ಸಾರಾಂಶ
ಧಾರವಾಡ:
ಬುದ್ಧ, ಬಸವ, ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಹಾಗೂ ಕುವೆಂಪು ಅವರ ಚಿಂತನೆಗಳ ಕುರಿತಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಭಾರತೀಯ ಬೌದ್ಧಮಹಾ ಸಭಾದ ಯುವ ಘಟಕ ಜಂಟಿಯಾಗಿ ಫೆ. 6ರಿಂದ 8ರ ವರೆಗೆ ಮೂರು ದಿನ ರಂಗಾಯಣದ ಸಾಂಸ್ಕೃತಿಕ ಭವನದಲ್ಲಿ ಕನ್ನಡ ವಿಚಾರ ಸಾಹಿತ್ಯ ದರ್ಶನ ಕಮ್ಮಟ ಹಮ್ಮಿಕೊಂಡಿದೆ ಎಂದು ಅಕಾಡೆಮಿ ಸದಸ್ಯ, ಸಂಚಾಲಕ ಡಾ. ಅರ್ಜುನ ಗೊಳಸಂಗಿ ಹೇಳಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಯುವಜನರಲ್ಲಿ ವೈಚಾರಿಕ ಚಿಂತನೆಯ ಬೀಜಗಳನ್ನು ಬಿತ್ತುವುದು, ಪ್ರಜಾ ಪ್ರಭುತ್ವ-ಬಹುತ್ವದ ಚಿಂತನೆಯ ವಿಷಯಗಳ ಚರ್ಚೆ-ಸಂವಾದ ಈ ಕಮ್ಮಟದಲ್ಲಿ ನಡೆಯಲಿದೆ. ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ ಹಾಗೂ ಕುವೆಂಪು ಅವರ ಸಮತಾವಾದ-ಮಾನವತವಾದ ವೈಚಾರಿಕ ಚಿಂತನೆಗಳು ಇಲ್ಲಿ ಇನ್ನಷ್ಟು ಅನಾವರಣಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸೇರಿದಂತೆ ಚಿಂತಕರು ಭಾಗವಹಿಸಲಿದ್ದಾರೆ ಎಂದರು.
ಉದ್ಘಾಟನೆ:ಫೆ. 6ರಂದು ಬೆಳಗ್ಗೆ 10.30ಕ್ಕೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಕಮ್ಮಟ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಭಾರತೀಯ ಬೌದ್ಧಮಹಾ ಸಭಾ ಅಧ್ಯಕ್ಷ ದರ್ಶನ್ ಸೋಮಶೇಖರ ವಹಿಸುವರು, ತಾವು ಪ್ರಾಸ್ತಾವಿಕ ಮಾತನಾಡಲಿದ್ದು, ಅತಿಥಿಗಳಾಗಿ ಚಿಂತಕ ಡಾ. ಸಿದ್ದನಗೌಡ ಪಾಟೀಲ, ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಇರಲಿದ್ದಾರೆ. ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್., ಹಾಗೂ ಶಿಬಿರದ ನಿರ್ದೇಶಕ ಡಾ. ಅಪ್ಪಗೆರೆ ಸೋಮಶೇಖರ, ಸಹ ನಿರ್ದೇಶಕರಾದ ಬಿ.ಆರ್. ಕೃಷ್ಣಯ್ಯ ಮತ್ತು ಎನ್. ಎನ್. ಗಾಳೆಮ್ಮನವರ ಉಪಸ್ಥಿತರಿರುವರು ಎಂದರು.
ಗೋಷ್ಠಿಗಳು:ಉದ್ಘಾಟನೆ ನಂತರ ಮೂರು ದಿನ ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾರೆ. ಮುಖಾಮುಖಿ ಗೋಷ್ಠಿ, ಕುವೆಂಪು ಅವರ ಚಿಂತನೆ ನೆಲೆಗಳು, ಬಸವಾದಿ ಶರಣರ-ಶರಣಿಯರ ದಾರ್ಶನಿಕ ನೆಲೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜುರುಗಲಿವೆ. ಫೆ. 7ರಂದು ಶಿಬಿರಾರ್ಥಿಗಳೊಂದಿಗೆ ಮೊದಲ ದಿನದ ಚಿಂತನೆಗಳ ಮಂಥನ, ಗಾಂಧೀಜಿಯವರ ಹೋರಾಟ ಮತ್ತು ಚಿಂತನೆಗಳು, ಡಾ. ಬಿ.ಆರ್. ಅಂಬೇಡ್ಕರ್ ಹೋರಾಟ ಮತ್ತು ಚಿಂತನೆಗಳು, ಶಿಬಿರಾರ್ಥಿಗಳಿಂದ ವಿಷಯ ಮಂಡನೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಗೊಳಸಂಗಿ ತಿಳಿಸಿದರು.
ಫೆ. 8ರಂದು ಸಾಂವಿಧಾನಿಕ ಮೌಲ್ಯಗಳು ಉಪನ್ಯಾಸ, ಬುದ್ಧನ ದಾರ್ಶನಿಕ ದಾರಿಗಳು ಹಾಗೂ ಸಂಜೆ ಸಮಾರೋಪ ನುಡಿಯನ್ನು ಕವಿ ಸವಿತಾ ನಾಗಭೂಷಣ ಹೇಳಲಿದ್ದು, ಅಧ್ಯಕ್ಷತೆಯನ್ನು ದರ್ಶನ್ ಸೋಮಶೇಖರ್ ವಹಿಸುವರು ಎಂದರು.ಸುದ್ದಿಗೋಷ್ಠಿಯಲ್ಲಿ ಸಿದ್ಧರಾಮ ಹಿಪ್ಪರಗಿ, ಶಶಿಕಲಾ ಹುಡೇದ, ಎನ್. ಎನ್. ಗಾಳೆಮ್ಮನವರ ಇದ್ದರು.