ಕರ್ನಾಟಕ ಏಕೀಕರಣಕ್ಕೆ ಬಳ್ಳಾರಿ ಜಿಲ್ಲೆ ಕೊಡುಗೆ ಅಪಾರ: ಕಲ್ಮಠ

| Published : Nov 03 2025, 02:45 AM IST

ಕರ್ನಾಟಕ ಏಕೀಕರಣಕ್ಕೆ ಬಳ್ಳಾರಿ ಜಿಲ್ಲೆ ಕೊಡುಗೆ ಅಪಾರ: ಕಲ್ಮಠ
Share this Article
  • FB
  • TW
  • Linkdin
  • Email

ಸಾರಾಂಶ

ಚರಿತ್ರೆಯ ಪುಟಗಳಿಂದ ಭಾಷೆ ಮತ್ತು ಸಂಸ್ಕೃತಿಯ ಸೊಗಡನ್ನು ಮೆಲುಕು ಹಾಕಿದಾಗ ಕನ್ನಡದ ಅರಸರ ಆಳ್ವಿಕೆಯ ವಿಶಾಲ ವ್ಯಾಪ್ತಿ ಗಮನಕ್ಕೆ ಬರುತ್ತದೆ

ಬಳ್ಳಾರಿ: ಸರ್ವಶ್ರೇಷ್ಠ ಮಾತೃಭಾಷೆಯಾದ ಕನ್ನಡವು ಜೀವ ಚೈತನ್ಯದಂತೆ ಕ್ಷಾತ್ರ ತೇಜಸ್ಸು ಹೊಂದಿದೆ. ಕನ್ನಡದ ಮನಸ್ಸುಗಳ ಮೂಲಕ ಅಸ್ಮಿತೆಯನ್ನು ಜೀವಾಳವಾಗಿಸಿಕೊಂಡಿದೆ ಎಂದು ಲೇಖಕ ಸಿದ್ಧರಾಮ ಕಲ್ಮಠ ಹೇಳಿದರು.ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಚರಿತ್ರೆಯ ಪುಟಗಳಿಂದ ಭಾಷೆ ಮತ್ತು ಸಂಸ್ಕೃತಿಯ ಸೊಗಡನ್ನು ಮೆಲುಕು ಹಾಕಿದಾಗ ಕನ್ನಡದ ಅರಸರ ಆಳ್ವಿಕೆಯ ವಿಶಾಲ ವ್ಯಾಪ್ತಿ ಗಮನಕ್ಕೆ ಬರುತ್ತದೆ. ರಾಷ್ಟ್ರಕೂಟರು, ಕದಂಬರು, ಗಂಗರು, ಚಾಲುಕ್ಯರು, ಹೊಯ್ಸಳರು, ವಿಜಯನಗರ ಸಂಸ್ಥಾನ, ಒಡೆಯರು, ಪಾಳೆಗಾಗರಂತಹ ರಾಜಮನೆತನಗಳು ಕನ್ನಡದ ಕುರುಹುಗಳನ್ನು ಜಗತ್ತಿನಾದ್ಯಂತ ಶಾಸನ, ಗ್ರಂಥ ಮತ್ತು ತಾಳೆಗರಿಗಳ ರೂಪದಲ್ಲಿ ಪಸರಿಸಿದ್ದಾರೆ ಎಂದರು.

1940ರಲ್ಲಿ ಕಾವು ಪಡೆದ ಕರ್ನಾಟಕ ಏಕೀಕರಣ ಚಳವಳಿಗೆ ಮುನ್ನುಡಿ ಬರೆದಿದ್ದು ಬಳ್ಳಾರಿ ಜಿಲ್ಲೆ. ಏಕೀಕರಣ ಹೋರಾಟಕ್ಕೆ ಬಳ್ಳಾರಿ ಜಿಲ್ಲೆ ಬಹುದೊಡ್ಡ ಕೊಡುಗೆ ನೀಡಿದೆ. ಬಳ್ಳಾರಿಯ ಪಿಂಜಾರ್ ರಂಜಾನಸಾಬ್ ಏಕೀಕರಣ ಹೋರಾಟದ ಹುತಾತ್ಮರಾದ ಏಕೈಕ ಕನ್ನಡಿಗರಾಗಿದ್ದಾರೆ. ಗಡಿಭಾಗ ಬಳ್ಳಾರಿಯಲ್ಲಿ ಕನ್ನಡಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ ಮಹನೀಯರನ್ನು ಸದಾ ಸ್ಮರಿಸಬೇಕು. ಕನ್ನಡ ಭಾಷಾ ಉಳಿವಿಗೆ ಪ್ರತಿಯೊಬ್ಬರು ಕಾಳಜಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿ ಪ್ರೊ.ಎಂ. ಮುನಿರಾಜು ಮಾತನಾಡಿ, ರಾಜ್ಯದಲ್ಲಿ ಪರಭಾಷಿಗರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ರಾಜಧಾನಿಯಲ್ಲಿ ಉತ್ತರ ಭಾರತದವರ ವಲಸೆಯಿಂದ ಮೂಲಕ ಕನ್ನಡಿಗರಿಗೆ ಧಕ್ಕೆಯಾಗಿದೆ. ನಮ್ಮ ಮಾತೃಭಾಷೆಯನ್ನು ಉಳಿಸಲು, ಬೆಳೆಸಲು ನಾವೆಲ್ಲ ಕೇವಲ ನವಂಬರ್ ತಿಂಗಳ ಕನ್ನಡಿಗರಾಗದೆ ನಮ್ಮ ಉಸಿರಿರುವರೆಗೆ ಭಾಷಾಭಿಮಾನ ಮೆರೆಯಬೇಕು ಎಂದು ಕರೆ ನೀಡಿದರು.

ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಂತೋಷ್ ಜಿ.ಕೆ. ಅತಿಥಿಗಳನ್ನು ಸ್ವಾಗತಿಸಿದರು. ವಿವಿಯ ಕುಲಸಚಿವ ಸಿ.ನಾಗರಾಜು, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ಎಂ. ಸಾಲಿ, ಕಲಾ ನಿಕಾಯದ ಡೀನ್‌ ಪ್ರೊ.ರಾಬರ್ಟ್ ಜೋಸ್, ಪ್ರದರ್ಶನ ಕಲೆ ಮತ್ತು ನಾಟಕ ವಿಭಾಗದ ಮುಖ್ಯಸ್ಥ ಪ್ರೊ.ಶಾಂತನಾಯ್ಕ್ ಎನ್. ಇದ್ದರು.

ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮೊದಲು ಗಣ್ಯರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ನಂತರ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ವಿವಿಯ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರು, ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಕನ್ನಡ ಗೀತೆಗಳನ್ನು ಹಾಡಿದರು. ವಿವಿಯ ವಿವಿಧ ನಿಕಾಯಗಳು ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ವಿದ್ಯಾರ್ಥಿಗಳು ಇದ್ದರು.