ಜನಸಾಮಾನ್ಯರಿಂದ ಮಾತ್ರ ಕನ್ನಡ ಉಳಿವು

| Published : Nov 03 2025, 02:45 AM IST

ಸಾರಾಂಶ

ಸರ್ಕಾರಿ ಶಾಲೆಗಳು ಓದು ಬರಹ ಲೆಕ್ಕದ ಜತೆಗೆ ಒಳ್ಳೆಯ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಿವೆ

ಕಾರಟಗಿ: ಹೊಲಗದ್ದೆಗಳಲ್ಲಿ ಕೆಲಸ ಮಾಡುವ ರೈತರು,ಶ್ರಮಿಕ ವರ್ಗದ ಜನ ಸಾಮಾನ್ಯರಿಂದ ಮಾತ್ರ ಕನ್ನಡ ಉಳಿದಿದೆ ಎಂದು ಜಾನಪದ ಕಲಾವಿದ ವೆಂಕಟೇಶ ಮೋಡಿಕಾರ ಹೇಳಿದರು.

ಇಲ್ಲಿಗೆ ಸಮೀಪದ ಬೇವಿನಾಳ ಗ್ರಾಮದ ಸರ್ಕರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳು ಓದು ಬರಹ ಲೆಕ್ಕದ ಜತೆಗೆ ಒಳ್ಳೆಯ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಿವೆ. ಹಾಗಾಗಿ ಸರ್ಕಾರಿ ಶಾಲೆಗಳನ್ನು ಪೋಷಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದರು.

ರೈತ ಮಹಿಳೆ ಮಲ್ಲಮ್ಮ, ಹಳ್ಳಿಸೊಗಡಿನ ಜಾನಪದ ಹಾಡು ಹಾಡಿದರು.

ಈ ವೇಳೆ ಶಾಲೆಯ ಮುಖ್ಯಗುರು ಕಳಕೇಶ ಡಿ.ಗುಡ್ಲಾನೂರ,ಎಸ್‌ಡಿಎಂ ಸದಸ್ಯರು ಶಿಕ್ಷಣಪ್ರೇಮಿಗಳು ಶಾಲೆಯ ಹಳೆಯ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು, ಶಿಕ್ಷಕಿ ಅಂಬಮ್ಮ,ಸುನೀತಾ, ರೇಣುಕಾ, ರೇಖಾ ಮತ್ತಿತರರು ಪಾಲ್ಗೊಂಡಿದ್ದರು.

ಮರ್ಲಾನಹಳ್ಳಿ: ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಿಕ್ಷಕ-ಶಿಕ್ಷಕಿಯರು ನಾಡದೇವಿ ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಹಾರ ಹಾಕಿ ವಂದಿಸಿ ೭೦ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಿಂದ ಆಚರಿಸಿದರು.

ಬಳಿಕ ಶಾಲೆಯ ಮುಖ್ಯ ಶಿಕ್ಷಕಿ ಸಾವಿತ್ರಿ ಮಲ್ಲನಗೌಡ ಮಾತನಾಡಿ, ಕನ್ನಡ ಭಾಷೆ ಸಾಹಿತ್ಯ ಪ್ರಪಂಚದಲ್ಲಿ ಹೆಮ್ಮರವಾಗಿ ಬೆಳೆದಿದೆ. ಹಾಗೆಯೇ ಕನ್ನಡ ಭಾಷೆ, ನೆಲ, ಜಲದ ರಕ್ಷಣೆಗೆ ನಾವೆಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು. ಸಾಹಿತ್ಯಕ್ಕೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಸಮಗ್ರ ಸಮೃದ್ದಿ ಹಾಗೂ ಸ್ವಾಭಿಮಾನ ಈ ಉದ್ದೇಶ ಇಟ್ಟುಕೊಂಡಾಗ ಮಾತ್ರ ಕನ್ನಡದ ಏಳ್ಗೆ ಸಾಧ್ಯ. ಮಕ್ಕಳಲ್ಲಿ ನಾಡು ನುಡಿ ಸಂಸ್ಕೃತೀಯ ಬಗ್ಗೆ ಪ್ರೀತಿ ವಾತ್ಸಲ್ಯ ಬೆಳಸಬೇಕು ನಮ್ಮ ಭಾಷೆಯು ಸಾಹಿತ್ಯ ಕ್ಷೇತ್ರದಲ್ಲಿ ಮುನ್ನಡೆಸಬೇಕಾಗಿದೆ ಎಂದರು.

ಇದಕ್ಕೂ ಮುಂಚೆ ಶಾಲೆಯ ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು, ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಮಹಮದ್‌ರಫಿ, ಆಂಜನೇಯ, ಪುಷ್ಪಾ,ಶರಣಮ್ಮ, ಶಾಮೀದ್ ಗಂಗನಾಳ ಸೇರಿದಂತೆ ವಿದ್ಯಾರ್ಥಿ, ವಿದ್ಯಾರ್ಥಿನೀಯರು, ಬಿಸಿಯೂಟದ ಸಿಬ್ಬಂದಿ ಇದ್ದರು.