ಸರಕಾರಗಳು ಲಕ್ಷಾಂತರ ರುಪಾಯಿ ಹಣ ವಿನಿಯೋಗಿಸಿ ನಿರ್ಮಿಸಿದ ಸಮುದಾಯ ಭವನಗಳನ್ನು ಜ್ಞಾನ ಕೇಂದ್ರಗಳನ್ನಾಗಿ ಪರಿವರ್ತಿಸಿ ಅಲ್ಲಿ ಸದಾ ಕನ್ನಡ ದಿನಪತ್ರಿಕೆಗಳು, ಪುಸ್ತಕಗಳು ದೊರೆಯುವಂತೆ ಮಾಡಬೇಕು ಎಂದು ಸಮ್ಮೇಳನಾಧ್ಯಕ್ಷ ಸಾಹಿತಿ ಆಲೂರು ದೊಡ್ಡನಿಂಗಪ್ಪ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಸರಕಾರಗಳು ಲಕ್ಷಾಂತರ ರುಪಾಯಿ ಹಣ ವಿನಿಯೋಗಿಸಿ ನಿರ್ಮಿಸಿದ ಸಮುದಾಯ ಭವನಗಳನ್ನು ಜ್ಞಾನ ಕೇಂದ್ರಗಳನ್ನಾಗಿ ಪರಿವರ್ತಿಸಿ ಅಲ್ಲಿ ಸದಾ ಕನ್ನಡ ದಿನಪತ್ರಿಕೆಗಳು, ಪುಸ್ತಕಗಳು ದೊರೆಯುವಂತೆ ಮಾಡಬೇಕು ಎಂದು ಸಮ್ಮೇಳನಾಧ್ಯಕ್ಷ ಸಾಹಿತಿ ಆಲೂರು ದೊಡ್ಡನಿಂಗಪ್ಪ ಆಗ್ರಹಿಸಿದರು.ತಾಲೂಕಿನ ಹೊನ್ನವಳ್ಳಿಯಲ್ಲಿ ನಡೆದ ೭ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು ಪೂರ್ವಜರು ನಮಗಾಗಿ ಬಿಟ್ಟುಹೋದ ಸುಂದರ ಭಾಷೆ ಕನ್ನಡ ಎಂದ ಅವರು, ಶಿಕ್ಷಣ ದೇಶದ ಮಾನದಂಡ ಅಳೆಯುವುದರಿಂದ ಸರಕಾರಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಗುಣಮಟ್ಟದ ಪ್ರೌಢಶಾಲೆಗಳನ್ನು ಆರಂಭಿಸುವುದರಿಂದ ಜನರು ಖಾಸಗಿ ಶಾಲೆಗಳತ್ತ ಹೋಗುವುದು ತಪ್ಪಿಸಬಹುದು ಎಂದರು.ಹೊನ್ನವಳ್ಳಿಯ ಬ್ರಾಂಡ್ ಆಗಿರುವ ಅಳಿವಿನಂಚಿನಲ್ಲಿರುವ ಗಂಗಾಪಾನಿ ಎಳನೀರು ಉಳಿಸಲು ಕ್ರಮ ವಹಿಸಬೇಕು. ತಾಲೂಕಿಗೆ ತೆಂಗು ಪಾರ್ಕ್ ಅಗತ್ಯವಿದ್ದು ಮುಂಬರುವ ಬಜೆಟ್‌ನಲ್ಲಿ ಸಾಕಾರಗೊಳ್ಳಲಿ. ಹಳ್ಳಿಕಾರ್ ತಳಿ ಎತ್ತುಗಳು, ನಾಟಿ ಆಡು, ಕುರಿ ತಳಿಗಳನ್ನು ಉಳಿಸುವ ಪ್ರಯತ್ನವಾಗಬೇಕು, ಜನ-ಜಾನುವಾರುಗಳಿಗೆ ನಿರ್ಮಾಣವಾಗಿದ್ದ ಐತಿಹಾಸಿಕ ಸ್ಥಳವಾದ ಅಯ್ಯನಬಾವಿಯನ್ನು ಪುನಶ್ಚೇತನಗೊಳಿಸಬೇಕು. ತಿಪಟೂರು ನಗರಕ್ಕೆ ನೊಣವಿನಕೆರೆಯಿಂದ ಕುಡಿಯುವ ನೀರು ತರುವ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಿ. ತಾಲೂಕಿನ ಜನರ ಸರ್ವತೋಮುಖ ಅಭಿವೃದ್ಧಿಗೆ ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಲಿ ಎಂಬ ಹಲವಾರು ಬೇಡಿಕೆಗಳನ್ನು ಸಮ್ಮೇಳನಾಧ್ಯಕ್ಷರು ಮಂಡಿಸಿದರು.ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ವಿಮರ್ಶಕ, ಚಿಂತಕ ಅಗ್ರಹಾರ ಕೃಷ್ಣಮೂರ್ತಿ ದೇಶದಲ್ಲಿ ಇತ್ತೀಚೆಗೆ ಫೆಸ್ಟಿವಲ್ ಹೆಸರಿನಲ್ಲಿ ನಡೆಯುತ್ತಿರುವ ಹಲವಾರು ಸಾಹಿತ್ಯೋತ್ಸವಗಳಲ್ಲಿ ಇಂಗ್ಲಿಷ್ ದರ್ಬಾರ್ ನಡೆಯುತ್ತಿದೆ. ಈ ಬೆಳವಣಿಗೆ ಪ್ರಾದೇಶಿಕ ಭಾಷೆಯ ಬೆಳವಣಿಗೆ ದೃಷ್ಠಿಯಿಂದ ಆಶಾದಾಯಕವಲ್ಲ. ಪರ್ಯಾಯವಾಗಿ ದೇಶೀ ಚಟುವಟಿಕೆಗಳು ತಾಲೂಕು, ಹೋಬಳಿ ಮಟ್ಟದಲ್ಲಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೊನ್ನವಳ್ಳಿಯಂತ ಹೋಬಳಿಯಲ್ಲಿ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದರು. ಸಾನಿಧ್ಯ ವಹಿಸಿ ಮಾತನಾಡಿದ ಕರಿಸಿದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಕನ್ನಡ ತಾಯಿ ಭಾಷೆ ಅದನ್ನು ಉಳಿಸಿ ಬೆಳಸಬೇಕು. ಸಮಾಜದಲ್ಲಿ ಜಾತೀಯತೆ ತೊಲಗಬೇಕು. ಮಾನವರು ಮನುಷ್ಯತ್ವದಿಂದ ಬಾಳಬೇಕು. ಮಕ್ಕಳಿಗೆ ಇಂಗ್ಲಿಷ್ ವ್ಯಾಮೋಹವನ್ನು ಪೋಷಕರು ತುಂಬಬಾರದು ಎಂದರು.ಕಸಾಪ ತಾಲೂಕು ಅಧ್ಯಕ್ಷ ಎಂ.ಬಸವರಾಜಪ್ಪ ಮಾತನಾಡಿ, ಕಳೆದ ನಾಲ್ಕು ವರ್ಷಗಳಲ್ಲಿ ತಾಲೂಕು ಕಸಾಪ ಮೂರು ತಾಲೂಕು ಕನ್ನಡ ಸಮ್ಮೇಳನ, ಮೂರು ಮಕ್ಕಳ ಸಾಹಿತ್ಯ ಸಮ್ಮೇಳನ, ಒಂದು ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ ಹಾಗೂ ಒಂದು ಕೃಷಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ ದಾಖಲೆ ಬರೆದಿದೆ. ಇದೆಲ್ಲಾ ತಾಲೂಕಿನ ಜನರ ಸಹಕಾರದಿಂದ ಸಾಧ್ಯವಾಗಿದ್ದು ಅವರ ಕನ್ನಡ ಪ್ರೇಮವನ್ನು ತೋರಿಸುತ್ತದೆ.ಕೆಪಿಸಿಸಿ ಸದಸ್ಯ ವಿ.ಯೋಗೇಶ್ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿದರು. ಚಲನಚಿತ್ರ ನಟ ಅಚ್ಯುತ್‌ಕುಮಾರ್ ಸಮ್ಮೇಳನಾಧ್ಯಕ್ಷರ ಭಾಷಣ ಪ್ರತಿ ಬಿಡುಗಡೆ, ರಂಗಕರ್ಮಿ ನಟರಾಜು ಪುಸ್ತಕ ಬಿಡುಗಡೆ ಮಾಡಿದರು., ನಿ. ಎಸಿಪಿ ಲೋಕೇಶ್ವರ, ಚಿತ್ರನಟ ಧರ್ಮೇದ್ರ ಅರಸ್, ಪತ್ರಕರ್ತ ಉಗಮ ಶ್ರೀನಿವಾಸ್, ಮಾಜಿ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರ್ ಇನ್ನಿತರರು ಉಪಸ್ಥಿತರಿದ್ದರು.