ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿತಾನು ಈಗಾಗಲೇ ದಕ್ಷಿಣ ಕನ್ನಡ, ಉಡುಪಿ ಹಾಗೂ ಹಾಸನ ಜಿಲ್ಲೆಗಳ ಪ್ರವಾಸ ಮುಗಿಸಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ತೆರಳಿ ಅಲ್ಲಿನ ಕ್ರೀಡಾ ಕ್ಷೇತ್ರದ ಪರಿಸ್ಥಿತಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅಲ್ಲದೆ ಮುಖ್ಯವಾಗಿ ಕ್ರೀಡಾಪಟುಗಳ ತವರು ಜಿಲ್ಲೆ ಎಂದೇ ಕರೆಯಲಾಗುವ ಕೊಡಗಿನಲ್ಲಿ ಕೂಡ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುವ ಚಿಂತನೆ ಮಾಡಲಾಗಿದೆ ಎಂದು ಕರ್ನಾಟಕ ಕ್ರೀಡಾ ಪ್ರಾಥಿಕಾರದ ನೂತನ ಉಪಾಧ್ಯಕ್ಷ ಅರುಣ್ ಮಾಚಯ್ಯ ಹೇಳಿದ್ದಾರೆ.
‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಪ್ರತಿ ಜಿಲ್ಲೆಯಲ್ಲಿ ಸ್ಥಳೀಯ ಶಾಸಕರನ್ನು, ಉಸ್ತುವಾರಿ ಸಚಿವರ ಬೆಂಬಲ ತೆಗೆದುಕೊಂಡು ಕ್ರೀಡಾ ಕ್ಷೇತ್ರಕ್ಕೆ ಬೇಕಾದ ಅಗತ್ಯ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಗಿರುವುದರಿಂದ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುವುದು ಎಂದು ತಿಳಿಸಿದರು.ರಾಜ್ಯದ ಹಲವು ಕಡೆಗಳಲ್ಲಿ ಕ್ರೀಡಾ ವಸತಿ ನಿಲಯಗಳಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮಕ್ಕಳಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಯಿದೆ. ಆದ್ದರಿಂದ ಇವರಿಗೆ ಪ್ರತ್ಯೇಕ ಕ್ರೀಡಾ ವಸತಿ ನಿಲಯವನ್ನು ಆರಂಭಿಸಿ ಅವರ ಪ್ರತಿಭೆಯನ್ನು ಮತ್ತಷ್ಟು ಬಲಪಡಿಸಿ ಕ್ರೀಡಾ ಕ್ಷೇತ್ರದಲ್ಲಿ ಅವರು ತೊಡಗಿಸಿಕೊಂಡು ರಾಜ್ಯ, ರಾಷ್ಟ್ರವನ್ನು ಪ್ರತಿನಿಧಿಸುವಂತೆ ಮಾಡಬೇಕು. ಈ ಸಂಬಂಧ ಈಗಾಗಲೇ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದು, ಸಚಿವರು ಕೂಡ ಈ ಬಗ್ಗೆ ಉತ್ಸುಕತೆ ತೋರಿದ್ದಾರೆಂದು ಅರಣ್ ಮಾಚಯ್ಯ ಹೇಳಿದರು.
ತಾನು ಪ್ರವಾಸ ಮಾಡುವ ಜಿಲ್ಲೆಗಳಲ್ಲಿ ಎಲ್ಲಾ ಕ್ರೀಡಾ ಅಸೋಸಿಯೇಷನ್ ಗಳು, ಯುವಕ-ಯುವತಿ ಸಂಘಗಳನ್ನು ಕೂಡ ಸೇರಿಸಿಕೊಂಡು ಸಭೆ ನಡೆಸಲಾಗುತ್ತಿದೆ. ಸಂಘಗಳಿಗೆ ಸ್ಥಳೀಯವಾಗಿ ಸಾಕಷ್ಟು ಸಮಸ್ಯೆಯ ಬಗ್ಗೆ ಅರಿವಾಗಿರುತ್ತದೆ. ಆದ್ದರಿಂದ ಅವರ ಬೇಡಿಕೆಯನ್ನು ಆಲಿಸುತ್ತಿದ್ದೇನೆ. ಕ್ರೀಡಾ ಇಲಾಖೆಯಲ್ಲಿ ಕ್ರೀಡಾ ಅಸೋಸಿಯೇಷನ್ ಗಳನ್ನು ನೋಂದಾಯಿಸುವ ಕೆಲಸ ಯಾರೂ ಮಾಡಿಲ್ಲ. ಆದರೆ ನಾನು ಬಂದ ನಂತರ ಈ ಕೆಲಸ ಮಾಡುತ್ತಿದ್ದೇನೆಂದು ತಿಳಿಸಿದರು.ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಜೆಟ್ ನಲ್ಲಿ ಘೋಷಣೆಯಾಗಿರುವ ಕಾಮಗಾರಿಗಳನ್ನು ಅನುಷ್ಠಾನಕ್ಕೆ ಬರುವಂತೆ ಮಾಡಲಾಗುವುದು. ಅಲ್ಲದೆ 2026ರ ಒಳಗಾಗಿ 31 ಜಿಲ್ಲೆಗಳಿಗೂ ಪ್ರವಾಸವನ್ನು ಮಾಡಿ ಮುಂದಿನ ಬಜೆಟ್ ನಲ್ಲಿ ಆಯಾ ಜಿಲ್ಲೆಗೆ ಸಂಬಂಧಿಸಿದ ಬೇಡಿಕೆಗಳ ಬಗ್ಗೆ ಸರ್ಕಾರದ ಮುಂದೆ ಇಟ್ಟು, ಬಜೆಟ್ ನಲ್ಲಿ ಘೋಷಣೆ ಮಾಡುವಂತೆ ಆಗಲು ಕೆಲಸ ಮಾಡಲಾಗುವುದು ಎಂದು ಹೇಳುತ್ತಾರೆ.
ಕೊಡಗು ಕ್ರೀಡಾ ಜಿಲ್ಲೆ ಆದರೂ ಇಲ್ಲಿ ದೊಡ್ಡ ಮಟ್ಟದ ಕ್ರೀಡಾ ಸ್ಟೇಡಿಯಂಗಳಿಲ್ಲ . ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿನ ಜಿಲ್ಲಾ ಕ್ರೀಡಾಂಗಣ ನವೀಕರಣಕ್ಕೆ ಶಾಸಕರಾದ ಡಾ. ಮಂತರ್ ಗೌಡ ಅವರು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಸಿಂಥೆಟಿಕ್ ಟರ್ಫ್ ಕೂಡ ಮಾಡುವಂತೆ ಮನವಿ ಮಾಡಿದ್ದಾರೆ. ಪೊನ್ನಂಪೇಟೆಯಲ್ಲಿನ ಹಾಕಿ ಸಿಂಥೆಟಿಕ್ ಟರ್ಫ್ ರಿಪೇರಿ ಕೆಲಸ ಕೂಡ ಆಗಬೇಕಿದೆ. ಈ ಬಗ್ಗೆ ಸರ್ಕಾರದೊಂದಿಗೆ ವ್ಯವಹರಿಸಿ ಆದಷ್ಟು ಬೇಗ ಈ ಕೆಲಸ ಮಾಡುವಂತೆ ಶ್ರಮಿಸಲಾಗುವುದು ಎನ್ನುತ್ತಾರೆ ಅರುಣ್ ಮಾಚಯ್ಯ.ಶಾಸಕರಾದ ಎ.ಎಸ್. ಪೊನ್ನಣ್ಣ ಅವರ ಪರಿಶ್ರಮದ ಫಲವಾಗಿ ಬಿ ಶೆಟ್ಟಿಗೇರಿಯಲ್ಲಿ 11 ಎಕರೆ ಜಾಗದಲ್ಲಿ ಗುರುತಿಸಲಾಗಿದ್ದು, ಕ್ರೀಡೆಗೆ ಸಂಬಂಧಿಸಿದ ಎಲ್ಲ ವ್ಯವಸ್ಥೆಗಳು ಇಲ್ಲಿ ಇರಲಿದೆ. ಹೊರಾಂಗಣ ಸೇರಿದಂತೆ ಒಳಾಂಗಣ ಕ್ರೀಡಾಂಗಣ ಸೇರಿ ಹಲವು ಕ್ರೀಡೆಗಳಿಗೆ ವ್ಯವಸ್ಥೆ ಕೂಡ ಮಾಡಬೇಕಾಗಿದೆ. ಇದಾದರೆ ಕೊಡಗಿನ ಕ್ರೀಡಾಪಟುಗಳಿಗೆ ಸುಂದರ ಅವಕಾಶ ದೊರಕಲಿದೆ ಎಂದು ತಿಳಿಸಿದರು.
31 ಜಿಲ್ಲೆಯಲ್ಲಿ ಕೂಡ ಅಥ್ಲೆಟಿಕ್ ಹಾಗೂ ಕರಾಟೆ ಅಸೋಸಿಯೇಷನ್ ಗಳಿದೆ. ಕಬಡ್ಡಿ, ಖೋಖೋ, ಕಂಬಳ ಕ್ರೀಡೆಗೆ ನಾವು ಮಾನ್ಯತೆ ನೀಡಿದ್ದೇವೆ ಎಂದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ರಾಜ್ಯದಲ್ಲಿ ಕ್ರೀಡಾ ನೀತಿ ಆಗಲು ತಾನು ಕೆಲಸ ಮಾಡಿದ್ದೆ. ಕ್ರೀಡಾ ಶಿಕ್ಷಕರು ಇಲ್ಲದೆ ಶಾಲೆಗಳಲ್ಲಿ ಮಕ್ಕಳು ಕ್ರೀಡೆಯಲ್ಲಿ ಸಾಧನೆ ಮಾಡಲು ಹೇಗೆ ಸಾಧ್ಯ. ಈ ಬಗ್ಗೆ ತಾನು ಅಂದು ಗಮನ ಸೆಳೆದಿದ್ದೆ. ಇದರಿಂದ ಸುಮಾರು 800 ಶಾಲೆಗಳಿಗೆ ಕ್ರೀಡಾ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು ಎಂದು ಅರುಣ್ ಮಾಚಯ್ಯ ನೆನಪಿಸಿಕೊಂಡರು.ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ನ್ಯೂನ್ಯತೆಗಳು ಸಾಮಾನ್ಯವಾಗಿದೆ. ಆದ್ದರಿಂದ ಆದಷ್ಟು ಬೇಗ ಇದನ್ನು ಬಗೆಯರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದ ಅವರು, ರಾಜ್ಯದಲ್ಲಿ ಕ್ರೀಡಾ ಪಟುಗಳಿಗೆ ಕೊರತೆ ಇಲ್ಲ. ಆದ್ದರಿಂದ ಪ್ರತಿಭೆಗಳಿಗೆ ಸೂಕ್ತವಾದ ತರಬೇತಿ ನೀಡುವುದು ನಮ್ಮ ಕೆಲಸ. ಆದ್ದರಿಂದ ಸರ್ಕಾರದಿಂದ ಆಗಬೇಕಾದ ಕೆಲಸವನ್ನು ತಾನು ಮಾಡಿಸುವುದಾಗಿ ಭರವಸೆ ನೀಡಿದರು. ಅರುಣ್ ಮಾಚಯ್ಯ
ಚೆಪ್ಪುಡಿರ ಅರುಣ್ ಮಾಚಯ್ಯ ಅವರು ಪ್ರಸ್ತುತ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ರಾಷ್ಟ್ರೀಯ ಕರಾಟೆ ತಾಂತ್ರಿಕ ಆಯೋಗದ ಜಂಟಿ ಅಧ್ಯಕ್ಷ, ಏಷ್ಯಾದ ಶಿಟೋರಿಯೊ ಫೆಡರೇಷನ್ ಉಪಾಧ್ಯಕ್ಷರಾಗಿದ್ದಾರೆ. ವಿಶ್ವ ಶಿಟೋರಿಯೊ ಕರಾಟೆ ಫೆಡರೇಷನ್ ನಲ್ಲಿ ನಿರ್ದೇಶಕರಾಗಿದ್ದಾರೆ. ಚೆಪ್ಪುಡಿರ ಅರುಣ್ ಮಾಚಯ್ಯ ಅಂತರರಾಷ್ಟ್ರೀಯ ಕರಾಟೆ ಪಟು, ವಿಶ್ವ ಮತ್ತು ಏಷ್ಯನ್ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ. ಭಾರತದ ಅತ್ಯುನ್ನತ ಶ್ರೇಣಿಯ 9ನೇ ಡಾನ್ ಬ್ಲಾಕ್ ಬೆಲ್ಟ್ ಅನ್ನು ಪಡೆದಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯರು ಕೂಡ.
;Resize=(128,128))
;Resize=(128,128))