ಸಾರಾಂಶ
ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಕೆಲಸ ಮಾಡುವ ಸ್ಥಳದಲ್ಲಿ ನೆಮ್ಮದಿ ಉಳಿಯಲು ಸಂಗೀತ ಕೇಳಬೇಕಾದ ಅಗತ್ಯವಿದೆ.
ಹೊಸಪೇಟೆ: ಡಾ.ಚಂದ್ರಶೇಖರ ಕಂಬಾರರು ಕನ್ನಡ ವಿಶ್ವವಿದ್ಯಾಲಯವನ್ನು ಜಾತ್ಯತೀತವಾಗಿ ರೂಪಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ತಾರತಮ್ಯ ಕಲಿಸುವ ವಿಶ್ವವಿದ್ಯಾಲಯವಲ್ಲ ಎಂದು ಲಲಿತಕಲಾ ನಿಕಾಯದ ಡೀನ್ ಡಾ.ಶಿವಾನಂದ ಎಸ್. ವಿರಕ್ತಮಠ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದಿಂದ ಶನಿವಾರ ಷಡ್ಜ ವೇದಿಕೆಯಲ್ಲಿ ಏರ್ಪಡಿಸಿದ್ದ ಸ್ನಾತಕ ಹಾಗೂ ಸ್ನಾತಕೋತ್ತರ ಮೊದಲನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸ್ನಾತಕೋತ್ತರ ಕೊನೆಯ ಸೆಮಿಸ್ಟರ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಜೊತೆಗೆ ಮಕ್ಕಳ ಮತ್ತು ಪಾಲಕರ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗೀತಕ್ಕಿರುವ ಅದ್ಭುತವಾದ ಚೈತನ್ಯ ಶಕ್ತಿಯೊಂದಿಗೆ ವಿದ್ಯಾರ್ಥಿಗಳು ಅನುಸಂಧಾನ ಮಾಡಬೇಕು ಎಂದರು.ಅಧ್ಯಯನಾಂಗದ ನಿರ್ದೇಶಕ ಡಾ.ಅಮರೇಶ ಯತಗಲ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಕೆಲಸ ಮಾಡುವ ಸ್ಥಳದಲ್ಲಿ ನೆಮ್ಮದಿ ಉಳಿಯಲು ಸಂಗೀತ ಕೇಳಬೇಕಾದ ಅಗತ್ಯವಿದೆ. ಸಂಗೀತದಿಂದ ನಮ್ಮ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ವಿದ್ಯಾರ್ಥಿಗಳು ಜಾತಿ, ಧರ್ಮ ಮೀರಿ ಬೆಳೆಯಬೇಕು. ಸಂಸ್ಥೆಯ ನಿಯಮಗಳನ್ನು ಪಾಲಿಸಬೇಕು ಎಂದರು.
ಸಂಗೀತ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಸಂಗೀತ ವಿಭಾಗದಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿಗಳ ಪಾಲಕರ ಸಭೆ ನಡೆಯುತ್ತಿದೆ. ಸಂಗೀತ ವಿಭಾಗವು ಗಾಯನದೊಂದಿಗೆ ಸಂಶೋಧನೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ. ಜ್ಞಾನದ ಜೊತೆಗೆ ವಿದ್ಯಾರ್ಥಿಗಳ ಉಪಜೀವನಕ್ಕೆ ಬೇಕಾದ ಹಲವು ಸಾಧ್ಯತೆಗಳನ್ನು ಕುಲಪತಿಯವರು ಕಲ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ನೃತ್ಯ ಅಧ್ಯಯನಕ್ಕೆ ಪ್ರವೇಶ ಕಲ್ಪಿಸಿಕೊಡಲಾಗುತ್ತದೆ ಎಂದರು.ವಿದ್ಯಾರ್ಥಿಗಳಾದ ಮಾತಾಜಿ, ಶರಣಮ್ಮ, ಶರಣಬಸಪ್ಪ, ರಾಜೇಶ ಹಳೆಮನಿ, ಲಾವಣ್ಯ ಕೊರ್ತಿ, ಪೋಷಕರಾದ ಯಲ್ಲಪ್ಪ ಭಂಡಾರಧಾರ್, ಗೋವರ್ಧನಯ್ಯ, ಶೋಭಾ ಮಾತನಾಡಿದರು. ವಿದ್ಯಾರ್ಥಿ ಹರೀಶ ಭಂಡಾರಿ, ಅಧ್ಯಾಪಕರಾದ ಡಾ.ತಿಮ್ಮಣ್ಣ ಭೀಮರಾಯ ನಿರ್ವಹಿಸಿದರು.