ಸಾರಾಂಶ
ಕೃಷ್ಣ ಎನ್. ಲಮಾಣಿ
ಕನ್ನಡಪ್ರಭ ವಾರ್ತೆ ಹೊಸಪೇಟೆಕನ್ನಡ ನಾಡಿನ ಮುಕುಟಮಣಿಯಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕರೆಂಟ್ ಬಿಲ್ ಪಾವತಿಸಲು ಹಣ ಇಲ್ಲ!
ಈ ಹೊತ್ತಿನಲ್ಲಿ ವಿಜಯನಗರ ಜಿಲ್ಲೆಯ ಕಮಲಾಪುರ ಪುರಸಭೆ ಆಸ್ತಿ ತೆರಿಗೆ ಹಾಗೂ ನೀರಿನ ಕರ ಬರೋಬ್ಬರಿ ₹50 ಲಕ್ಷ ಪಾವತಿಸಲು ನೋಟಿಸ್ ನೀಡಿದ್ದು, ಕನ್ನಡ ವಿವಿ ಆಘಾತಕ್ಕೊಳಗಾಗಿದೆ.ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆಗೆ ಜನ್ಮ ತಳೆದಿರುವ ಕನ್ನಡ ವಿಶ್ವವಿದ್ಯಾಲಯದಲ್ಲೀಗ ಕರೆಂಟ್ ಬಿಲ್ ಪಾವತಿಸಲು ಕೂಡ ಹಣ ಇಲ್ಲದಾಗಿದೆ. ಈಗಾಗಲೇ ಕನ್ನಡ ವಿಶ್ವವಿದ್ಯಾಲಯದ ಕರೆಂಟ್ ಬಿಲ್ ₹೯೦ ಲಕ್ಷ ಇದೆ. ಬಾಕಿ ಪಾವತಿಗೆ ಜೆಸ್ಕಾಂ ಇಲಾಖೆ ದುಂಬಾಲು ಬಿದ್ದಿದ್ದು, ಪ್ರತಿ ತಿಂಗಳು ₹೧೦ ಲಕ್ಷ ಪಾವತಿಸುತ್ತಾ ಬಾಕಿಯಿಂದ ಮುಕ್ತಿ ಹೊಂದಲು ಕನ್ನಡ ವಿವಿ ಆಡಳಿತ ಮಂಡಳಿ ಯೋಜನೆ ರೂಪಿಸಿದೆ. ಏತನ್ಮಧ್ಯೆ ಕಮಲಾಪುರ ಪುರಸಭೆ ಕನ್ನಡ ವಿಶ್ವವಿದ್ಯಾಲಯದ ವಸತಿಗೃಹಗಳ ಆಸ್ತಿ ತೆರಿಗೆ ಹಾಗೂ ನೀರಿನ ಕರ ₹೫೦ ಲಕ್ಷ ಪಾವತಿಸಲು ಕನ್ನಡ ವಿವಿಗೆ ಈಗಾಗಲೇ ನೋಟಿಸ್ ನೀಡಿ ತಾಕೀತು ಮಾಡಿದೆ.
ಯಾವಾಗಿನಿಂದ ಬಾಕಿ?:ಕನ್ನಡ ವಿಶ್ವವಿದ್ಯಾಲಯ ವಸತಿಗೃಹಗಳ ಆಸ್ತಿ ಹಾಗೂ ನೀರಿನ ಕರ ೨೦೧೪-೧೫ನೇ ಸಾಲಿನಿಂದ ೨೦೨೩-೨೪ನೇ ಸಾಲಿನ ವರೆಗೆ ₹೫೦,೪೯,೭೬೨ ಬಾಕಿ ಉಳಿಸಿಕೊಂಡಿದೆ. ಕಮಲಾಪುರ ಪುರಸಭೆಗೆ ಕಾಲ ಕಾಲಕ್ಕೆ ಪಾವತಿಸಬೇಕಾದ ಕನ್ನಡ ವಿವಿ ಬಾಕಿ ಉಳಿಸಿಕೊಂಡಿರುವುದರಿಂದ; ಈಗ ದೊಡ್ಡ ಮೊತ್ತ ಪಾವತಿಸುವ ಸ್ಥಿತಿಗೆ ತಲುಪಿದೆ. ಇತ್ತ ಕನ್ನಡ ವಿವಿಯಲ್ಲಿ ನಯಾ ಪೈಸೆ ಇಲ್ಲ. ಹಾಗಾಗಿ ಕನ್ನಡ ವಿವಿ ಆಡಳಿತ ಮಂಡಳಿ ಸರ್ಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆಯತ್ತ ಮುಖ ಮಾಡಿದೆ.
ಕನ್ನಡ ವಿಶ್ವವಿದ್ಯಾಲಯ ಸಂಶೋಧನಾ ವಿವಿ ಆಗಿದೆ. ಹಾಗಾಗಿ ವಿವಿಯಲ್ಲಿ ಆಂತರಿಕ ಸಂಪನ್ಮೂಲ ಕೂಡ ಇಲ್ಲದಾಗಿದೆ. ಪಿಎಚ್‌ಡಿ, ಡಿಲಿಟ್ ಪದವಿಗಳಿಗೆ ಮಾತ್ರ ವಿವಿ ಸೀಮಿತಗೊಂಡಿರುವ ಹಿನ್ನೆಲೆಯಲ್ಲಿ ವಿವಿ ಬಳಿ ಅನುದಾನವೂ ಇಲ್ಲದಾಗಿದೆ. ರಾಜ್ಯ ಸರ್ಕಾರ ಈ ವಿವಿಗೆ ವಿಶೇಷ ಮನ್ನಣೆ ನೀಡುತ್ತಾ ಕಾಲ, ಕಾಲಕ್ಕೆ ಅನುದಾನ ನೀಡುತ್ತಾ ಬಂದಿದೆ. ಈ ವರ್ಷ ₹5 ಕೋಟಿ ಅನುದಾನ ನೀಡಬೇಕಾದ ಸರ್ಕಾರ ಬರೀ ₹೧.೫ ಕೋಟಿ ಅನುದಾನ ಘೋಷಣೆ ಮಾಡಿದೆ. ಮೊದಲ ಕಂತು ₹೫೦ ಲಕ್ಷ ಬಂದಿದ್ದು, ವಿವಿ ಗುತ್ತಿಗೆ ನೌಕರರ ವೇತನ, ವಿವಿ ನಿರ್ವಹಣೆಗೆ ಈ ಹಣ ಬಳಕೆಯಾಗಿದೆ. ಈಗ ಮತ್ತೆ ₹೫೦ ಲಕ್ಷ ಬಿಡುಗಡೆಯಾಗಲಿದ್ದು, ಈ ಹಂತದಲ್ಲೇ ಆಸ್ತಿ ತೆರಿಗೆ ನೋಟಿಸ್ ಬಂದಿದ್ದು, ಇತ್ತ ವಿವಿ ಗುತ್ತಿಗೆ ನೌಕರರ ಸಂಬಳ ಪಾವತಿಸಬೇಕೆ? ಕರೆಂಟ್ ಬಿಲ್, ಆಸ್ತಿ ತೆರಿಗೆ ಪಾವತಿಸಬೇಕೆ ಎಂಬ ಗೊಂದಲದಲ್ಲಿ ಮುಳುಗಿದೆ. ಕನ್ನಡ ವಿವಿ ನಿರ್ವಹಣೆಗೂ ಹಣ ಇಲ್ಲದ್ದರಿಂದ ರಾಜ್ಯ ಸರ್ಕಾರ ವಿಶೇಷ ಅನುದಾನ ಒದಗಿಸಿ ಆರ್ಥಿಕ ಸಂಕಷ್ಟದಿಂದ ವಿವಿ ಪಾರು ಮಾಡಬೇಕೆಂಬ ಬಿನ್ನವತ್ತಳೆಯನ್ನು ಈಗಾಗಲೇ ಸಿಎಂ ಸಿದ್ದರಾಮಯ್ಯ ಮತ್ತು ಉನ್ನತ ಶಿಕ್ಷಣ ಇಲಾಖೆಗೂ ಕನ್ನಡ ವಿವಿ ಕುಲಪತಿ ಡಾ. ಪರಮಶಿವಮೂರ್ತಿ ತಲುಪಿಸಿದ್ದಾರೆ.ಸಿಎಂಗೆ ಪತ್ರ:
ಕನ್ನಡ ವಿವಿಗೆ ಉಳಿದ ವಿವಿಗಳಂತೆ ಆದಾಯ ಮೂಲಗಳು ಇಲ್ಲದ್ದರಿಂದ ಈ ವಿವಿಗೆ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಮೂಲ ಸೌಕರ್ಯಕ್ಕೆ ₹೯.೨೧ ಕೋಟಿ ಒದಗಿಸಬೇಕು ಎಂದು ಅ. ೧೧ರಂದು ವಿಜಯನಗರ ಜಿಲ್ಲಾ ಉಸ್ತುವಾರಿ ಜಮೀರ್ ಅಹಮದ್ ಖಾನ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.ಚಿಂತನೆ:ಕರ್ನಾಟಕ ಸಂಭ್ರಮ- ೫೦ರ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲು ಸಿಎಂ ಸಿದ್ದರಾಮಯ್ಯನವರು ನ. ೨ರಂದು ಹಂಪಿಗೆ ಆಗಮಿಸಲಿದ್ದಾರೆ. ಈ ವೇಳೆ ಸಿಎಂಗೆ ಕನ್ನಡ ವಿಶ್ವವಿದ್ಯಾಲಯ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ವಿವರಿಸಲು ಕನ್ನಡ ವಿವಿ ಆಡಳಿತ ಮಂಡಳಿ ಚಿಂತನೆ ನಡೆಸಿದೆ.
ಸರ್ಕಾರಕ್ಕೆ ಪತ:್ರಕುಲಪತಿಕನ್ನಡ ವಿಶ್ವವಿದ್ಯಾಲಯ ₹೯೦ ಲಕ್ಷ ಕರೆಂಟ್ ಬಿಲ್ ಬಾಕಿ ಇದೆ. ವಿವಿ ಆಸ್ತಿ ತೆರಿಗೆ ಹಾಗೂ ನೀರಿನ ಕರ ₹೫೦ ಲಕ್ಷ ಪಾವತಿಸಲು ಕಮಲಾಪುರ ಪುರಸಭೆ ನೋಟಿಸ್ ನೀಡಿದೆ. ವಿವಿ ಬಳಿ ಹಣ ಇಲ್ಲ. ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ವಿವರಿಸಿ ಪತ್ರ ಬರೆಯಲಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ತಿಳಿಸಿದರು.ಮನವರಿಕೆ:ಕನ್ನಡ ವಿವಿ ಆಸ್ತಿ ಹಾಗೂ ನೀರಿನ ಕರ ಪಾವತಿಸಿಲ್ಲ. ಹಾಗಾಗಿ ಈಗಾಗಲೇ ₹೫೦ ಲಕ್ಷ ಪಾವತಿಸಲು ನೋಟಿಸ್ ನೀಡಲಾಗಿದೆ. ಜತೆಗೆ ಖುದ್ದು ಭೇಟಿ ನೀಡಿ ಮನವರಿಕೆ ಕೂಡ ಮಾಡಲಾಗಿದೆ ಎಂದು ಕಮಲಾಪುರ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.