ಕನ್ನಡ ವಿವಿಗೂ ಎಸ್.ಎಲ್.‌ಭೈರಪ್ಪಗೂ ಉತ್ತಮ ಬಾಂಧವ್ಯ

| Published : Sep 25 2025, 01:00 AM IST

ಕನ್ನಡ ವಿವಿಗೂ ಎಸ್.ಎಲ್.‌ಭೈರಪ್ಪಗೂ ಉತ್ತಮ ಬಾಂಧವ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗೆ ಧ್ವನಿ ಎತ್ತಿದ ಸಾಹಿತಿಗಳಲ್ಲಿ ಓರ್ವರಾಗಿದ್ದ ಅವರು ಕನ್ನಡ ವಿವಿ ಬೆಳವಣಿಗೆಗೆ ಸದಾ ಕಟಿಬದ್ಧರಾಗಿದ್ದರು.

ಹೊಸಪೇಟೆ: ನಾಡೋಜ, ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಅವರಿಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೂ ಬಿಡಿಸಲಾರದ ನಂಟು. ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗೆ ಧ್ವನಿ ಎತ್ತಿದ ಸಾಹಿತಿಗಳಲ್ಲಿ ಓರ್ವರಾಗಿದ್ದ ಅವರು ಕನ್ನಡ ವಿವಿ ಬೆಳವಣಿಗೆಗೆ ಸದಾ ಕಟಿಬದ್ಧರಾಗಿದ್ದರು.

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗಾಗಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ ಆಗಲಿ ಎಂದು ಡಾ. ದ.ರಾ. ಬೇಂದ್ರೆ, ಡಾ. ಚಿದಾನಂದ ಮೂರ್ತಿ, ಡಾ. ಯು.ಆರ್. ಅನಂತಮೂರ್ತಿ ‌ಮತ್ತು ಡಾ. ಗಿರೀಶ್ ಕಾರ್ನಾಡ್ ಅವರಂತಹ ದಿಗ್ಗಜ ಸಾಹಿತಿಗಳು, ದಾರ್ಶನಿಕರು ಧ್ವನಿ ಎತ್ತಿದ್ದಾಗ; ಎಸ್.ಎಲ್. ಭೈರಪ್ಪನವರೂ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಧ್ವನಿ ಎತ್ತಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಹಂಪಿ ಪರಿಸರದಲ್ಲೇ ತಲೆ ಎತ್ತಲಿದೆ. ತಾಯಿ ಭುವನೇಶ್ವರಿ ಸನ್ನಿಧಿಯಿಂದಲೇ ಕನ್ನಡದ ದೇಸಿ ಜ್ಞಾನ ವೃದ್ಧಿಸಲಿ ಎಂಬ ಆಶಯ ಹೊಂದಿದ್ದರು.

ಭೈರಪ್ಪನವರಿಗೆ ನಾಡೋಜ ಗೌರವ ಪದವಿ:

ಕನ್ನಡ ಸಾರಸ್ವತ ಲೋಕಕ್ಕೆ ಸಲ್ಲಿಸಿದ ಅನುಪಮ‌ ಸೇವೆ ಪರಿಗಣಿಸಿ; ಎಸ್. ಎಲ್. ಭೈರಪ್ಪನವರಿಗೆ ಕನ್ನಡ ವಿಶ್ವ ವಿದ್ಯಾಲಯ 2011ರಲ್ಲಿ ನಾಡೋಜ ಗೌರವ ಪದವಿ ನೀಡಿ ಗೌರವಿಸಿದೆ.

ಕನ್ನಡ ವಿಶ್ವವಿದ್ಯಾಲಯ ಜೊತೆಗೆ ಉತ್ತಮ ನಂಟು ಹೊಂದಿದ್ದ ಎಸ್.ಎಲ್. ಭೈರಪ್ಪನವರು; ಕನ್ನಡ ವಿವಿಯ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾರ್ಗದರ್ಶನ ಕೂಡ ನೀಡಿದ್ದಾರೆ. ಹಂಪಿಯ ಸ್ಮಾರಕಗಳ ವೀಕ್ಷಣೆಗೂ ಹಲವು ಬಾರಿ ಆಗಮಿಸಿರುವ ಎಸ್.ಎಲ್. ಭೈರಪ್ಪನವರು ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪ ಪರಂಪರೆ ಮೆಚ್ಚಿದ್ದರು. ಅಷ್ಟೇ ಅಲ್ಲದೇ, ಕನ್ನಡ ವಿಶ್ವವಿದ್ಯಾಲಯ ಕಡಿಮೆ ಅವಧಿಯಲ್ಲೇ ಅಗಾಧ ಪುಸ್ತಕಗಳನ್ನೂ ಹೊರ ತಂದಿರುವುದನ್ನೂ ಮೆಚ್ಚಿದ್ದರು.‌ ಕನ್ನಡ ವಿವಿಯ ಅಧ್ಯಾಪಕರೊಂದಿಗೆ ಕನ್ನಡ ಸಾಹಿತ್ಯದ ಕುರಿತು ಚರ್ಚಿಸುತ್ತಿದ್ದರು. ಕನ್ನಡ ವಿವಿ ಜೊತೆಗೆ ಮಾನಸಿಕವಾಗಿ ಸದಾ ಜೊತೆಗಿರುತ್ತಿದ್ದ ಭೈರಪ್ಪನವರು ಸೃಜನಶೀಲ ಸಾಹಿತ್ಯಕ್ಕೆ ಒತ್ತು ನೀಡಿರುವುದನ್ನು ಕನ್ನಡ ವಿವಿ ಕೂಡ ಸದಾ ಸ್ಮರಿಸುತ್ತದೆ ಎಂದು ಹೇಳುತ್ತಾರೆ ಕನ್ನಡ ವಿವಿಯ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ.

ತಮ್ಮ ಕಾದಂಬರಿಗಳ ಮೂಲಕ ಕನ್ನಡದ ಓದುಗರನ್ನು ಎಸ್.ಎಲ್.‌ಭೈರಪ್ಪನವರು ವಿಸ್ತರಿಸಿದ್ದರು. ಕನ್ನಡ ವಿಶ್ವವಿದ್ಯಾಲಯ ಹುಟ್ಟು, ಬೆಳವಣಿಗೆಗೆ ಸದಾ ಬೆಂಬಲವಾಗಿದ್ದರು. ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎನ್ನುತ್ತಾರೆ ಕನ್ನಡ ವಿವಿಯ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ.