ಕೊಪ್ಪಳ: ಆನೆಗೊಂದಿಯ ಸಾಣಾಪುರ ಬಳಿ ನಡೆದ ವಿದೇಶಿಯರ ಅತ್ಯಾಚಾರ ಪ್ರಕರಣದಲ್ಲಿ ಯಾವುದೇ ಖಚಿತ ಸುಳಿವು ಇಲ್ಲದಿದ್ದರೂ ಸಹ ತಂತ್ರಜ್ಞಾನ ಬಳಕೆ ಮಾಡಿ, ಹಗಲಿರಳು ನಿದ್ರೆಯಿಲ್ಲದೆ ತನಿಖೆ ನಡೆಸಿದ ಪರಿಣಾಮ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ಶ್ಲಾಘನೀಯವಾಗಿದ್ದು, ಈಗ ಮೂವರಿಗೂ ಮರಣದಂಡನೆ ಶಿಕ್ಷೆಯಾಗಿರುವುದು ಭಾರತೀಯ ಕಾನೂನು ವ್ಯವಸ್ಥೆ ಗಟ್ಟಿಯಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಬಳ್ಳಾರಿ ವಲಯದ ಐಜಿಪಿ ಡಾ.ಪಿ.ಎಸ್.ಹರ್ಷ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂಪಿ ವ್ಯಾಪ್ತಿಯ ಆನೆಗೊಂದಿ ಸಮೀಪ ೨೦೨೫ರ ಮಾ. ೬ ರಂದು ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣ ನಡೆದಿತ್ತು. ಹಂಪಿ ಪ್ರವಾಸಕ್ಕೆ ಬಂದಿದ್ದ ವಿದೇಶ ಮೂಲದ ಇಬ್ಬರು ಮಹಿಳೆಯರು, ಮೂವರು ಪುರುಷರು ಹೋಂಸ್ಟೇನಲ್ಲಿ ತಂಗಿದ್ದರು. ರಾತ್ರಿ ಸ್ಟಾರ್ ಗೇಜಿಂಗ್ ಮಾಡುವ ಉದ್ದೇಶದಿಂದ ಒಟ್ಟು ಐವರು ಸಾಣಾಪುರ ಕೆರೆ ಸಮೀಪ ತುಂಗಭದ್ರಾ ಕಾಲುವೆ ಬಳಿ ರಾತ್ರಿ ೧೧ಗಂಟೆ ಸುಮಾರಿಗೆ ತೆರಳಿದಾಗ ಘಟನೆ ನಡೆದಿತ್ತು.ಮೂವರು ಅಪರಾಧಿಗಳು ಈ ಮಾರ್ಗದಲ್ಲಿ ಸಾಗುತ್ತಿದ್ದಾಗ ವಿದೇಶಿಗರನ್ನು ನೂರು ರೂಪಾಯಿ ಕೊಡುವಂತೆ ಕೇಳಿದ್ದರು. ಆದರೆ, ಹಣ ಇಲ್ಲ ಎಂದ ವಿದೇಶಿಯರು ನಂತರ ಕೇವಲ ₹20 ನೀಡಿದ್ದರು. ಇದರಿಂದ ಹಣ ಕೇಳಿದ್ದ ಆರೋಪಿಗಳು ವಿದೇಶಿಯರ ಮೇಲೆ ದಾಳಿ ಮಾಡಿದ್ದು, ಅಲ್ಲದೆ, ಮೂವರನ್ನು ನಾಲೆಗೆ ತಳ್ಳಿ, ಇಬ್ಬರು ವಿದೇಶಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ದೊಡ್ಡ ಆನಾಹುತ ಮಾಡಿದ್ದರು. ಆಗ ಡಿಎಸ್ಪಿ ಸೋಮಶೇಖರ್ ಸ್ಥಳಕ್ಕೆ ಆಗಮಿಸಿ ಅಸ್ವಸ್ಥ ವಿದೇಶಿ ಮಹಿಳೆಯರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದರು. ಇದಾದ ಬಳಿ ತಕ್ಷಣ ಎಸ್ಪಿ ಡಾ.ರಾಮ ಎಲ್ ಅರಸಿದ್ದಿ ಆಗಮಿಸಿ ಪ್ರಕರಣ ಬೇಧಿಸಲು ಶುರು ಮಾಡಿದರು.
ಯಾವುದೇ ಸುಳಿವು ಇರದಿದ್ದರೂ ವಿದೇಶಿ ಪ್ರಜೆ ತೆಗೆದಿದ್ದ ಒಂದು ಫೋಟೋ ಹಾಗೂ ಚಿಕ್ಕ ಸುಳುವಿನ ಜಾಲ ಹಿಡಿದ ನಮ್ಮ ಅಧಿಕಾರಿ, ಸಿಬ್ಬಂದಿ ಆರೋಪಿ ಮಲ್ಲೇಶನನ್ನು ವಶಕ್ಕೆ ಪಡೆದರು. ಈತನನ್ನು ಪ್ರಶ್ನಾವಳಿ ಮಾಡಿಕೊಂಡು ಪ್ರಶ್ನೆ ಮಾಡಿದಾಗ ಕೊಟ್ಟ ಉತ್ತರದಿಂದಲೇ ಎಲ್ಲವನ್ನು ಬಯಲು ಮಾಡಿದರು.ವಿಶೇಷ ತಂಡ ರಚಿಸಿ ತಮಿಳುನಾಡು, ಮಹಾರಾಷ್ಟ್ರ,ಬೆಂಗಳೂರು ಸೇರಿದಂತೆ ಅನೇಕ ಕಡೆ ಶೋಧ ಕಾರ್ಯ ನಡೆಸಲಾಯಿತು. ೨ನೇ ಆರೋಪಿ ಸಾಯಿ ಮತ್ತು ೩ನೇ ಆರೋಪಿ ಶರಣಪ್ಪನನ್ನು ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಚೆನ್ನೈ ಮರೀನಾ ಬೀಚ್‌ನಲ್ಲಿ ಬಂಧಿಸಿತು.
ಹೀಗೆ ಕಾರ್ಯಾಚರಣೆ ನಡೆಸಿದ ನಮ್ಮ ಪೊಲೀಸ್ ಪಡೆ, ಹಗಲು, ರಾತ್ರಿ ನಿದ್ರೆ ಇಲ್ಲದೆ ಕಾರ್ಯ ನಿರ್ವಹಿಸಿ ಎರಡೂವರೆ ತಿಂಗಳಲ್ಲೇ ೧೫೦೦ಪುಟಗಳ ದೋಷಾರೋಪ ಪಟ್ಟಿ ಹಾಗೂ ೭೫೦ಕ್ಕೂ ಹೆಚ್ಚು ದಾಖಲೆಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿ ಆರೋಪಿಗಳಿಗೆ ಶಿಕ್ಷೆಯಾಗುವುದಕ್ಕೆ ಅಗತ್ಯ ಎಲ್ಲ ದಾಖಲೆ ಒದಗಿಸಿದ್ದರು.
ಡಿಎನ್‌ಎ, ಮೊಬೈಲ್ ಹಾಗೂ ಡಿಜಿಟಲ್ ಫೊರೆನ್ಸಿಕ್ ಸಾಕ್ಷ್ಯಗಳು ಸೇರಿದಂತೆ ೮೪ ಉಪಕರಣ ಗಂಗಾವತಿಯ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಒದಗಿಸಲಾಯಿತು. ಈ ಪ್ರಕರಣದಲ್ಲಿ ೧೦೧ ಸಾಕ್ಷಿದಾರರಿದ್ದಾರೆ. ಅವರೆಲ್ಲರೂ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಸಾಕ್ಷ್ಯ ನುಡಿದು ಸಹಕರಿಸಿದರು.
೨೦೨೬ ರ ಫೆ.೬ ರಂದು ಗಂಗಾವತಿ ಹೆಚ್ಚುವರಿ ಸತ್ರ ನ್ಯಾಯಾಲಯ ಆರೋಪಿಗಳು ದೋಷಿಗಳೆಂದು ಘೋಷಣೆ ಮಾಡಿತಲ್ಲದೆ ಫೆ. ೧೬ ರಂದು ಮೂರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. ಇದರಲ್ಲಿ ಸರ್ಕಾರಿ ಅಭಿಯೋಜಕಿ ನಾಗಲಕ್ಷ್ಮಿ ಸಹ ಶಕ್ತಿಮೀರಿ ಕಾರ್ಯನಿರ್ವಹಿಸಿದ್ದಾರೆ. ಕೆಲವೇ ದಿನಗಳಲ್ಲಿ 1500 ಪುಟಗಳ ಆರೋಪಪಟ್ಟಿ ಅಧ್ಯಯನ ಮಾಡಿ, ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡಿದ್ದು ಸಹ ಶ್ಲಾಘನೀಯ ಎಂದು ಬಣ್ಣಿಸಿದರು.ಪೊಲೀಸರ ಕಾರ್ಯ ಶ್ಲಾಘನೀಯ:
ಕೊಪ್ಪಳದ ಎಸ್ಪಿ ಡಾ.ರಾಮ ಎಲ್ ಅರಸಿದ್ದಿ ಸೇರಿದಂತೆ ಇಡೀ ತನಿಕಾ ತಂಡದ ಕಾರ್ಯ ಶ್ಲಾಘನೀಯವಾಗಿದೆ. ವಿಶೇಷವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಪೇದೆ ವಿಶ್ವನಾಥ ಅವರನ್ನು ಸಿಎಂ ಪದಕಕ್ಕೆ ಶಿಫಾರಸು ಮಾಡಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ, ಹೆಚ್ಚುವರಿ ಎಸ್‌ಪಿ ಹೇಮಂತಕುಮಾರ, ಕ್ರೈಂ ಡಿವೈಎಸ್ಪಿ ಸಿದ್ದನಗೌಡ ಸೇರಿದಂತೆ ಅನೇಕರು ಇದ್ದರು.