಲ್ಲಿ ಕನ್ನಡ ಉಳಿವು ಸವಾಲಾಗಿದೆ: ಪ್ರೊ.ಎಂ.ಜಿ. ಮಂಜುನಾಥ್ ಕಳವಳ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ, ಕನ್ನಡಿಗ, ಕರ್ನಾಟಕ ವಿಷಯಕ್ಕೆ ಸಂಬಂಧಿಸಿದಂತೆ ಪೂರಕ ಕಾರ್ಯಕ್ರಮ ಹಾಗೂ ಹೋರಾಟಗಳನ್ನು ರೂಪಿಸಿಕೊಂಡು ಬಂದು ಕನ್ನಡಿಗರಲ್ಲಿ ಕನ್ನಡದ ಪ್ರಜ್ಞೆಯನ್ನು ಸದಾ ಜೀವಂತವಾಗಿರುವ ಕಾರ್ಯಕ್ರಮವನ್ನು ಪರಿಷತ್ತು ಶತಮಾನದಿಂದ ಮಾಡುತ್ತಾ ಬಂದಿದೆ. ಪುಸ್ತಕ ಪ್ರಕಟಣೆ, ಸಮ್ಮೇಳನ, ಕಾರ್ಯಾಗಾರ, ವಿಚಾರ ಸಂಕಿರಣ ಮುಂತಾದ ಕಾರ್ಯ ಚಟುವಟಿಕೆಗಳು ಪರಿಷತ್ತಿನ ಜೀವಾಳವಾಗಿವೆ .

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕದಲ್ಲಿ ಮಾತೃ ಭಾಷೆಗೆ ಪ್ರಾಧಾನ್ಯತೆ ಇದ್ದರೂ, ರಾಜಧಾನಿಯಲ್ಲಿ ಕನ್ನಡ ಉಳಿವು ಸವಾಲಾಗಿರುವುದರಿಂದ ಸಾಹಿತ್ಯ ಪರಿಷತ್ತನ್ನು ಬಲಗೊಳಿಸಬೇಕು ಎಂದು ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಜಿ. ಮಂಜುನಾಥ್‌ ಹೇಳಿದರು.

ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾರಣ ಅನ್ಯಭಾಷಿಗರ ಆಕ್ರಮಣದಿಂದ ರಾಜಧಾನಿಯಲ್ಲಿ ಕನ್ನಡ ಭಾಷೆಗೆ ತೊಡಕಾಗಿದೆ. ಮುಂದಿನ ಅನೇಕ ವರ್ಷಗಳವರೆಗೆ ಕನ್ನಡವನ್ನು ಜೀವಂತವಾಗಿರಿಸಲು ಕನ್ನಡ ನಾಡು, ನುಡಿ, ಸಂಸ್ಕೃತಿ ಭಾಷೆಯ ಸಂವರ್ಧನೆಗೆ ಭಾಷೆಯ ಆಸ್ಮಿತೆಯಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಬಲಗೊಳಿಸೋಣ. ಪರಿಷತ್ತು ನಮ್ಮೆಲ್ಲರಿಗೆ ಏಕತೆ ಹಾಗೂ ಅಸ್ಮಿತೆಯ ಸಂಕೇತವಾಗಿದೆ ಎಂದರು.

ಸಾಹಿತ್ಯ ಪರಿಷತ್ತು ಸ್ಥಾಪನೆಯಾದಾಗಿನಿಂದ ಈವರೆಗೆ ಅನೇಕ ಮಹನೀಯರು, ಹೋರಾಟಗಾರರು ಪರಿಷತ್ತಿನ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಪರಿಷತ್ತು ಉದಯಕ್ಕೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬೇಕು ಎಂದು ಅವರು ಹೇಳಿದರು.

ಸಂಸ್ಥಾಪನಾ ದಿನವನ್ನು ನಾಡಿನೆಲ್ಲೆಡೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಸಾಹಿತ್ಯ ಪರಿಷತ್ತು ಕನ್ನಡ, ಕನ್ನಡಿಗ, ಕರ್ನಾಟಕದೊಂದಿಗೆ ಹೇಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದೆ ಎನ್ನುವುದರ ಬಗ್ಗೆ ಯುವಜನರಿಗೆ ತಿಳಿಸುವ ಮೂಲಕ ಅವರನ್ನೂ ಸಾಹಿತ್ಯ ಪರಿಷತ್ತಿನೊಂದಿಗೆ ಬೆರೆಸಬೇಕು ಎಂದರು.

ಕನ್ನಡ, ಕನ್ನಡಿಗ, ಕರ್ನಾಟಕ ವಿಷಯಕ್ಕೆ ಸಂಬಂಧಿಸಿದಂತೆ ಪೂರಕ ಕಾರ್ಯಕ್ರಮ ಹಾಗೂ ಹೋರಾಟಗಳನ್ನು ರೂಪಿಸಿಕೊಂಡು ಬಂದು ಕನ್ನಡಿಗರಲ್ಲಿ ಕನ್ನಡದ ಪ್ರಜ್ಞೆಯನ್ನು ಸದಾ ಜೀವಂತವಾಗಿರುವ ಕಾರ್ಯಕ್ರಮವನ್ನು ಪರಿಷತ್ತು ಶತಮಾನದಿಂದ ಮಾಡುತ್ತಾ ಬಂದಿದೆ. ಪುಸ್ತಕ ಪ್ರಕಟಣೆ, ಸಮ್ಮೇಳನ, ಕಾರ್ಯಾಗಾರ, ವಿಚಾರ ಸಂಕಿರಣ ಮುಂತಾದ ಕಾರ್ಯ ಚಟುವಟಿಕೆಗಳು ಪರಿಷತ್ತಿನ ಜೀವಾಳವಾಗಿವೆ ಎಂದು ಅವರು ಹೇಳಿದರು.

ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜ ಅರಸು, ಸಾಹಿತಿ- ಕೆರೋಡಿ, ಕೃಷಿ ತಜ್ಞ ಎಂ.ಎ. ಪಾಟೀಲ್, ಸಾಹಿತಿ ಡಾ. ಸರಸ್ವತಿ ರಾಜೇಂದ್ರ, ರಂಗಕರ್ಮಿ ಎಚ್.ಎಸ್. ಗೋವಿಂದಗೌಡ, ಕವಿ ಎಂ.ಆರ್. ಆನಂದ್ ಅವರನ್ನು ಸನ್ಮಾನಿಸಲಾಯಿತು.

ರಂಗಕರ್ಮಿ ರಾಜಶೇಖರ್ ಕದಂಬ, ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಕೆ. ರಾಜೇಂದ್ರ, ಸಾಹಿತಿಗಳಾದ ಡಾ. ಸರಸ್ವತಿ ರಾಜೇಂದ್ರ, ಕೆರೋಡಿ ಎಂ. ಲೋಲಾಕ್ಷಿ, ರಂಗಕರ್ಮಿ ಎಚ್.ಎಸ್. ಗೋವಿಂದಗೌಡ, ಕೃಷಿತಜ್ಞ ಎಂ.ಎ. ಪಾಟೀಲ್, ಕವಿ ಎಂ.ಆರ್. ಆನಂದ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್. ಕವಿ ಉಷಾ ನರಸಿಂಹನ್ ಇದ್ದರು.